* ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಅರ್ಜುನ್ ತೆಂಡುಲ್ಕರ್* ಕೆಕೆಆರ್ ವಿರುದ್ದ ಮುಂಬೈ ಪರ ಅರ್ಜುನ್ ಐಪಿಎಲ್‌ಗೆ ಪಾದಾರ್ಪಣೆ* ಅರ್ಜುನ್ ತೆಂಡುಲ್ಕರ್‌ಗೆ ಶುಭ ಹಾರೈಸಿದ ಕ್ರಿಕೆಟ್ ದಿಗ್ಗಜರು
ಬೆಂಗಳೂರು(ಏ.17): ಸಾಕಷ್ಟು ಕಾಯುವಿಕೆಯ ಬಳಿಕ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್, ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಭಾನುವಾರ ನಡೆದ ಮಧ್ಯಾಹ್ನದ ಮೊದಲ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ ಕಣಕ್ಕಿಳಿಯುವ ಮೂಲಕ ಅರ್ಜುನ್ ತೆಂಡುಲ್ಕರ್, ಐಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿದ್ದಾರೆ.
ಅರ್ಜುನ್ ತೆಂಡುಲ್ಕರ್, ಕಳೆದ ಕೆಲ ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು. ಆದರೆ ಮುಂಬೈ ಇಂಡಿಯನ್ಸ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು. ಆದರೆ ಇದೀಗ ತವರಿನ ವಾಂಖೇಡೆ ಮೈದಾನದಲ್ಲಿ ಅರ್ಜುನ್ ತೆಂಡುಲ್ಕರ್, ಐಪಿಎಲ್‌ಗೆ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅರ್ಜುನ್ ತೆಂಡುಲ್ಕರ್, ಕಳೆದ ವರ್ಷವಷ್ಟೇ ದೇಶಿ ಕ್ರಿಕೆಟ್‌ನಲ್ಲಿ ಮುಂಬೈ ತಂಡವನ್ನು ತೊರೆದು ಗೋವಾದತ್ತ ಮುಖಮಾಡಿದ್ದರು. ಇನ್ನು ಗೋವಾ ತಂಡದ ಪರವೇ ಅರ್ಜುನ್ ತೆಂಡುಲ್ಕರ್, ಚೊಚ್ಚಲ ಪ್ರಥಮ ದರ್ಜೆ ಶತಕ ಸಿಡಿಸುವ ಮೂಲಕ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಅನಾವರಣ ಮಾಡಿದ್ದರು.
ಬೌಲಿಂಗ್ ಆಲ್ರೌಂಡರ್ ಆಗಿರುವ ಅರ್ಜುನ್ ತೆಂಡುಲ್ಕರ್, ಇದುವರೆಗೂ 7 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 12 ವಿಕೆಟ್ ಕಬಳಿಸಿದ್ದಾರೆ. ಇದಷ್ಟೇ ಅಲ್ಲದೇ ಬ್ಯಾಟಿಂಗ್‌ನಲ್ಲಿ 24.77ರ ಬ್ಯಾಟಿಂಗ್ ಸರಾಸರಿಯಲ್ಲಿ 223 ರನ್ ಗಳಿಸಿದ್ದಾರೆ. 23 ವರ್ಷದ ಅರ್ಜುನ್ ತೆಂಡುಲ್ಕರ್, ಇದವರೆಗೂ 9 ಟಿ20 ಪಂದ್ಯಗಳನ್ನಾಡಿ 12 ವಿಕೆಟ್ ಕಬಳಿಸಿದ್ದಾರೆ.
IPL 2023 ಇಶಾನ್-ಸೂರ್ಯ ಮಿಂಚಿನ ಬ್ಯಾಟಿಂಗ್; ಕೆಕೆಆರ್ ಎದುರು ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್
ಇದೀಗ ಅರ್ಜುನ್ ತೆಂಡುಲ್ಕರ್ ಐಪಿಎಲ್‌ಗೆ ಪಾದಾರ್ಪಣೆ ಮಾಡುತ್ತಿದ್ದಂತೆಯೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು, ಯುವ ಕ್ರಿಕೆಟಿಗ ಅರ್ಜುನ್‌ಗೆ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.
ಕೊನೆಗೂ ಮುಂಬೈ ಪರ ಅರ್ಜುನ್ ಆಡುತ್ತಿರುವುದನ್ನು ನೋಡಿದರೆ, ಖುಷಿಯಾಗುತ್ತಿದೆ. ಚಾಂಪಿಯನ್ ತಂದೆ ಖಂಡಿತವಾಗಿಯೂ ಹೆಮ್ಮೆಪಡುತ್ತಿರಬಹುದು. ಆತನಿಗೆ ಶುಭವಾಗಲಿ ಎಂದು ಟೀಂ ಇಂಡಿಯಾ ಮಾಜಿ ನಾಯಕ ನಾಯಕ ಸೌರವ್ ಗಂಗೂಲಿ ಶುಭ ಹಾರೈಸಿದ್ದಾರೆ.
