World Cup 2023 ಭಾರತಕ್ಕೆ ಆಫ್ಘಾನ್ ಎದುರು ನಿರಾಯಾಸವಾಗಿ ಗೆಲ್ಲುವ ಗುರಿ..!
ಈ ಪಂದ್ಯವೂ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿಗೆ ತವರಿನ ಪಂದ್ಯವಾಗಲಿದ್ದು, ತಮ್ಮ ಹೆಸರನ್ನೇ ಇಟ್ಟಿರುವ ಪೆವಿಲಿಯನ್ ಎದುರು ಕೊಹ್ಲಿ ಬ್ಯಾಟ್ ಮಾಡಲಿದ್ದಾರೆ. ದೆಹಲಿ ಅಭಿಮಾನಿಗಳು ತಮ್ಮೂರಿನ ಕ್ರಿಕೆಟ್ ದೊರೆಯಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸುತ್ತಿದ್ದಾರೆ. ಕೆ.ಎಲ್.ರಾಹುಲ್ ತಮ್ಮ ಬ್ಯಾಟ್ ಮೂಲಕವೇ ಟೀಕಾಕಾರರ ಬಾಯಿ ಮುಚ್ಚಿಸಿದ್ದು, ಅವರ ಲಯ ಟೂರ್ನಿಯುದ್ದಕ್ಕೂ ಭಾರತಕ್ಕೆ ಬಹು ಮುಖ್ಯ ಎನಿಸಿದೆ.
ನವದೆಹಲಿ(ಅ.11): ಭಾರಿ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಿ ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಗೆಲುವು ಸಂಪಾದಿಸಿದ್ದ ಭಾರತ, ಬುಧವಾರ ಅಫ್ಘಾನಿಸ್ತಾನ ವಿರುದ್ಧ ಸೆಣಸಲಿದ್ದು ನಿಯಾರಾಸವಾಗಿ ಗೆಲ್ಲುವ ಮೂಲಕ ಮತ್ತೆರಡು ಅಂಕಗಳನ್ನು ಗಳಿಸಲು ಎದುರು ನೋಡುತ್ತಿದೆ. ನಾಯಕ ರೋಹಿತ್ ಶರ್ಮಾ ಉಲ್ಲೇಖಿಸಿದಂತೆ, 9 ವಿವಿಧ ನಗರಗಳ ಸ್ಥಳೀಯ ವಾತಾವರಣ, ಪಿಚ್‌ಗಳ ವರ್ತನೆ ಬಗ್ಗೆ ಮಾಹಿತಿ ಕಲೆಹಾಕಿ ಅವುಗಳಿಗೆ ಅನುಗುಣವಾಗಿ ತಮ್ಮ ಆಟದ ಶೈಲಿಯನ್ನು ಬದಲಿಸಿಕೊಳ್ಳುವುದು ಟೂರ್ನಿಯಲ್ಲಿ ಭಾರತದ ಮುಂದಿರುವ ಅತಿದೊಡ್ಡ ಸವಾಲು.
ಚೆನ್ನೈನ ನಿಧಾನಗತಿ ಹಾಗೂ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ತನ್ನ ಮೊದಲ ಪಂದ್ಯವನಾಡಿದ್ದ ಭಾರತ, ಬ್ಯಾಟರ್‌ಗಳ ಸ್ವರ್ಗ ಎನಿಸಿಕೊಳ್ಳುತ್ತಿರುವ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರನ್ ಹೊಳೆ ಹರಿಸಬೇಕಿದೆ. ಕಳೆದ ವಾರ ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ನಡುವಿನ ಪಂದ್ಯದಲ್ಲಿ 700ಕ್ಕೂ ಹೆಚ್ಚು ರನ್ ದಾಖಲಾಗಿತ್ತು. ಶುಭ್‌ಮನ್ ಗಿಲ್ ಈ ಪಂದ್ಯಕ್ಕೂ ಅಲಭ್ಯರಾಗಲಿರುವ ಕಾರಣ, ಇಶಾನ್ ಕಿಶನ್‌ಗೆ ಮತ್ತೊಂದು ಅವಕಾಶ ಸಿಗಲಿದೆ. ಆಸೀಸ್ ವಿರುದ್ಧ ಕಿಶನ್ ಹಾಗೂ ಶ್ರೇಯಸ್ ಅಯ್ಯರ್‌ರ ಶಾಟ್ ಆಯ್ಕೆ ಪ್ರಶ್ನಿಸುವಂಥದಾಗಿತ್ತು. ಈ ಪಂದ್ಯದಲ್ಲಿ ಇವರಿಬ್ಬರ ಮೇಲೆ ಒತ್ತಡವಿದ್ದು, ಇಬ್ಬರೂ ನಿರೀಕ್ಷೆ ಉಳಿಸಿಕೊಳ್ಳಬೇಕಿದೆ.
ICC World Cup 2023 ಲಂಕಾ ಎದುರು ದಾಖಲೆ ರನ್ ಚೇಸ್ ಮಾಡಿ ಗೆದ್ದ ಪಾಕಿಸ್ತಾನ..!
