ಧೋತಿ, ಕುರ್ತಾ ಜರ್ಸಿ ಜೊತೆ ಸಂಸ್ಕೃತ ಕಮೆಂಟ್ರಿ, ಸದ್ದು ಮಾಡುತ್ತಿದೆ ಸನಾತನಿ ಕ್ರಿಕೆಟ್ ಲೀಗ್ ವಿಡಿಯೋ, ಭಾರತದ ಸಾಂಸ್ಕೃತಿ ಹಿರಿಯ ಕ್ರಿಕೆಟ್ ಲೀಗ್ ಟೂರ್ನಿ ಸಾಂಪ್ರದಾಯಿಕ ಜರ್ಸಿಯಲ್ಲಿ ಗುರುಕುಲ ವಿದ್ಯಾರ್ಥಿಗಳು ದೇಶದ ಗಮನಸೆಳೆದಿದ್ದಾರೆ. 

ಭೋಪಾಲ್ (ಜ.06) ದೇಶದೆಲ್ಲೆಡೆ ಕ್ರಿಕೆಟ್ ಲೀಗ್ ಸಾಮಾನ್ಯ. ವಿಶ್ವವಿದ್ಯಾಲಯ, ಗ್ರಾಮಗಳು ಸೇರಿದಂತೆ ಹಲವೆಡೆ ಲೀಗ್ ಟೂರ್ನಿ ಆಯೋಜನೆ ಮಾಡುತ್ತಾರೆ. ಇದೀಗ ವೇದಿಕ್ ವಿದ್ಯಾಸಂಸ್ಥೆ ಹಾಗೂ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಗುರುಕಲ ವಿದ್ಯಾರ್ಥಿಗಳಿಗೆ ಈ ಕ್ರಿಕೆಟ್ ಟೂರ್ನಿಯನ್ನು ಮಧ್ಯಪ್ರದೇಶದ ಭೋಪಾಲದಲ್ಲಿ ಆಯೋಜಿಸಲಾಗಿದೆ. ಇದು ಸನಾತನಿ ಕ್ರಿಕೆಟ್ ಲೀಗ್. ಇಲ್ಲಿ ಜರ್ಸಿಯಾಗಿ ಧೋತಿ, ಕುರ್ತಾ ಬಳಕೆ ಮಾಡಲಾಗಿದೆ. ಇನ್ನು ಸಂಪೂರ್ಣ ಕ್ರಿಕೆಟ್ ಕಮೆಂಟ್ರಿ ಸಂಸ್ಕತದಲ್ಲಿ ಮಾಡಲಾಗಿದೆ. ಸನಾತನಿ ಕ್ರಿಕೆಟ್ ಲೀಗ್ ಟೂರ್ನಿಯ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.

ಪರಶುರಾಮ್ ಕಲ್ಯಾಣ ಮಂಡಳಿ ಈ ಕ್ರಿಕೆಟ್ ಟೂರ್ನಿ ಆಯೋಜಿಸಿದೆ. ಮಹರ್ಶಿ ಮೈತ್ರಿ ಕ್ರಿಕೆಟ್ ಟೂರ್ನಿಯಲ್ಲಿ ಸನತಾನಿ ಜರ್ಸಿ, ಸಂಸ್ಕೃತ ಕಮೆಂಟ್ರಿ ಎಲ್ಲರ ಗಮನಸೆಳೆದಿದೆ. ವಿಶೇಷ ಅಂದರೆ 2026 ಜನವರಿಯಲ್ಲಿ ಆಯೋಜಿಸಿರುವ ಈ ಕ್ರಿಕೆಟ್ ಟೂರ್ನಿ 6ನೇ ಆವೃತ್ತಿಯಾಗಿದೆ. ಕ್ರಿಕೆಟ್ ಹುಟ್ಟಿದ್ದು ಇಂಗ್ಲೆಂಡ್‌ನಲ್ಲಿ ಆದರೆ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ದೇಶದೆಲ್ಲೆಡೆ ಕ್ರಿಕೆಟ್ ಆಟದ ಜರ್ಸಿ, ಕಮೆಂಟ್ರಿ ಎಲ್ಲವೂ ಮೂಲ ಸ್ವರೂಪಕ್ಕೆ ಹೊಂದಿಕೊಂಡಿರುತ್ತದೆ. ಇದನ್ನು ಬ್ರೇಕ್ ಮಾಡಿ ಹೊಸತನ ತರಲು ಪರಶುರಾಮ್ ಕಲ್ಯಾಣ ಮಂಡಳಿ ಸನಾತನಿ ಟಚ್ ನೀಡಿ ಟೂರ್ನಿ ಆಯೋಜಿಸಿದೆ.

