Asianet Suvarna News Asianet Suvarna News

ಬೆಂಗಳೂರಲ್ಲಿ ಟಿ20 ಸರಣಿ ಕ್ಲೀನ್‌ಸ್ವೀಪ್‌ ಮೇಲೆ ಕಣ್ಣಿಟ್ಟ ಟೀಂ ಇಂಡಿಯಾ

ಭಾರತ ಮೊದಲೆರಡೂ ಪಂದ್ಯಗಳಲ್ಲಿ ತಕ್ಕಮಟ್ಟಿನ ಪ್ರದರ್ಶನ ನೀಡಿದ್ದು, ತಲಾ 6 ವಿಕೆಟ್ ಜಯಗಳಿಸಿದೆ. ಆದರೆ 14 ತಿಂಗಳ ಬಳಿಕ ಟಿ20ಗೆ ಮರಳಿ, ಹೆಚ್ಚಿನ ನಿರೀಕ್ಷೆ ಹುಟ್ಟು ಹಾಕಿದ್ದ ನಾಯಕ ರೋಹಿತ್ ಶರ್ಮಾ ಎರಡೂ ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಈ ಪಂದ್ಯದಲ್ಲಾದರೂ ಅವರ ಬ್ಯಾಟ್‌ನಿಂದ ರನ್ ಹರಿಯಬಹುದೇ ಎಂಬ ಕುತೂಹಲ ಅಭಿಮಾನಿಗಳದ್ದು. 

Rohit Sharma led Team India eyes on T20I Series Clean sweep against Afghanistan kvn
Author
First Published Jan 17, 2024, 11:32 AM IST

ಭರ್ಜರಿ 2 ಗೆಲುವುಗಳ ಮೂಲಕ ಈಗಾಗಲೇ ಅಫ್ಘಾನಿಸ್ತಾನ ವಿರುದ್ಧದ ಸರಣಿಯನ್ನು ಕೈವಶ ಮಾಡಿಕೊಂಡಿರುವ ಟೀಂ ಇಂಡಿಯಾ ಸದ್ಯ ಪ್ರವಾಸಿ ತಂಡದ ವಿರುದ್ಧ ಕ್ಲೀನ್‌ಸ್ವೀಪ್‌ಗಾಗಿ ತವಕಿಸುತ್ತಿದೆ. ಬುಧವಾರ ಭಾರತ 3 ಪಂದ್ಯಗಳ ಸರಣಿಯ ಕೊನೆ ಪಂದ್ಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲಿದೆ. ಜೊತೆಗೆ ವಿಶ್ವಕಪ್‌ಗೂ ಮುನ್ನ ತಮಗೆ ಉಳಿದಿರುವ ಏಕೈಕ ಅಂತಾರಾಷ್ಟ್ರೀಯ ಟಿ20 ಪಂದ್ಯ ಇದಾಗಿರುವುದರಿಂದ ಭಾರತೀಯ ಆಟಗಾರರು ಅತ್ಯುತ್ತಮ ಪ್ರದರ್ಶನದೊಂದಿಗೆ ಆಯ್ಕೆ ಸಮಿತಿಯ ಗಮನ ಸೆಳೆಯುವ ವಿಶ್ವಾಸದಲ್ಲಿದ್ದಾರೆ.

ಭಾರತ ಮೊದಲೆರಡೂ ಪಂದ್ಯಗಳಲ್ಲಿ ತಕ್ಕಮಟ್ಟಿನ ಪ್ರದರ್ಶನ ನೀಡಿದ್ದು, ತಲಾ 6 ವಿಕೆಟ್ ಜಯಗಳಿಸಿದೆ. ಆದರೆ 14 ತಿಂಗಳ ಬಳಿಕ ಟಿ20ಗೆ ಮರಳಿ, ಹೆಚ್ಚಿನ ನಿರೀಕ್ಷೆ ಹುಟ್ಟು ಹಾಕಿದ್ದ ನಾಯಕ ರೋಹಿತ್ ಶರ್ಮಾ ಎರಡೂ ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಈ ಪಂದ್ಯದಲ್ಲಾದರೂ ಅವರ ಬ್ಯಾಟ್‌ನಿಂದ ರನ್ ಹರಿಯಬಹುದೇ ಎಂಬ ಕುತೂಹಲ ಅಭಿಮಾನಿಗಳದ್ದು. 