ಅರ್ಜುನ್ ತೆಂಡುಲ್ಕರ್‌ಗೆ ಶುಭಾಶಯಗಳು. ಸಚಿನ್ ತೆಂಡುಲ್ಕರ್ ಹಾಗೂ ಅವರ ಕುಟುಂಬಕ್ಕೆ ಎಂತಹ ಹೆಮ್ಮೆಯ ಕ್ಷಣವಿದು. ನಾನು ಆತ ಬೆಳೆಯುವುದನ್ನು ನೋಡಿದ್ದೇನೆ, ಇದೀಗ ತನ್ನ ಕನಸಿನ ತಂಡವಾದ ಮುಂಬೈ ಜೆರ್ಸಿ ತೊಟ್ಟು ಐಪಿಎಲ್ ಆಡುವ ಕನಸು ನನಸಾಗಿಸಿಕೊಂಡಿದ್ದಾನೆ. ಚೆನ್ನಾಗಿ ಆಡು ಅರ್ಜುನ್ ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿ ಶುಭಕೋರಿದ್ದಾರೆ.
ಇನ್ನು ಇರ್ಫಾನ್ ಪಠಾಣ್ ಟ್ವೀಟ್ ಮಾಡಿ, 10 ವರ್ಷಗಳ ಬಳಿಕ ತಂದೆ ಹಾಗೂ ಮಗ ಒಂದೇ ಫ್ರಾಂಚೈಸಿಯ ಪರ ಕಾಣಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿದು ಐತಿಹಾಸಿಕ ಕ್ಷಣ. ಒಳ್ಳೆಯದಾಗಲಿ ಅರ್ಜುನ್ ತೆಂಡುಲ್ಕರ್ ಎಂದು ಶುಭ ಹಾರೈಸಿದ್ದಾರೆ.
ಅರ್ಜುನ್ ಪಾದಾರ್ಪಣೆ
2 ವರ್ಷಗಳ ಹಿಂದೆ ಮುಂಬೈ ತಂಡ ಸೇರಿದ್ದ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ಕೊನೆಗೂ ಐಪಿಎಲ್ ಪಾದಾರ್ಪಣೆ ಮಾಡಿದರು. ಈ ಮೂಲಕ ಐಪಿಎಲ್‌ನಲ್ಲಿ ಆಡಿದ ಮೊದಲ ತಂದೆ-ಮಗ ಜೋಡಿ ಎನಿಸಿಕೊಂಡರು. ಅರ್ಜುನ್ ತೆಂಡುಲ್ಕರ್ ಎರಡು ಓವರ್ ಬೌಲಿಂಗ್ ಮಾಡಿ 17 ರನ್ ನೀಡಿದರು. ಆದರೆ ಯಾವುದೇ ವಿಕೆಟ್ ಕಬಳಿಸಲು ಯಶಸ್ವಿಯಾಗಲಿಲ್ಲ.
ಲಯ ಕಂಡುಕೊಂಡ ಮುಂಬೈ ಇಂಡಿಯನ್ಸ್:
ಮುಂಬೈ ಇಂಡಿಯನ್ಸ್ ಈ ಬಾರಿಯೂ ನಿಧಾನವಾಗಿ ಲಯಕ್ಕೆ ಮರಳುತ್ತಿರುವಂತೆ ಕಾಣುತ್ತಿದೆ. ಎರಡು ಸೋಲುಗಳೊಂದಿಗೆ ಟೂರ್ನಿ ಆರಂಭಿಸಿದ್ದ ಮುಂಬೈ ಈಗ ಸತತ 2 ಜಯಗಳೊಂದಿಗೆ ಅಂಕಪಟ್ಟಿಯಲ್ಲಿ ಮೇಲೇರಿದೆ. 3ನೇ ಸೋಲು ಕಂಡಿರುವ ಕೆಕೆಆರ್, ಒತ್ತಡಕ್ಕೆ ಸಿಲುಕಿದೆ.
ವೆಂಕಟೇಶ್ ಅಯ್ಯರ್‌ರ ಏಕಾಂಗಿ ಹೋರಾಟ ನಡೆಸಿದ ಪರಿಣಾಮ ಕೆಕೆಆರ್ 20 ಓವರಲ್ಲಿ 6 ವಿಕೆಟ್‌ಗೆ 185 ರನ್ ಕಲೆಹಾಕಿತು. ಆದರೆ ಬೌಲರ್‌ಗಳು ನಿರೀಕ್ಷೆ ಉಳಿಸಿಕೊಳ್ಳಲಿಲ್ಲ. ಇಶಾನ್ ಕಿಶನ್ ಪವರ್-ಪ್ಲೇನಲ್ಲಿ ನೀಡಿದ ಸ್ಫೋಟಕ ಆರಂಭ, ಮುಂಬೈ 5 ವಿಕೆಟ್ ಕಳೆದುಕೊಂಡು 17.4 ಓವರಲ್ಲೇ ಗುರಿ ತಲುಪುವಂತೆ ಮಾಡಿತು.
