ಐಪಿಎಲ್‌ ಟೂರ್ನಿಗೆ ಪಾದಾರ್ಪಣೆ ಮಾಡಿದ ಅರ್ಜುನ್ ತೆಂಡುಲ್ಕರ್ಸಹೋದರನಿಗೆ ಭಾವನಾತ್ಮಕ ಸಂದೇಶ ರವಾನಿಸಿದ ಸಾರಾ ತೆಂಡುಲ್ಕರ್ಕೆಕೆಆರ್‌ ಎದುರು ಭರ್ಜರಿ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್

ಮುಂಬೈ(ಏ.17): ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಪುತ್ರ, ಅರ್ಜುನ್ ತೆಂಡುಲ್ಕರ್ ಕೊನೆಗೂ ಮುಂಬೈ ಇಂಡಿಯನ್ಸ್‌ ಪರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಮೂರು ಆವೃತ್ತಿಗಳಿಂದಲೂ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಅರ್ಜುನ್ ತೆಂಡುಲ್ಕರ್, ಇದೇ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್‌ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. 

ಮುಂಬೈ ತಂಡವನ್ನು ತೊರೆದು ದೇಶಿ ಕ್ರಿಕೆಟ್‌ನಲ್ಲಿ ಗೋವಾ ತಂಡದ ಪರ ಪ್ರಥಮ ದರ್ಜೆ ಪಂದ್ಯವನ್ನಾಡಿದ್ದ ಅರ್ಜುನ್ ತೆಂಡುಲ್ಕರ್, ತಮ್ಮ ಅದ್ಭುತ ಆಲ್ರೌಂಡ್ ಪ್ರದರ್ಶನದ ಮೂಲಕ ಮಿಂಚಿದ್ದರು. ಇದೀಗ ಏಪ್ರಿಲ್ 16ರಂದು ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ ಅರ್ಜುನ್ ತೆಂಡುಲ್ಕರ್‌, ಐಪಿಎಲ್‌ಗೆ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾದರು. ಮುಂಬೈ ಇಂಡಿಯನ್ಸ್ ತಂಡದ ಕಾಯಂ ನಾಯಕ ರೋಹಿತ್ ಶರ್ಮಾ, ಡೆಬ್ಯೂ ಕ್ಯಾಪ್ ನೀಡುವ ಮೂಲಕ ಅರ್ಜುನ್‌ ತೆಂಡುಲ್ಕರ್ ಅವರನ್ನು ತಮ್ಮ ತಂಡಕ್ಕೆ ಬರಮಾಡಿಕೊಂಡರು.

ಅರ್ಜುನ್ ತೆಂಡುಲ್ಕರ್, ತಮ್ಮ ಪಾದಾರ್ಪಣೆ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ಪರ ಮೊದಲ ಓವರ್‌ ಬೌಲಿಂಗ್ ಮಾಡಿ ಗಮನ ಸೆಳೆದರು. ಸ್ವಿಂಗ್‌ ಬೌಲಿಂಗ್‌ ಮೂಲಕ ಉತ್ತಮ ಪ್ರದರ್ಶನ ತೋರಿದ ಅರ್ಜುನ್ ತೆಂಡುಲ್ಕರ್ ಎರಡು ಓವರ್‌ ಬೌಲಿಂಗ್ ಮಾಡಿ ಕೇವಲ 17 ರನ್ ನೀಡಿದರು. ಆದರೆ ವಿಕೆಟ್ ಕಬಳಿಸಲು ಅರ್ಜುನ್‌ಗೆ ಸಾಧ್ಯವಾಗಲಿಲ್ಲ. ಅರ್ಜುನ್ ತೆಂಡುಲ್ಕರ್ ಅವರ ಬೌಲಿಂಗ್, ಕ್ರಿಕೆಟ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಚಾಂಪಿಯನ್‌ ತಂದೆಗಿದು ಹೆಮ್ಮೆಯ ಕ್ಷಣ: ಅರ್ಜುನ್‌ ತೆಂಡುಲ್ಕರ್ ಐಪಿಎಲ್ ಪಾದಾರ್ಪಣೆ ಗುಣಗಾನ ಮಾಡಿದ ದಾದಾ

