ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಫಲರಾದರು. ಆದರೆ, ಇದೇ ಪಂದ್ಯದಲ್ಲಿ ಜಸ್‌ಪ್ರೀತ್‌ ಬುಮ್ರಾ ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವುದರ ಜೊತೆಗೆ, ಏಕದಿನದಲ್ಲಿ ವೇಗವಾಗಿ 150 ವಿಕೆಟ್ ಪಡೆದ ಮೂರನೇ ಭಾರತೀಯ ಎನಿಸಿಕೊಂಡರು.

ಬರ್ಮಿಂಗ್‌ಹ್ಯಾಮ್‌: ಭಾರತದ ತಾರಾ ಆಟಗಾರರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವಿಫಲರಾಗಿದ್ದಾರೆ. ಇವರಿಬ್ಬರೂ ಕಡಿಮೆ ಮೊತ್ತಕ್ಕೆ ಔಟಾದರು.

ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್‌ ತಂಡ ಜೋ ರೂಟ್(ಔಟಾಗದೆ 76) ಹಾಗೂ ಲಿಯಾಮ್ ಡಾವ್ಸನ್‌(68) ಹೋರಾಟದ ನೆರವಿನಿಂದ 47.5 ಓವರ್‌ಗಳಲ್ಲಿ 258 ರನ್‌ ಗಳಿಸಿ ಆಲೌಟಾಯಿತು. ಗುರಿ ಬೆನ್ನತ್ತಲು ಇಳಿದ ಭಾರತಕ್ಕೆ ಇಬ್ಬರು ತಾರಾ ಬ್ಯಾಟರ್‌ಗಳು ಕೈಕೊಟ್ಟರು. ಶುಭ್‌ಮನ್‌ ಗಿಲ್‌ ಜೊತೆಗೂಡಿ ಇನ್ನಿಂಗ್ಸ್‌ ಆರಂಭಿಸಿದ ರೋಹಿತ್‌ ಶರ್ಮಾ 21 ಎಸೆತಗಳನ್ನು ಎದುರಿಸಿ 1 ಬೌಂಡರಿ ನೆರವಿನಿಂದ 11 ರನ್‌ ಗಳಿಸಿ ಸ್ಯಾಮ್‌ ಕರನ್‌ಗೆ ವಿಕೆಟ್‌ ಒಪ್ಪಿಸಿದರು. ಅವರ ನಿರ್ಗಮನದ ಬಳಿಕ ಕ್ರೀಸ್‌ಗೆ ಬಂದ ವಿರಾಟ್‌ ಕೊಹ್ಲಿ 6 ಎಸೆತಗಳಲ್ಲಿ 1 ಬೌಂಡರಿ ನೆರವಿನಿಂದ 5 ರನ್‌ ಸಿಡಿಸಿದ್ದಾಗ, ಜೋಫ್ರಾ ಆರ್ಚರ್‌ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಮತ್ತೋರ್ವ ತಾರಾ ಆಟಗಾರ ಕೆ.ಎಲ್‌.ರಾಹುಲ್‌ ಕೂಡಾ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ. ಅವರು 3 ಎಸೆತಗಳಲ್ಲಿ 1 ರನ್‌ ಗಳಿಸಲಷ್ಟೇ ಶಕ್ತರಾದರು.

ಏಕದಿನದಲ್ಲಿ ಭಾರತ ಪರ ವೇಗವಾಗಿ 150 ವಿಕೆಟ್‌: ಬುಮ್ರಾ ಈಗ ನಂಬರ್ 3

ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ವೇಗವಾಗಿ 150 ವಿಕೆಟ್‌ ಕಿತ್ತ ಸಾಧಕರ ಪಟ್ಟಿ ಜಸ್‌ಪ್ರೀತ್‌ ಬುಮ್ರಾ 3ನೇ ಸ್ಥಾನಕ್ಕೇರಿದ್ದಾರೆ. ಅವರು 4605 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಕೇವಲ 4070 ಎಸೆತಗಳಲ್ಲೇ 150 ವಿಕೆಟ್‌ ಪೂರೈಸಿರುವ ಮೊಹಮ್ಮದ್‌ ಶಮಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕುಲ್ದೀಪ್‌ ಯಾದವ್‌ 4513 ಎಸೆತಗಳಲ್ಲಿ ಈ ಸಾಧನೆ ಮಾಡಿ 2ನೇ ಸ್ಥಾನದಲ್ಲಿದ್ದಾರೆ.

ಏಕದಿನದಲ್ಲಿ ಇಂಗ್ಲೆಂಡ್‌ ವಿರುದ್ಧ ಗರಿಷ್ಠ ವಿಕೆಟ್‌: ಅಗ್ರಸ್ಥಾನಕ್ಕೆ ಬುಮ್ರಾ

ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಅತಿ ಹೆಚ್ಚು ವಿಕೆಟ್‌ ಕಿತ್ತ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಬೂಮ್ರಾ ಮೊದಲ ಸ್ಥಾನಕ್ಕೇರಿದ್ದಾರೆ. ಅವರು 31 ವಿಕೆಟ್‌ ಪಡೆದಿದ್ದಾರೆ. ರವೀಂದ್ರ ಜಡೇಜಾ 30 ವಿಕೆಟ್‌ ಪಡೆದಿದ್ದು, ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಭುವನೇಶ್ವರ್‌ ಕುಮಾರ್‌ 28, ಮದನ್‌ ಲಾಲ್‌ 27, ಮೊಹಮ್ಮದ್‌ ಶಮಿ 26 ವಿಕೆಟ್‌ ಪಡೆದಿದ್ದಾರೆ.