ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ತೆಂಡೂಲ್ಕರ್ ತಮ್ಮ 30ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದು, ಮಗಳು ಸಾರಾ ತೆಂಡೂಲ್ಕರ್ ಅವರ ವಿವಾಹದ ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಬೆಂಗಳೂರು: ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ಅವರ ಪತ್ನಿ ಅಂಜಲಿ ತೆಂಡೂಲ್ಕರ್ ತಮ್ಮ ಮೇ 26ರಂದು ತಮ್ಮ 30ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಗಳು ಸಾರಾ ತೆಂಡೂಲ್ಕರ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಶೇಷ ಕ್ಷಣದ ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ಅವರ ವಿವಾಹದ ಅಪರೂಪದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ವಿಭಿನ್ನವಾಗಿ ತಮ್ಮ ತಂದೆ-ತಾಯಿಗೆ ಸಾರಾ ವಿವಾಹ ವಾರ್ಷಿಕೋತ್ಸವದ ಶುಭಾಶಯ ಕೋರಿದ್ದಾರೆ.

ಸಾರಾ ತೆಂಡೂಲ್ಕರ್ ಹಂಚಿಕೊಂಡ ಈ ಅಪರೂಪದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಅವುಗಳು ಸಚಿನ್ ಮತ್ತು ಅಂಜಲಿ ಅವರ ವಿವಾಹದ ಅಪರೂಪದ ಕ್ಷಣಗಳನ್ನು ಒಳಗೊಂಡಿವೆ. ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ಅವರು 1995 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸಚಿನ್ ಹಾಗೂ ಅಂಜಲಿ ಅವರ ಮದುವೆ ಸಮಾರಂಭವು ಕೆಲವು ಆಪ್ತ ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ನೆರವೇರಿತ್ತು. ಇದೀಗ ಈ ಜೋಡಿ 30 ವರ್ಷಗಳ ಸುದೀರ್ಘ ಹಾಗೂ ಯಶಸ್ವಿ ಜತೆಯಾಟ ನಿಭಾಯಿಸಿ ಹಲವು ಯುವ ಜೋಡಿಗಳಿಗೆ ಮಾದರಿಯಾಗಿದ್ದಾರೆ. ಇವರಿಬ್ಬರು ಒಬ್ಬರನ್ನೊಬ್ಬರು ಬೆಂಬಲಿಸಿಕೊಂಡು ಬಂದಿದ್ದಾರೆ.

ಈ ವಿಶೇಷ ಕ್ಷಣವನ್ನು ಸಾರಾ ತೆಂಡೂಲ್ಕರ್ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅವರು ತಮ್ಮ ಪೋಷಕರಿಗೆ ಶುಭಾಶಯಗಳನ್ನು ತಿಳಿಸಿ, ಅವರ ಪ್ರೀತಿಯ ಕಥೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಈ ಅಪ್ರತಿಮ ಜೋಡಿಯು 30ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ. ನೀವು ನಮಗೆಲ್ಲರಿಗೂ ಸ್ಪೂರ್ತಿ ನೀಡುವ ಪ್ರೀತಿಯಿಂದ ತುಂಬಿದ ಜೀವನವನ್ನು ನಿರ್ಮಿಸಿಕೊಟ್ಟಿದ್ದೀರ ಎಂದು ಸಾರಾ ತೆಂಡುಲ್ಕರ್ ಬರೆದುಕೊಂಡಿದ್ದಾರೆ.

View post on Instagram

ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ಅವರು ತಮ್ಮ ವೈವಾಹಿಕ ಜೀವನದಲ್ಲಿ ಪರಸ್ಪರ ಬೆಂಬಲಿಸಿಕೊಂಡು ಬರುವ ಮೂಲಕ ಹಲವರಿಗೆ ಮಾದರಿಯಾಗಿದ್ದಾರೆ. ಅವರು ತಮ್ಮ ಮಕ್ಕಳಿಗೆ ಉತ್ತಮ ಪೋಷಕರಾಗಿ, ಮತ್ತು ಸಮಾಜಕ್ಕೆ ಪ್ರೇರಣೆಯಾದ ದಂಪತಿಗಳಾಗಿ ಗುರುತಿಸಿಕೊಂಡಿದ್ದಾರೆ.

