ಈ ಬಾರಿಯ ವಿಶ್ವಕಪ್ ನಡೆಯುವ ವೆಸ್ಟ್‌ಇಂಡೀಸ್‌ನಲ್ಲಿ ನಿಧಾನಗತಿ ಪಿಚ್ಗಳಿದ್ದು, ಇದು ಕೊಹ್ಲಿಯ ಬ್ಯಾಟಿಂಗ್ ಶೈಲಿಗೆ ಸರಿಹೊಂದುವುದಿಲ್ಲ. ಹೀಗಾಗಿ ವಿಶ್ವಕಪ್‌ಗೆ ತಂಡದಲ್ಲಿ ಕೊಹ್ಲಿಗೆ ಸ್ಥಾನ ನೀಡಲಾಗುವುದಿಲ್ಲ ಎಂದು ಈ ಮೊದಲು ವರದಿಯಾಗಿತ್ತು.
ನವದೆಹಲಿ(ಮಾ.18): ಜೂನ್ 1 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್‌ನಲ್ಲಿ ತಾರಾ ಆಟಗಾರ ವಿರಾಟ್ ಕೊಹ್ಲಿಗೆ ಭಾರತ ತಂಡದಲ್ಲಿ ಸ್ಥಾನ ಸಿಗುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಏನೇ ಆದರೂ ವಿರಾಟ್ ಕೊಹ್ಲಿ ವಿಶ್ವಕಪ್ ತಂಡದಲ್ಲಿ ಇರಲೇಬೇಕು ಎಂದು ನಾಯಕ ರೋಹಿತ್ ಶರ್ಮಾ ಬಿಸಿಸಿಐಗೆ ಸೂಚಿಸಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೊಹ್ಲಿ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಬರಲಿದೆ ಎಂದಿದ್ದಾರೆ. ಈ ಬಾರಿಯ ವಿಶ್ವಕಪ್ ನಡೆಯುವ ವೆಸ್ಟ್‌ಇಂಡೀಸ್‌ನಲ್ಲಿ ನಿಧಾನಗತಿ ಪಿಚ್ಗಳಿದ್ದು, ಇದು ಕೊಹ್ಲಿಯ ಬ್ಯಾಟಿಂಗ್ ಶೈಲಿಗೆ ಸರಿಹೊಂದುವುದಿಲ್ಲ. ಹೀಗಾಗಿ ವಿಶ್ವಕಪ್‌ಗೆ ತಂಡದಲ್ಲಿ ಕೊಹ್ಲಿಗೆ ಸ್ಥಾನ ನೀಡಲಾಗುವುದಿಲ್ಲ ಎಂದು ಈ ಮೊದಲು ವರದಿಯಾಗಿತ್ತು.
ಕೊಹ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಈಗಲೂ ಸರ್ವಶ್ರೇಷ್ಠ ಬ್ಯಾಟರ್. ಆದರೆ ಟಿ20 ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಆಟವಾಡಲು ವಿಫಲರಾಗಿದ್ದಾರೆ ಎಂಬುದು ಆಯ್ಕೆ ಸಮಿತಿ ಅಭಿಪ್ರಾಯ ಎಂದು ವರದಿಗಳು ತಿಳಿಸಿವೆ. ಆದರೆ ಮಾ.22ರಿಂದ ಆರಂಭಗೊಳ್ಳಲಿರುವ ಐಪಿಎಲ್‌ನಲ್ಲಿ ಅವರು ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದರ ಮೇಲೆ ಟಿ20 ವಿಶ್ವಕಪ್ ತಂಡದಲ್ಲಿನ ಸ್ಥಾನದ ಭವಿಷ್ಯ ನಿರ್ಧಾರವಾಗಲಿದೆ ಎಂದು ವರದಿಯಾಗಿತ್ತು.