ಮತ್ತೊಂದೆಡೆ ಕೊಹ್ಲಿ ಕಳೆದ ಪಂದ್ಯದಲ್ಲಿ ಸ್ಟ್ರೈಕ್‌ರೇಟ್ ಹೆಚ್ಚಿಸುವತ್ತ ಗಮನ ಹರಿಸಿದ್ದು, ಈ ಪಂದ್ಯದಲ್ಲೂ ದೊಡ್ಡ ಇನ್ನಿಂಗ್ಸ್‌ ನಿರೀಕ್ಷೆಯಿದೆ. ಯಶಸ್ವಿ ಜೈಸ್ವಾಲ್, ಶಿವಂ ದುಬೆ, ರಿಂಕು ಸಿಂಗ್ ತಮ್ಮ ಅಭೂತಪೂರ್ವ ಲಯ ಮುಂದುವರಿಸಲು ಎದುರು ನೋಡುತ್ತಿದ್ದಾರೆ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ನೆರವಾಗುವ ಕಾರಣಕ್ಕೆ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ರನ್ನು ಸರಣಿಯಲ್ಲಿ ಆಡಿಸುತ್ತಿರುವ ಆಯ್ಕೆ ಸಮಿತಿ, ಅವರಿಂದ ಮತ್ತಷ್ಟು ಕೊಡುಗೆ ನಿರೀಕ್ಷಿಸುತ್ತಿದೆ.ಈಗಾಗಲೇ ಸರಣಿ ಗೆದ್ದಿರುವ ಹಿನ್ನೆಲೆಯಲ್ಲಿ ತಂಡದಲ್ಲಿ ಕೆಲ ಬದಲಾವಣೆ ಸಾಧ್ಯತೆಯೂ ಇದೆ. 

ಪುಟಿದೇಳುತ್ತಾ ಆಫ್ಘನ್: ಆಫ್ಘನ್ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾದರೂ ಈ ಬಾರಿ ಸಪ್ಪೆಯಾದಂತಿದೆ. ಬ್ಯಾಟರ್‌ಗಳು ಅಬ್ಬರಿಸದ ಕಾರಣ ಬೌಲರ್‌ಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಅಬ್ಬರಿಸಿ ದೊಡ್ಡ ಮೊತ್ತ ಹಾಕುವ ಹೊಣೆ ಬ್ಯಾಟರ್‌ಗಳ ಮೇಲಿದೆ.

ತವರಿನಲ್ಲಿ 6ನೇ ಸರಣಿ ಕ್ಲೀನ್‌ ಸ್ವೀಪ್‌ ಗುರಿ:

ಭಾರತ ಈವರೆಗೆ ತವರಿನಲ್ಲಿ 5 ಟಿ20 ಸರಣಿಗಳನ್ನು ಕ್ಲೀನ್‌ಸ್ವೀಪ್ ಮಾಡಿಕೊಂಡಿದೆ. ಈ ಬಾರಿ ಅದನ್ನು 6ಕ್ಕೆ ಹೆಚ್ಚಿಸುವ ಗುರಿ ಭಾರತದ್ದು. 2017ರಲ್ಲಿ ಶ್ರೀಲಂಕಾ, 2018ರಲ್ಲಿ ವೆಸ್ಟ್‌ ಇಂಡೀಸ್, 2021ರಲ್ಲಿ ನ್ಯೂಜಿಲೆಂಡ್, 2022ರಲ್ಲಿ ವೆಸ್‌ಟ್ಇಂಡೀಸ್ ಹಾಗೂ ಶ್ರೀಲಂಕಾ ವಿರುದ್ಧದ ಸರಣಿಗಳನ್ನು ಭಾರತ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಮಾಡಿಕೊಂಡಿದೆ.

ಸಂಭಾವ್ಯ ಆಟಗಾರರ ಪಟ್ಟಿ:

ಭಾರತ: ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶಿವಂ ದುಬೆ, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಆರ್ಶದೀಪ್ ಸಿಂಗ್, ಆವೇಶ್ ಖಾನ್, ಮುಕೇಶ್ ಕುಮಾರ್

ಆಫ್ಘಾನಿಸ್ತಾನ:

ರೆಹ್ಮಾನುಲ್ಲಾ, ಇಬ್ರಾಹಿಂ ಜದ್ರಾನ್(ನಾಯಕ), ಗುಲ್ಬದ್ದೀನ್, ಅಜ್ಮತುಲ್ಲಾ, ಮೊಹಮ್ಮದ್ ನಬಿ, ನಜೀಬುಲ್ಲಾ, ಕರೀಂ, ಮುಜೀಬ್ ಉರ್ ರೆಹಮಾನ್, ನೂರ್ ಅಹಮ್ಮದ್, ನವೀನ್ ಉಲ್ ಹಕ್, ಫಜಲ್‌ಹಕ್ ಫಾರೂಕಿ. 

ಪಂದ್ಯ ಆರಂಭ: ಮಧ್ಯಾಹ್ನ 7ಕ್ಕೆ
ನೇರ ಪ್ರಸಾರ: ಸ್ಪೋರ್ಟ್ಸ್‌ 18, ಜಿಯೋ ಸಿನಿಮಾ
 

Follow Us:
Download App:
  • android
  • ios