ಮುಂಬೈ(ಡಿ.01): ಕೊರೋನಾದಂತಹ ಕಾಲದಲ್ಲೂ ಕರ್ನಾಟಕ ಸೇರಿದಂತೆ 6 ರಾಜ್ಯಗಳ ಸುಮಾರು 100ಕ್ಕೂ ಹೆಚ್ಚು ಬಡ ಮಕ್ಕಳ ಚಿಕಿತ್ಸೆಗೆ ಭಾರತದ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಮುಂದಾಗಿದ್ದಾರೆ. 

ಏಕಮ್‌ ಎಂದು ಕರೆಯುವ ಸಂಸ್ಥೆಯ ಜತೆಗೆ ಕೈ ಜೋಡಿಸುತ್ತಿರುವ ಸಚಿನ್‌, ಸರ್ಕಾರಿ ಮತ್ತು ಟ್ರಸ್ಟ್‌ ಆಸ್ಪತ್ರೆಗಳ ಚಿಕಿತ್ಸೆ ಪಡೆಯುತ್ತಿರುವ ಬಡ ಕುಟುಂಬಗಳ ಮಕ್ಕಳ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲು ಸಚಿನ್‌ ನಿರ್ಧರಿಸಿದ್ದಾರೆ.

ತಮ್ಮ ಸಂಸ್ಥೆಯ ಮೂಲಕ ಸಚಿನ್‌, ಬಡ ಮಕ್ಕಳಿಗೆ ನೆರವು ನೀಡುತ್ತಿದ್ದಾರೆ. ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಬಡ ಮಕ್ಕಳು, ದುಬಾರಿ ವೈದ್ಯಕೀಯ ವೆಚ್ಚ ಭರಿಸಲಾಗದವರು ಸಚಿನ್‌ ಅವರ ಸಂಸ್ಥೆಯ ಮೂಲಕ ಚಿಕಿತ್ಸೆಯ ನೆರವು ಪಡೆಯಲಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಬಡ ಮಕ್ಕಳು ಸಚಿನ್‌ ಸಂಸ್ಥೆಯಿಂದ ನೆರವು ಪಡೆಯಲಿದ್ದಾರೆ.

ಆಸೀಸ್ ವಿರುದ್ಧ ಸಚಿನ್ ತೆಂಡುಲ್ಕರ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ..!

ಸಚಿನ್‌ ಅವರ ಈ ಕಾರ್ಯದಿಂದ ಪ್ರತಿ ವರ್ಷ ಸುಮಾರು 2,000ಕ್ಕೂ ಹೆಚ್ಚು ಬಡ ಮಕ್ಕಳಿಗೆ ನೆರವಾಗಲಿದೆ. ಇದಲ್ಲದೇ ಸಚಿನ್‌, ವಿಶ್ವ ಮಕ್ಕಳ ದಿನಾಚರಣೆಯಂದು ಯುನಿಸೆಫ್‌ ನಡೆಸುವ ಮಕ್ಕಳ ಕಾರ‍್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ರೂಪಿಸಲು ಈ ಕಾರ‍್ಯಕ್ರಮ ನೆರವಾಗಲಿದೆ ಎನ್ನಲಾಗಿದೆ. ಈ ತಿಂಗಳ ಆರಂಭದಲ್ಲಿ ಸಚಿನ್‌, ಅಸ್ಸಾಂನ ಕರೀಮ್‌ಗಂಜ್‌ ಜಿಲ್ಲೆಯಲ್ಲಿರುವ ಮುಕುಂದ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ವೈದ್ಯಕೀಯ ಸಲಕರಣೆಗಳನ್ನು ಕೊಡುಗೆ ನೀಡಿದ್ದರು.