* ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಸೋಲು ಕಂಡ ಟೀಂ ಇಂಡಿಯಾ* ಮೂರನೇ ಟಿ20 ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ ರೋಹಿತ್ ಶರ್ಮಾ* ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಬೇಡದ ದಾಖಲೆಗೆ ಪಾತ್ರರಾದ ಹಿಟ್‌ಮ್ಯಾನ್

ಇಂದೋರ್(ಅ.05): ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರನೆ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ದಕ್ಷಿಣ ಆಫ್ರಿಕಾ ವೇಗಿ ಕಗಿಸೋ ರಬಾಡ ಬೌಲಿಂಗ್‌ನಲ್ಲಿ ರನ್‌ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಇದರ ಬೆನ್ನಲ್ಲೇ ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್ ಶರ್ಮಾ ಬೇಡದ ದಾಖಲೆಯೊಂದಿಗೆ ಸಾಕ್ಷಿಯಾಗಿದ್ದಾರೆ.

ಇಲ್ಲಿನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಹರಿಣಗಳ ಪಡೆ ನೀಡಿದ್ದ 228 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ರೋಹಿತ್ ಶರ್ಮಾ ಇನಿಂಗ್ಸ್‌ನ ಎರಡನೇ ಎಸೆತದಲ್ಲೇ ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್ ಸೇರುವ ಮೂಲಕ ನಿರಾಸೆ ಅನುಭವಿಸಿದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬಾರಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ ಬ್ಯಾಟರ್ ಎನ್ನುವ ಕುಖ್ಯಾತಿಗೆ ರೋಹಿತ್ ಶರ್ಮಾ ಭಾಜನರಾಗಿದ್ದಾರೆ. ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 43 ಬಾರಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಈ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ಐರ್ಲೆಂಡ್‌ನ ಕೆವಿನ ಒ ಬ್ರಿಯಾನ್ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದರು. ಇದೀಗ ಕೆವಿನ್ ಒ ಬ್ರಿಯಾನ್ ಎರಡನೇ ಸ್ಥಾನಕ್ಕೆ ಜಾರಿದ್ದಾರೆ.

ಅಂತರಾಷ್ಟ್ರೀಯ ಪುರುಷರ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬಾರಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ ಟಾಪ್ 5 ಬ್ಯಾಟರ್‌ಗಳಿವರು:

43- ರೋಹಿತ್ ಶರ್ಮಾ- ಭಾರತ
42- ಕೆವಿನ್ ಒ ಬ್ರಿಯಾನ್- ಐರ್ಲೆಂಡ್
40- ಮುಷ್ಫಿಕುರ್ ರಹೀಂ- ಬಾಂಗ್ಲಾದೇಶ
39- ಮೊಹಮ್ಮದ್ ನಬಿ - ಆಫ್ಘಾನಿಸ್ತಾನ
37- ಶಾಹಿದ್ ಅಫ್ರಿದಿ - ಪಾಕಿಸ್ತಾನ

ದಕ್ಷಿಣ ಅಫ್ರಿಕಾ ನೀಡಿದ್ದ ಕಠಿಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ 4 ರನ್ ಗಳಿಸುವಷ್ಟರಲ್ಲಿ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ವಿಕೆಟ್ ಕಳೆದುಕೊಂಡಿತಾದರೂ, ಆ ಬಳಿಕ ರಿಷಭ್ ಪಂತ್(27), ದಿನೇಶ್ ಕಾರ್ತಿಕ್‌(46), ದೀಪಕ್ ಚಹರ್(31) ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗುವ ಯತ್ನ ನಡೆಸಿದರು. ಆದರೆ ಮೊದಲ 10 ಓವರ್‌ಗಳಲ್ಲೇ ರೋಹಿತ್, ಅಯ್ಯರ್, ಪಂತ್, ದಿನೇಶ್ ಕಾರ್ತಿಕ್ ಹಾಗೂ ಸೂರ್ಯಕುಮಾರ್ ಯಾದವ್ ವಿಕೆಟ್ ಒಪ್ಪಿಸಿದ್ದು, ಟೀಂ ಇಂಡಿಯಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು.

IND vs SA T20 ಭಾರತದ ಕ್ವೀನ್ ಸ್ವೀಪ್ ಸರಣಿ ಗೆಲುವಿಗೆ ರೋಸೋ ಬ್ರೇಕ್, ಅಂತಿಮ ಪಂದ್ಯದಲ್ಲಿ ಸೋಲಿನ ಶಾಕ್!

ಇದರ ಪರಿಣಾಮ ಟೀಂ ಇಂಡಿಯಾ 178 ರನ್‌ಗಳಿಗೆ ಸರ್ವಪತನ ಕಂಡಿತು. ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡವು 49 ರನ್‌ಗಳ ಸೋಲು ಅನುಭವಿಸಿತು. ಇದರ ಹೊರತಾಗಿಯೂ ಟೀಂ ಇಂಡಿಯಾ 2-1 ಅಂತರದಲ್ಲಿ ಟಿ20 ಸರಣಿಯನ್ನು ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.