ಮುಂಬೈ ಇಂಡಿಯನ್ಸ್ ವಿರುದ್ಧದ 'ಎಲ್ ಕ್ಲಾಸಿಕೋ' ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಜೇಯ ಶತಕ ಸಿಡಿಸಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಭರ್ಜರಿ ಜಯ ತಂದುಕೊಟ್ಟರು. ಈ ಶತಕದ ಮೂಲಕ, ಮುಂಬೈ ವಿರುದ್ಧ ಶತಕ ಬಾರಿಸಿದ ಮೊದಲ ಸಿಎಸ್‌ಕೆ ಆಟಗಾರ ಎಂಬ ಐತಿಹಾಸಿಕ ದಾಖಲೆ ಸೇರಿದಂತೆ ಹಲವು ಮೈಲಿಗಲ್ಲುಗಳನ್ನು ಅವರು ಸ್ಥಾಪಿಸಿದರು.
ಮುಂಬೈ: ಐಪಿಎಲ್‌ನ 'ಎಲ್ ಕ್ಲಾಸಿಕೋ' ಅಂತಾನೇ ಫೇಮಸ್ ಆಗಿರೋ ಪಂದ್ಯದಲ್ಲಿ, ಮುಂಬೈ ಇಂಡಿಯನ್ಸ್ ವಿರುದ್ಧ ಸಂಜು ಸ್ಯಾಮ್ಸನ್ ಅಜೇಯ ಶತಕ ಸಿಡಿಸಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಐಪಿಎಲ್‌ನ 19 ಸೀಸನ್‌ಗಳ ಇತಿಹಾಸದಲ್ಲಿ, ಮುಂಬೈ ಇಂಡಿಯನ್ಸ್ ವಿರುದ್ಧ ಸೆಂಚುರಿ ಹೊಡೆದ ಚೆನ್ನೈ ಸೂಪರ್ ಕಿಂಗ್ಸ್‌ನ ಮೊದಲ ಆಟಗಾರ ಅನ್ನೋ ಐತಿಹಾಸಿಕ ದಾಖಲೆಗೆ ಸಂಜು ಪಾತ್ರರಾಗಿದ್ದಾರೆ. ಇದು ಸಂಜು ಅವರ ಟಿ20 ಕೆರಿಯರ್‌ನ 8ನೇ ಮತ್ತು ಐಪಿಎಲ್‌ನ 5ನೇ ಶತಕವಾಗಿದೆ. ವಿಶೇಷ ಅಂದ್ರೆ, ಒಂದೇ ಐಪಿಎಲ್ ಸೀಸನ್‌ನಲ್ಲಿ ಸಂಜು ಎರಡು ಶತಕ ಬಾರಿಸಿದ್ದು ಇದೇ ಮೊದಲು.
ಹಲವು ಅಪರೂಪದ ದಾಖಲೆ ಬರೆದ ಸಂಜು
ಈ 8 ಶತಕಗಳ ಮೂಲಕ, ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸೆಂಚುರಿ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸಂಜು ಜಂಟಿ ಎರಡನೇ ಸ್ಥಾನಕ್ಕೇರಿದ್ದಾರೆ. ತಲಾ 9 ಶತಕಗಳನ್ನು ಬಾರಿಸಿರುವ ವಿರಾಟ್ ಕೊಹ್ಲಿ ಮತ್ತು ಅಭಿಷೇಕ್ ಶರ್ಮಾ ಜಂಟಿ ಮೊದಲ ಸ್ಥಾನಗಳಲ್ಲಿದ್ದಾರೆ. 8 ಶತಕಗಳೊಂದಿಗೆ ರೋಹಿತ್ ಶರ್ಮಾ ಜೊತೆ ಸಂಜು ಸಮಬಲ ಸಾಧಿಸಿದ್ದಾರೆ.
ಒಂದೇ ಸೀಸನ್‌ನಲ್ಲಿ ಚೆನ್ನೈ ಪರ ಎರಡು ಶತಕ ಬಾರಿಸಿದ ಎರಡನೇ ಆಟಗಾರ ಎನ್ನುವ ಹೆಗ್ಗಳಿಕೆಯೂ ಇದೀಗ ಸಂಜು ಸ್ಯಾಮ್ಸನ್ ಪಾಲಾಗಿದೆ. 2018ರಲ್ಲಿ ಶೇನ್ ವಾಟ್ಸನ್ ಈ ಸಾಧನೆ ಮಾಡಿದ್ದರು. ಅಷ್ಟೇ ಅಲ್ಲ, ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಪರ ಎರಡು ಶತಕಗಳನ್ನು ಗಳಿಸಿದ ನಾಲ್ಕನೇ ಆಟಗಾರ ಕೂಡ ಸಂಜು. ಶೇನ್ ವಾಟ್ಸನ್, ಮುರಳಿ ವಿಜಯ್, ಮತ್ತು ಋತುರಾಜ್ ಗಾಯಕ್ವಾಡ್ ಈ ಹಿಂದೆ ಚೆನ್ನೈ ಪರ ಎರಡು ಶತಕಗಳನ್ನು ಬಾರಿಸಿದ್ದಾರೆ. ಮುಂಬೈ ವೇಗಿಗಳ ಬೆವರಿಳಿಸಿದ ಸಂಜು, ಅವರು ಎದುರಿಸಿದ 40 ಎಸೆತಗಳಲ್ಲಿ 83 ರನ್ ಚಚ್ಚಿದರು. ಆದರೆ ಸ್ಪಿನ್ನರ್‌ಗಳ ವಿರುದ್ಧ ಮಾತ್ರ ಎಚ್ಚರಿಕೆಯ ಆಟವಾಡಿದರು. ಸ್ಪಿನ್ನರ್‌ಗಳ 14 ಎಸೆತಗಳನ್ನು ಎದುರಿಸಿ ಕೇವಲ 18 ರನ್ ಗಳಿಸಿದರು.
ಮುಂಬೈ ತಂಡವನ್ನು ಅವರದ್ದೇ ಮೈದಾನದಲ್ಲಿ ಬಗ್ಗುಬಡಿದ ಸಿಎಸ್‌ಕೆ:
ಸಂಜು ಸ್ಯಾಮ್ಸನ್ ಅವರ ಅಜೇಯ ಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿತು. ಇನ್ನು ಸವಾಲಿನ ಮೊತ್ತ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು ಮತ್ತೊಮ್ಮೆ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ವಿಂಡೀಸ್ ಮೂಲದ ಸ್ಪಿನ್ನರ್ ಅಕೆಲ್ ಹೊಸೈನ್ ಮಾರಕ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್ ತಂಡವು 19 ಓವರ್‌ಗಳಲ್ಲಿ 104 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ 103 ರನ್ ಅಂತರದ ಸೋಲು ಅನುಭವಿಸಿತು. ಇನ್ನು ಈ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿದರೆ, ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಎಂಟನೇ ಸ್ಥಾನಕ್ಕೆ ಕುಸಿದಿದೆ.


