* ಭಾರತ-ಲಂಕಾ ಪಿಂಕ್ ಬಾಲ್ ಟೆಸ್ಟ್‌ಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ* ನಾಯಕನಾಗಿ ಚೊಚ್ಚಲ ಟೆಸ್ಟ್ ಸರಣಿ ಗೆಲುವಿನ ಕನವರಿಕೆಯಲ್ಲಿ ರೋಹಿತ್ ಶರ್ಮಾ* ಭಾರತ ತಂಡದಲ್ಲಿ ಒಂದು ಬದಲಾವಣೆ ನಿರೀಕ್ಷೆ

ಬೆಂಗಳೂರು(ಮಾ.12): ರವೀಂದ್ರ ಜಡೇಜಾ (Ravindra Jadeja) ಅವರ ಆಲ್ರೌಂಡ್‌ ಪ್ರದರ್ಶನದ ನೆರವಿನಿಂದ ಮೊಹಾಲಿಯಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್‌ ಗೆಲುವು ಸಾಧಿಸಿದ್ದ ಭಾರತ, ಬೆಂಗಳೂರಲ್ಲಿ ಶನಿವಾರ(ಮಾ.12)ದಿಂದ ಆರಂಭಗೊಳ್ಳಲಿರುವ 2ನೇ ಟೆಸ್ಟ್‌ನಲ್ಲೂ ಶ್ರೀಲಂಕಾವನ್ನು ಬಗ್ಗುಬಡಿದು ಸರಣಿ ಗೆಲುವಿನ ಸಂಭ್ರಮ ಆಚರಿಸಲು ಕಾಯುತ್ತಿದೆ. ಟೆಸ್ಟ್‌ ತಂಡದ ನಾಯಕನಾದ ಮೇಲೆ ರೋಹಿತ್‌ ಶರ್ಮಾ ಮೊದಲ ಸರಣಿ ಗೆಲುವು ಸಾಧಿಸಲು ಎದುರು ನೋಡುತ್ತಿದ್ದಾರೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ (Team India) ಈಗಾಗಲೇ 1-0 ಮುನ್ನಡೆ ಸಾಧಿಸಿದೆ.

ಈ ಪಂದ್ಯ ಹಗಲು-ರಾತ್ರಿ ಮಾದರಿಯಲ್ಲಿ ನಡೆಯಲಿದ್ದು, ಬೆಂಗಳೂರಿನ ಕ್ರಿಕೆಟ್‌ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಈಗಾಗಲೇ ಮೊದಲೆರಡು ದಿನಗಳ ಟಿಕೆಟ್‌ಗಳು ಸೋಲ್ಡೌಟ್‌ ಆಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣ ಭರ್ತಿಯಾಗಲಿದೆ. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಟೆಸ್ಟ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಪಿಂಕ್ ಬಾಲ್ ಟೆಸ್ಟ್‌ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಲೋಕಲ್ ಹೀರೋ ಮಯಾಂಕ್ ಅಗರ್‌ವಾಲ್ (Mayank Agarwal) ಅವರಿಂದ ಇಂದು ದೊಡ್ಡ ಇನಿಂಗ್ಸ್‌ ನಿರೀಕ್ಷಿಸಲಾಗುತ್ತಿದೆ.

ಗಾಯ, ಕೋವಿಡ್‌ನಿಂದ ಚೇತರಿಸಿಕೊಂಡಿರುವ ಅಕ್ಷರ್‌ ಪಟೇಲ್‌ಗೆ (Axar Patel) ಆಡುವ ಹನ್ನೊಂದರಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ. ಜಯಂತ್‌ ಯಾದವ್‌ ತಮ್ಮ ಸ್ಥಾನವನ್ನು ಅಕ್ಷರ್‌ಗೆ ಬಿಟ್ಟುಕೊಡಲಿದ್ದಾರೆ ಎನ್ನಲಾಗುತ್ತಿದೆ. ಆಡಿರುವ ಕೆಲವೇ ಕೆಲವು ಪಂದ್ಯಗಳಲ್ಲಿ ಅಕ್ಷರ್‌ 36 ವಿಕೆಟ್‌ ಕಬಳಿಸಿದ್ದು, 2021ರಲ್ಲಿ ಇಂಗ್ಲೆಂಡ್‌ ವಿರುದ್ಧ ಅಹಮದಾಬಾದ್‌ನಲ್ಲಿ ನಡೆದಿದ್ದ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಒಟ್ಟು 11 ವಿಕೆಟ್‌ ಉರುಳಿಸಿದ್ದರು. ಅಕ್ಷರ್‌ ಸೇರ್ಪಡೆಯಿಂದ ತಂಡದ ಬ್ಯಾಟಿಂಗ್‌ ಬಲವೂ ಹೆಚ್ಚಲಿದೆ. ಒಂದೊಮ್ಮೆ ಭಾರತ ಹೆಚ್ಚುವರಿ ವೇಗಿಯನ್ನು ಆಡಿಸಲು ನಿರ್ಧರಿಸಿದರೆ, ಆಗ ಜಯಂತ್‌ ಬದಲು ಮೊಹಮದ್‌ ಸಿರಾಜ್‌ಗೆ ಸ್ಥಾನ ಸಿಗಬಹುದು. ಉಳಿದಂತೆ ಆತಿಥೇಯ ತಂಡದಲ್ಲಿ ಮತ್ಯಾವ ಬದಲಾವಣೆ ನಿರೀಕ್ಷೆ ಇಲ್ಲ.