ಇನ್ನು ಅರ್ಜುನ್ ತೆಂಡುಲ್ಕರ್ ಹಿರಿಯ ಸಹೋದರಿ ಸಾರಾ ತೆಂಡುಲ್ಕರ್, ತಮ್ಮನ ಪಂದ್ಯವನ್ನು ವಾಂಖೇಡೆ ಮೈದಾನದಲ್ಲಿ ಬಂದು ಕಣ್ತುಂಬಿಕೊಂಡರು. ಇನ್ನು ಇದೇ ವೇಳೆ ತಮ್ಮ ಸೋದರ ಮುಂಬೈ ತಂಡದ ಕ್ಯಾಪ್ ಪಡೆಯುತ್ತಿರುವ ಕ್ಷಣದ ಫೋಟೋವನ್ನು ಹಂಚಿಕೊಳ್ಳುವುದರ ಜತೆಗೆ ಇದು ನಿನ್ನ ಸಹೋದರಿಯಾಗಿ ನನಗೆ ಅತ್ಯಂತ ಸಂತೋಷದ ಕ್ಷಣ ಎಂದು ಬರೆದು ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಶೇರ್ ಮಾಡಿದ್ದಾರೆ.

ಸತತ ಎರಡನೇ ಗೆಲುವು ದಾಖಲಿಸಿದ ಮುಂಬೈ ಇಂಡಿಯನ್ಸ್‌

ಮುಂಬೈ ಇಂಡಿಯನ್ಸ್‌ ಈ ಬಾರಿಯೂ ನಿಧಾನವಾಗಿ ಲಯಕ್ಕೆ ಮರಳುತ್ತಿರುವಂತೆ ಕಾಣುತ್ತಿದೆ. ಎರಡು ಸೋಲುಗಳೊಂದಿಗೆ ಟೂರ್ನಿ ಆರಂಭಿಸಿದ್ದ ಮುಂಬೈ ಈಗ ಸತತ 2 ಜಯಗಳೊಂದಿಗೆ ಅಂಕಪಟ್ಟಿಯಲ್ಲಿ ಮೇಲೇರಿದೆ. 3ನೇ ಸೋಲು ಕಂಡಿರುವ ಕೆಕೆಆರ್‌, ಒತ್ತಡಕ್ಕೆ ಸಿಲುಕಿದೆ.

ವೆಂಕಟೇಶ್‌ ಅಯ್ಯರ್‌ರ ಏಕಾಂಗಿ ಹೋರಾಟ ನಡೆಸಿದ ಪರಿಣಾಮ ಕೆಕೆಆರ್‌ 20 ಓವರಲ್ಲಿ 6 ವಿಕೆಟ್‌ಗೆ 185 ರನ್‌ ಕಲೆಹಾಕಿತು. ಆದರೆ ಬೌಲರ್‌ಗಳು ನಿರೀಕ್ಷೆ ಉಳಿಸಿಕೊಳ್ಳಲಿಲ್ಲ. ಇಶಾನ್‌ ಕಿಶನ್‌ ಪವರ್‌-ಪ್ಲೇನಲ್ಲಿ ನೀಡಿದ ಸ್ಫೋಟಕ ಆರಂಭ, ಮುಂಬೈ 5 ವಿಕೆಟ್‌ ಕಳೆದುಕೊಂಡು 17.4 ಓವರಲ್ಲೇ ಗುರಿ ತಲುಪುವಂತೆ ಮಾಡಿತು.

ಮುಂಬೈ ವುಮೆನ್ಸ್ ತಂಡದ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದ ಮುಂಬೈ ಇಂಡಿಯನ್ಸ್‌:

ಹೌದು, ಮುಂಬೈ ಇಂಡಿಯನ್ಸ್‌ ತಂಡವು ಇಂದು ಕೆಕೆಆರ್ ಎದುರಿನ ಪಂದ್ಯದಲ್ಲಿ ವುಮೆನ್ಸ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ತೊಟ್ಟ ಜೆರ್ಸಿಯನ್ನು ತೊಟ್ಟು ಕಣಕ್ಕಿಳಿಯುವ ಮೂಲಕ ವಿಶೇಷ ಸಂದೇಶವನ್ನು ಸಾರಿತು. ಎಲ್ಲರಿಗೂ ಶಿಕ್ಷಣ ಮತ್ತು ಕ್ರೀಡೆ ಎನ್ನುವ ಘೋಷವಾಕ್ಯದೊಂದಿಗೆ ಮುಂಬೈ ತಂಡವು ಈ ಪಂದ್ಯದಲ್ಲಿ ಕಣಕ್ಕಿಳಿದಿತ್ತು. ರಿಲಯನ್ಸ್‌ ಫೌಂಡೇಶನ್‌ ಅವರ ಮುತುವರ್ಜಿಯಿಂದ ಈ ಕ್ರಮಕ್ಕೆ ಮುಂದಾಗಿದ್ದು, ಸುಮಾರು 19 ಸಾವಿರ ಬಾಲಕಿಯರು ಮುಂಬೈನ ವಾಂಖೇಡೆ ಮೈದಾನದಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವನ್ನು ವೀಕ್ಷಿಸಿದರು.