ಲಖನೌ ಸೂಪರ್ ಜೈಂಟ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿದೆ. ದುಬಾರಿ ಆಟಗಾರ ರಿಷಭ್ ಪಂತ್ ವೈಫಲ್ಯದಿಂದ ತಂಡವು ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ 8 ವಿಕೆಟ್‌ಗಳಿಂದ ಗೆದ್ದಿದೆ. ಲಖನೌ ಮಾಲೀಕರು ಪಂತ್ ಅವರ ಪ್ರದರ್ಶನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂಜಾಬ್ ಪರ ಪ್ರಭ್‌ಸಿಮ್ರನ್ ಸಿಂಗ್, ಶ್ರೇಯಸ್ ಅಯ್ಯರ್ ಮತ್ತು ನೇಹಲ್ ಉತ್ತಮ ಆಟವಾಡಿದರು.

ಲಖನೌ: ವಿಕೆಟ್‌ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರನ್ನು ಲಖನೌ ಸೂಪರ್ ಜೈಂಟ್ಸ್‌ ಫ್ರಾಂಚೈಸಿಯು ದಾಖಲೆಯ 27 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಆದರೆ ಪಂತ್ ಲಖನೌ ಪರ ಡ್ರೀಮ್ ಸ್ಟಾರ್ಟ್ ಪಡೆಯಲು ವಿಫಲವಾಗಿದೆ. ಇದೀಗ ಆಡಿದ ಮೂರು ಪಂದ್ಯಗಳ ಪೈಕಿ ಕೇವಲ ಒಂದು ಗೆಲುವು ಹಾಗೂ ಎರಡು ಸೋಲು ಅನುಭವಿಸುವ ಮೂಲಕ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ. 

ಇನ್ನು ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರನಾಗಿ ಹೊರಹೊಮ್ಮಿರುವ ರಿಷಭ್ ಪಂತ್ ಅವರನ್ನು ಇದೀಗ ಲಖನೌ ಫ್ರಾಂಚೈಸಿ ಮಾಲೀಕರಾದ ಸಂಜೀವ್ ಗೋಯೆಂಕಾ ಮೈದಾನದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿಂದೆ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಎದುರು ರೋಚಕ ಸೋಲು ಅನುಭವಿಸುತ್ತಿದ್ದಂತೆ ತಂಡದ ನಾಯಕರಾಗಿದ್ದ ಕೆ ಎಲ್ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು, ಜತೆಗೆ ಸಂಜೀವ್ ಗೋಯೆಂಕಾ ಮೇಲೆ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ: 'ಪಾಪ ಅವರು ಬಡವರು' : RCBಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ ವಿರೇಂದ್ರ ಸೆಹ್ವಾಗ್!

ಇದೀಗ ಪಂಜಾಬ್ ಕಿಂಗ್ಸ್ ಎದುರು ಲಖನೌ ಸೂಪರ್ ಜೈಂಟ್ಸ್ ತಂಡವು 8 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸುತ್ತಿದ್ದಂತೆಯೇ ಪಂತ್‌ಗೆ ಗೋಯೆಂಕಾ ಕ್ಲಾಸ್ ತೆಗೆದುಕೊಂಡಿದ್ದಾರೆ. ರಿಷಭ್ ಪಂತ್ ನಾಯಕನಾಗಿ ಮಾತ್ರವಲ್ಲದೇ ಬ್ಯಾಟರ್ ಆಗಿಯೂ ವೈಫಲ್ಯ ಅನುಭವಿಸುತ್ತಿದ್ದಾರೆ. ಹೀಗಾಗಿ ಗೋಯೆಂಕಾ, ರಿಷಭ್ ಪಂತ್ ಮೇಲೆ ಅಸಾಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. 

Scroll to load tweet…
Scroll to load tweet…

ಲಖನೌಗೆ ಪಂಜಾಬ್‌ ಪಂಚ್‌!

ಲಖನೌ: ಪಂಜಾಬ್‌ ಕಿಂಗ್ಸ್‌ನ ಆಲ್ರೌಂಡ್‌ ಶೋ ಎದುರು ಲಖನೌ ಸೂಪರ್‌ ಜೈಂಟ್ಸ್‌ ಮಂಕಾಗಿದೆ. ಮಂಗಳವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ 8 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು.

ಮೊದಲು ಬ್ಯಾಟ್‌ ಮಾಡಿದ ಲಖನೌ, ನಿರ್ಣಾಯಕ ಹಂತಗಳಲ್ಲಿ ಪ್ರಮುಖ ಬ್ಯಾಟರ್‌ಗಳ ವಿಕೆಟ್‌ ಕಳೆದುಕೊಂಡು 20 ಓವರಲ್ಲಿ 7 ವಿಕೆಟ್‌ಗೆ 171 ರನ್‌ ಗಳಿಸಿತು. ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ಈ ಗುರಿ ಬೆನ್ನತ್ತುವುದು ಅಂದುಕೊಂಡಷ್ಟು ಸುಲಭವಲ್ಲ ಅನಿಸಿದರೂ ಪಂಜಾಬ್‌ ಬ್ಯಾಟರ್‌ಗಳು ನಿರಾಯಾಸವಾಗಿ ಬ್ಯಾಟ್‌ ಬೀಸಿ, ಇನ್ನೂ 3.4 ಓವರ್‌ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ತಂಡದ ನೆಟ್‌ ರನ್‌ರೇಟ್‌ ಸಹ ಉತ್ತಮಗೊಂಡಿತು.