ವೃತ್ತಿಪರ ವೈದ್ಯೆಯಾಗಿದ್ದ ಅಂಜಲಿ, ಸಚಿನ್ ಅವರನ್ನು ಮದುವೆಯಾಗುತ್ತಿದ್ದಂತೆಯೇ ತಮ್ಮ ವೃತ್ತಿಬದುಕನ್ನೇ ತ್ಯಾಗ ಮಾಡಿದರು. ಈ ಸುಂದರ ದಂಪತಿಗಳಿಗೆ ಸಾರಾ ತೆಂಡುಲ್ಕರ್ ಮಾತ್ರವಲ್ಲದೇ ಅರ್ಜುನ್ ತೆಂಡುಲ್ಕರ್ ಎನ್ನುವ ನೀಳಕಾಯದ ಮಗನಿದ್ದಾನೆ. ಅರ್ಜುನ್ ತಮ್ಮ ತಂದೆಯ ಹೆಜ್ಜೆಗುರುತುಗಳನ್ನೇ ಹಿಂಬಾಲಿಸುತ್ತಿದ್ದು, ವೃತ್ತಿಪರ ಕ್ರಿಕೆಟಿಗನಾಗಿ ಬದುಕು ಕಟ್ಟಿಕೊಳ್ಳುವತ್ತ ಹೆಜ್ಜೆಹಾಕುತ್ತಿದ್ದಾನೆ. ಅರ್ಜುನ್ ತೆಂಡೂಲ್ಕರ್ ಆರಂಭದಲ್ಲಿ ವಿವಿಧ ವಯೋಮಾನದ ಕ್ರಿಕೆಟ್‌ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ಅರ್ಜುನ್ ರಣಜಿ ಟ್ರೋಫಿ ಟೂರ್ನಿಯಲ್ಲಿ ಗೋವಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಇನ್ನೊಂದೆಡೆ ನ್ಯೂಟ್ರಿಷಿಯನಿಸ್ಟ್ ಆಗಿ ಗುರುತಿಸಿಕೊಂಡಿರುವ ಸಾರಾ ತೆಂಡುಲ್ಕರ್, ಕಳೆದ ಜನವರಿ 2025ರಲ್ಲಿ ಸಚಿನ್ ತೆಂಡೂಲ್ಕರ್ ಫೌಂಡೇಷನ್‌ನ ಡೈರೆಕ್ಟರ್ ಆಗಿ ನೇಮಕವಾಗಿದ್ದಾರೆ. ದಿ ಸಚಿನ್ ತೆಂಡೂಲ್ಕರ್ ಫೌಂಡೇಷನ್ ಅನ್ನು ಸಚಿನ್ ಹಾಗೂ ಅಂಜಲಿ ಜತೆಯಾಗಿ 2019ರಲ್ಲಿ ಸ್ಥಾಪಿಸಿದರು. ಈ ಫೌಂಡೇಷನ್‌ನ ಮುಖ್ಯ ಗುರಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು, ಸೌಲಭ್ಯವಂಚಿತ ಮಕ್ಕಳಿಗೆ ಕ್ರೀಡೆ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಗುರಿ ಹೊಂದಿದೆ.

ಸಚಿನ್‌ ತೆಂಡೂಲ್ಕರ್ ಫೌಂಡೇಷನ್ ವಿವಿಧ ಸರ್ಕಾರೇತರ ಸಂಘಸಂಸ್ಥೆಗಳ ಜತೆಗೂಡಿ ಒಂದು ಲಕ್ಷಕ್ಕೂ ಅಧಿಕ ಮಂದಿಯ ಬದುಕಿನಲ್ಲಿ ಹೊಸ ಬದಲಾವಣೆ ತಂದಿದೆ. ಇನ್ನು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಬಳಿಕ ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸಚಿನ್ ತೆಂಡೂಲ್ಕರ್, ಯುನಿಸೆಫ್ ಜತೆಗೂಡಿ ಸೌಲಭ್ಯವಂಚಿತ ಮಕ್ಕಳ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿದ್ದಾರೆ.