ಪ್ರತಿ ತಂಡಕ್ಕೂ ಧೋತಿ , ಕುರ್ತಾ ಜರ್ಸಿ

ಪ್ರತಿ ತಂಡಕ್ಕೆ ಧೋತಿ ಹಾಗೂ ಕುರ್ತಾ ಜರ್ಸಿ ನೀಡಲಾಗಿದೆ. ಜರ್ಸಿಯಲ್ಲಿ ಹೆಸರು, ತಂಡದ ಹೆಸರು, ಜರ್ಸಿ ನಂಬರ್ ಎಲ್ಲವನ್ನೂ ನಮೂದಿಸಲಾಗಿದೆ. ಸಾಂಪ್ರದಾಯಿಕ ಶೈಲಿಯಲ್ಲಿ ಕ್ರಿಕೆಟ್ ಪಂದ್ಯ ಆಡಲಾಗುತ್ತಿದೆ. ಜನವರಿ 9ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ಇನ್ನು ಸಂಸ್ಕೃತ ಕಮೆಂಟ್ರಿ ಅಚ್ಚುಕಟ್ಟಾಗಿ ಮಾಡಲಾಗಿದೆ. ಒಂದೇ ಒಂದು ಇಂಗ್ಲೀಷ್ ಪದಗಳು ಬಳಕೆ ಮಾಡಿಲ್ಲ. ಬ್ಯಾಟರ್‌ಗೆ ಬಲ್ಲಕ್, ಬೌಲರ್‌ಗೆ ಗಂಧಕ್, ರನ್‌ಗೆ ಧವನಂ, ಔಟ್‌ಗೆ ಗ್ರಹಿತ್, ಬೌಂಡರಿಗೆ ಚತುಷ್ಕಂ ಸೇರಿದಂತೆ ಪ್ರತಿ ಕ್ರಿಕೆಟ್ ಪದಗಳಿಗೆ ಸಂಸ್ಕೃತ ಪದ ಬಳಕೆ ಮಾಡಲಾಗಿದೆ.

ಪಾಶ್ಚಿಮಾತ್ಯ ಶೈಲಿಯ ಕ್ರಿಕೆಟ್ ಟೂರ್ನಿ ಬದಲೂ ಸಾಂಪ್ರದಾಯಿಕ ಶೈಲಿಯಲ್ಲಿ ಕ್ರಿಕೆಟ್ ಆಯೋಜಿಸಲಾಗುತ್ತದೆ. ಸಾಮಾನ್ಯವಾಗಿ ಕ್ರಿಕೆಟ್ ಟೂರ್ನಿಯಲ್ಲಿ ಆಟ, ತಂಡಗಳು, ವೀಕ್ಷಕ ವಿವರಣೆ ಸೇರಿದಂತೆ ಎಲ್ಲವೂ ಒಂದೇ ರೀತಿ ಇರುತ್ತದೆ. ವೇದ ಅಧ್ಯಯನ ವಿದ್ಯಾರ್ಥಿಗಳು, ಸಂಸ್ಕೃತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಅದೇ ಸಂಪ್ರದಾಯಿಕ, ಸಂಸ್ಕೃತಿಯ ವೇಷ ಭೂಷಣಗಳ ಜೊತೆ ಕ್ರಿಕೆಟ್ ಆಯೋಜನೆ ಮಾಡಲಾಗಿದೆ ಎಂದು ಪರಶುರಾಮ ಕಲ್ಯಾಣ ಮಂಡಳಿಯ ಆಯೋಜಕ ಪಂಡಿತ್ ವಿಷ್ಣು ರಜೌರಿಯಾ ಹೇಳಿದ್ದಾರೆ.

Scroll to load tweet…

ಕಳೆದ 6 ಆವೃತ್ತಿಗಳಲ್ಲಿ ತಂಡಗಳ ಸಂಖ್ಯೆ ಹೆಚ್ಚಾಗಿದೆ. ಭಾಗವಹಿಸುವಿಕೆ, ವೀಕ್ಷಕರ ಸಂಖ್ಯೆಯೂ ಹೆಚ್ಚಾಗಿದೆ. ಸಂಸ್ಕೃತ ಕಮೆಂಟ್ರಿ ಕಾರಣ ಭಾರಿ ಜನಪ್ರಿಯತೆ ಪಡೆದಿತ್ತು. ಇದೀಗ ಜರ್ಸಿಯಲ್ಲಿ ಬದಲಾವಣೆ ಮಾಡಲಾಗಿಗೆ. ಹೆಚ್ಚು ಸಾಂಪ್ರದಾಯಿಕ ಶೈಲಿಯಲ್ಲಿ ಕ್ರಿಕೆಟ್ ಆಡಲಾಗುತ್ತದೆ. ಕ್ರಿಕೆಟ್ ನಿಯಮದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಪಂಡಿತ್ ವಿಷ್ಣು ರಜೌರಿಯಾ ಹೇಳಿದ್ದಾರೆ.

ಗೆದ್ದವರಿಗೆ 21,000 ರೂಪಾಯಿ ಬಹುಮಾನ

ಗೆದ್ದ ತಂಡಕ್ಕೆ ಭಗವದ್ಗೀತೆ ಹಾಗೂ ರಾಮಚರಿತಮಾನಸ್ ಉಡುಗೊರೆಯಾಗಿ ನೀಡಲಾಗುತ್ತದೆ. ಇದರ ಜೊತೆಗೆ 21,000 ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ. ರನ್ನರ್ ಅಪ್ ತಂಡಕ್ಕೆ 11,000 ರೂಪಾಯಿ ಬಹುಮಾನ ನೀಡಲಾಗುತ್ತದೆ. ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಭಗೇಶ್ವರಧಾಮ ಪೀಠಾಧಿಪತಿ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಆಗಮಿಸುತ್ತಿದ್ದಾರೆ.