ಲಂಕಾಗೆ ಸಂಕಷ್ಟ: ಮತ್ತೊಂದೆಡೆ ಶ್ರೀಲಂಕಾಗೆ ಗಾಯಾಳುಗಳ ಸಮಸ್ಯೆ ಹೆಚ್ಚಾಗಿದೆ. ವೇಗಿ ದುಷ್ಮಾಂತ ಚಮೀರ ಇನ್ನೂ ಚೇತರಿಕೆ ಕಂಡಿಲ್ಲ. ಕಳೆದ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ವೇಗಿ ಲಹಿರು ಕುಮಾರ ಈ ಪಂದ್ಯದಿಂದ ಹೊರಬಿದ್ದಿದ್ದಾರೆ. ಇನ್ನು ಮೊಹಾಲಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದ ಪಥುಮ್‌ ನಿಸ್ಸಾಂಕ ಬೆನ್ನು ನೋವಿನ ಕಾರಣ ಆಯ್ಕೆಗೆ ಲಭ್ಯರಿಲ್ಲ. ಕುಸಾಲ್‌ ಮೆಂಡಿಸ್‌, ಚಾಮಿಕ ಕರುಣರತ್ನೆ, ಪ್ರವೀಣ್‌ ಜಯವಿಕ್ರಮ ಕಣಕ್ಕಿಳಿಯುವ ನಿರೀಕ್ಷೆ ಇದೆ. ಚರಿತ್‌ ಅಸಲಂಕ ಬದಲು ದಿನೇಶ್‌ ಚಾಂಡಿಮಲ್‌ ಆಡಬಹುದು.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಮಯಾಂಕ್‌ ಅಗರ್‌ವಾಲ್‌, ಹನುಮ ವಿಹಾರಿ, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ರವೀಂದ್ರ ಜಡೇಜಾ, ಆರ್‌.ಅಶ್ವಿನ್‌, ಅಕ್ಷರ್‌ ಪಟೇಲ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮದ್‌ ಶಮಿ.

ಶ್ರೀಲಂಕಾ: ದಿಮುತ್‌ ಕರುಣರತ್ನೆ(ನಾಯಕ), ಲಹಿರು ತಿರಿಮನ್ನೆ, ಕುಸಾಲ್‌ ಮೆಂಡಿಸ್‌, ಮ್ಯಾಥ್ಯೂಸ್‌, ಧನಂಜಯ, ಚಾಂಡಿಮಲ್‌/ಅಸಲಂಕ, ನಿರೋಶನ್‌ ಡಿಕ್‌ವೆಲ್ಲಾ, ಚಾಮಿಕ ಕರುಣರತ್ನೆ, ಸುರಂಗ ಲಕ್ಮಲ್‌, ಎಂಬುಲ್ಡೇನಿಯಾ, ಜಯವಿಕ್ರಮ.

ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಪಿಚ್‌ ರಿಪೋರ್ಟ್‌

ಚಿನ್ನಸ್ವಾಮಿಯ ಪಿಚ್‌ ಒಣ ಪಿಚ್‌ ಆಗಿದ್ದು, ಚೆಂಡು ಸ್ಪಿನ್‌ ಆಗುವ ನಿರೀಕ್ಷೆ ಇದೆ. ಹೀಗಾಗಿ ಟಾಸ್‌ ಗೆಲ್ಲುವ ತಂಡ ಮೊದಲು ಬ್ಯಾಟ್‌ ಮಾಡಲು ಇಚ್ಛಿಸುವ ಸಾಧ್ಯತೆ ಹೆಚ್ಚು. ಸಂಜೆ ಬಳಿಕ ಇಬ್ಬನಿ ಬೀಳುವ ಸಾಧ್ಯತೆ ಕಡಿಮೆ. ಹೀಗಾಗಿ ಸ್ಪಿನ್ನರ್‌ಗಳಿಗೆ ಅನುಕೂಲಕರ ವಾತಾವರಣ ಇರಲಿದೆ.