ಭಾರತ 2013ರ ಚಾಂಪಿಯನ್ಸ್ ಟ್ರೋಫಿ ಬಳಿಕ ಯಾವುದೇ ಐಸಿಸಿ ಪ್ರಶಸ್ತಿ ಗೆದ್ದಿಲ್ಲ. ಹೀಗಾಗಿ ಈ ಬಾರಿಯಾದರೂ ಪ್ರಶಸ್ತಿ ಬರ ನೀಗಿಸಬೇಕೆಂಬುದು ಬಿಸಿಸಿಐ ಆಶಯ. ಇದೇ ಕಾರಣಕ್ಕೆ ಕೆಲ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಮಂಡಳಿ ಮುಂದಾಗಿದೆ ಎನ್ನಲಾಗುತ್ತಿದೆ.
ಐಪಿಎಲ್‌ಗೆ ಮುನ್ನ ಭಾರತಕ್ಕೆ ಮರಳಿ ಬಂದ ವಿರಾಟ್ ಕೊಹ್ಲಿ
ನವದೆಹಲಿ: ಭಾರತದ ಸ್ಟಾರ್ ಕ್ರಿಕೆಟಿಗ, ರನ್ ಮೆಷಿನ್ ವಿರಾಟ್ ಕೊಹ್ಲಿ 17ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಗೂ ಮುನ್ನ ಭಾರತಕ್ಕೆ ಮರಳಿದ್ದಾರೆ. ಅವರು ಶೀಘ್ರದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆಯಿದೆ.
ಭಾನುವಾರ ಸ್ಟಾರ್‌ಸ್ಪೋರ್ಟ್ಸ್ ವಾಹಿನಿಯು ಕೊಹ್ಲಿ ಆಗಮನದ ಬಗ್ಗೆ ಟ್ವೀಟ್ ಮಾಡಿದ್ದು, ‘ಕಿಂಗ್ ಕೊಹ್ಲಿ ಭಾರತಕ್ಕೆ ಮರಳಿದ್ದಾರೆ. ಅವರು ಐಪಿಎಲ್ ಅಭಿಯಾನ ಆರಂಭಿಸಲು ಸಜ್ಜಾಗಿದ್ದಾರೆ’ ಎಂದಿದೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಗೆ ಕೊಹ್ಲಿ ಅಲಭ್ಯರಾಗಿದ್ದರು. ಆರಂಭದಲ್ಲಿ ವೈಯಕ್ತಿಕ ಕಾರಣ ನೀಡಿದ್ದ ಅವರು ಬಳಿಕ ಲಂಡನ್‌ನಲ್ಲಿ ಇರುವುದಾಗಿ ಗೊತ್ತಾಗಿತ್ತು. ಇತ್ತೀಚೆಗಷ್ಟೇ ಅವರು 2ನೇ ಗಂಡು ಮಗುವಿನ ತಂದೆಯಾಗಿದ್ದರು.
ಕೊಹ್ಲಿ ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಪರ 639 ರನ್ ಕಲೆಹಾಕಿದ್ದಾರೆ. ಈ ವರ್ಷ ಟಿ20 ವಿಶ್ವಕಪ್ ಇರುವುದರಿಂದ ವಿರಾಟ್ ಪಾಲಿಗೆ ಐಪಿಎಲ್ ಪ್ರದರ್ಶನ ಮಹತ್ವದ್ದೆನಿಸಿದೆ.
ಆರ್‌ಸಿಬಿ ಕಠಿಣ ಅಭ್ಯಾಸ
ಐಪಿಎಲ್‌ಗೆ ಆರ್‌ಸಿಬಿ ಆಟಗಾರರು ಕಠಿಣ ಅಭ್ಯಾಸ ನಡೆಸುತ್ತಿದ್ದು, ತಾರಾ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡಾ ಭಾನುವಾರ ನೆಟ್ಸ್‌ನಲ್ಲಿ ಕಾಣಿಸಿಕೊಂಡರು. ಫಾಫ್ ಡು ಪ್ಲೆಸಿ, ಕನ್ನಡಿಗ ವಿಜಯ್‌ಕುಮಾರ್ ವೈಶಾಖ್ ಸೇರಿದಂತೆ ಹಲವರು 2 ದಿನಗಳ ಹಿಂದೆಯೇ ಅಭ್ಯಾಸ ಆರಂಭಿಸಿದ್ದರು.