ಲಖನೌ ಮೊದಲ ಓವರಲ್ಲೇ ಮಿಚೆಲ್‌ ಮಾರ್ಷ್‌ ವಿಕೆಟ್‌ ಕಳೆದುಕೊಂಡಿತು. ಮಾರ್ಕ್‌ರಮ್‌ 28 ರನ್‌ ಗಳಿಸಿ ಔಟಾದರೆ, ನಾಯಕ ರಿಷಭ್‌ ಪಂತ್‌ 5 ಎಸೆತದಲ್ಲಿ 2 ರನ್‌ ಗಳಿಸಿ ಪೆವಿಲಿಯನ್‌ಗೆ ವಾಪಸಾದರು. ಆದರೆ ಲಖನೌಗೆ ಭಾರಿ ಹಿನ್ನಡೆ ಉಂಟಾಗಿದ್ದು ನಿಕೋಲಸ್‌ ಪೂರನ್‌ (44) ಔಟಾದಾಗ. 12ನೇ ಓವರಲ್ಲಿ ಪೂರನ್‌ ವಿಕೆಟ್‌ ಬಿದ್ದಾಗ ತಂಡದ ಮೊತ್ತ 89 ರನ್‌. ಆ ಬಳಿಕ ಆಯುಷ್‌ ಬದೋನಿ (41), ಅಬ್ದುಲ್‌ ಸಮದ್‌(27)ರ ಹೋರಾಟದಿಂದ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.

ಇದನ್ನೂ ಓದಿ: ಧೋನಿಗೆ 10 ಓವರ್‌ ಬ್ಯಾಟ್ ಮಾಡಲು ಆಗಲ್ಲ: ಹೊಸ ಬಾಂಬ್ ಸಿಡಿಸಿದ ಸ್ಟಿಫನ್ ಪ್ಲೆಮಿಂಗ್!

ಪಂಜಾಬ್‌ ಸಹ ತನ್ನ ಆರಂಭಿಕ ಪ್ರಿಯಾನ್ಶ್‌ ಆರ್ಯಾ (08)ರನ್ನು ಬೇಗನೆ ಕಳೆದುಕೊಂಡಿತು. ಆದರೆ ಪ್ರಭ್‌ಸಿಮ್ರನ್‌ ಸಿಂಗ್‌ 34 ಎಸೆತದಲ್ಲಿ 9 ಬೌಂಡರಿ, 3 ಸಿಕ್ಸರ್‌ ಚಚ್ಚಿ ತಂಡವನ್ನು ಸುರಕ್ಷಿತ ಸ್ಥಿತಿಗೆ ತಂದು ನಿಲ್ಲಿಸಿದರು. ಅವರು ಔಟಾದಾಗ ಪಂಜಾಬ್‌ ಗೆಲುವಿಗೆ ಇನ್ನು ಕೇವಲ 68 ರನ್‌ ಬೇಕಿತ್ತು.

ಶ್ರೇಯಸ್‌ ಅಯ್ಯರ್‌ ಹಾಗೂ ಇಂಪ್ಯಾಕ್ಟ್‌ ಆಟಗಾರನಾಗಿ ಕಣಕ್ಕಿಳಿದ ನೇಹಲ್‌ ವಧೇರಾ, ಲಖನೌ ಬೌಲರ್‌ಗಳ ಬೆವರಿಳಿಸಿದರು. ಶ್ರೇಯಸ್‌ 30 ಎಸೆತದಲ್ಲಿ 52 ರನ್‌ ಚಚ್ಚಿದರೆ, ನೇಹಲ್‌ 25 ಎಸೆತದಲ್ಲಿ 43 ರನ್‌ ಗಳಿಸಿದರು. ಇಬ್ಬರೂ ತಲಾ 3 ಬೌಂಡರಿ, 4 ಸಿಕ್ಸರ್‌ ಸಿಡಿಸಿದರು.

ಸ್ಕೋರ್‌: ಲಖನೌ 20 ಓವರಲ್ಲಿ 171/7 (ಪೂರನ್‌ 44, ಬದೋನಿ 41, ಸಮದ್‌ 27, ಅರ್ಶ್‌ದೀಪ್‌ 3-43), ಪಂಜಾಬ್‌ 16.2 ಓವರಲ್ಲಿ 177/2 (ಪ್ರಭ್‌ಸಿಮ್ರನ್‌ 69, ಶ್ರೇಯಸ್‌ 52*, ನೇಹಲ್‌ 43*, ದಿಗ್ವೇಶ್‌ 2-30)