ಈ ಪಂದ್ಯವೂ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿಗೆ ತವರಿನ ಪಂದ್ಯವಾಗಲಿದ್ದು, ತಮ್ಮ ಹೆಸರನ್ನೇ ಇಟ್ಟಿರುವ ಪೆವಿಲಿಯನ್ ಎದುರು ಕೊಹ್ಲಿ ಬ್ಯಾಟ್ ಮಾಡಲಿದ್ದಾರೆ. ದೆಹಲಿ ಅಭಿಮಾನಿಗಳು ತಮ್ಮೂರಿನ ಕ್ರಿಕೆಟ್ ದೊರೆಯಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸುತ್ತಿದ್ದಾರೆ. ಕೆ.ಎಲ್.ರಾಹುಲ್ ತಮ್ಮ ಬ್ಯಾಟ್ ಮೂಲಕವೇ ಟೀಕಾಕಾರರ ಬಾಯಿ ಮುಚ್ಚಿಸಿದ್ದು, ಅವರ ಲಯ ಟೂರ್ನಿಯುದ್ದಕ್ಕೂ ಭಾರತಕ್ಕೆ ಬಹು ಮುಖ್ಯ ಎನಿಸಿದೆ.
ಬೌಲಿಂಗ್‌ನಲ್ಲಿ ಭಾರತ ಒಂದು ಬದಲಾವಣೆ ಮಾಡುವ ಸಾಧ್ಯತೆ ಇದ್ದು, ಹೆಚ್ಚುವರಿ ವೇಗಿಗಳನ್ನು ಆಡಿಸಲು ನಿರ್ಧರಿಸಬಹುದು. ಹೀಗಾದಲ್ಲಿ ಆರ್.ಅಶ್ವಿನ್ ತಮ್ಮ ಜಾಗವನ್ನು ಮೊಹಮದ್ ಶಮಿಗೆ ಬಿಟ್ಟುಕೊಡಬೇಕಾಗುತ್ತದೆ. ಆಸೀಸ್ ವಿರುದ್ಧ ಮಧ್ಯ ಓವರ್‌ಗಳಲ್ಲಿ 6 ವಿಕೆಟ್ ಕಬಳಿಸಿದ್ದ ಭಾರತೀಯ ಬೌಲರ್‌ಗಳು ಆಫ್ಘನ್ ಬ್ಯಾಟಿಂಗ್ ಪಡೆಯನ್ನು ಧೂಳೀಪಟಗೊಳಿಸಿ ತಂಡದ ನೆಟ್ ರನ್‌ರೇಟ್‌ಗೆ ದೊಡ್ಡ ಕೊಡುಗೆ ನೀಡುವ ಉತ್ಸಾಹದಲ್ಲಿದ್ದಾರೆ.
World Cup 2023 ಆಸೀಸ್ ಎದುರಿನ ಗೆಲುವಿನ ಖುಷಿಯಲ್ಲಿದ್ದ ಟೀಂ ಇಂಡಿಯಾಗೆ ಮತ್ತೊಂದು ಬಿಗ್ ಶಾಕ್..!
ಮತ್ತೊಂದೆಡೆ ಬಾಂಗ್ಲಾದೇಶ ವಿರುದ್ಧ ಹೀನಾಯ ಸೋಲಿನೊಂದಿಗೆ ಟೂರ್ನಿ ಆರಂಭಿಸಿರುವ ಅಫ್ಘಾನಿಸ್ತಾನ, ಈ ಪಂದ್ಯದಲ್ಲಿ ಭಾರತದ ಲೆಕ್ಕಾಚಾರ ತಲೆಕೆಳಗಾಗಿಸಲು ಕಾತರಿಸುತ್ತಿದೆ. ಯಾವುದೇ ಎದುರಾಳಿಗೆ ಆಘಾತ ನೀಡಬಲ್ಲ ಸಾಮರ್ಥ್ಯ ಆಫ್ಘನ್‌ಗಿದೆಯಾದರೂ, ಭಾರತವೇ ಗೆಲ್ಲುವ ಫೇವರಿಟ್ಸ್ ಆಗಿ ಪಂದ್ಯಕ್ಕೆ ಕಾಲಿಡಲಿದೆ.
ದೆಹಲಿಯ ಲಜ್‌ಪತ್ ನಗರದಲ್ಲಿ ಗಣನೀಯ ಪ್ರಮಾಣದಲ್ಲಿ ಆಫ್ಘನ್ನರಿದ್ದು, ಹಶ್ಮತುಲ್ಲಾ ಶಾಹಿದಿ ಪಡೆಗೆ ಕ್ರೀಡಾಂಗಣದಲ್ಲಿ ಉತ್ತಮ ಬೆಂಬಲವೂ ಸಿಗುವ ನಿರೀಕ್ಷೆ ಇದೆ. ಸ್ಪಿನ್ನರ್‌ಗಳೇ ಆಫ್ಘನ್‌ನ ಪ್ರಮುಖ ಅಸ್ತ್ರಗಳಾಗಿದ್ದು, ಈ ಪಂದ್ಯದಲ್ಲಿ ಯುವ ಸ್ಪಿನ್ನರ್ ನೂರ್ ಅಹ್ಮದ್‌ರನ್ನು ಕಣಕ್ಕಿಳಿಸುವ ಸಾಧ್ಯತೆಯೂ ಇದೆ. ಟಿ20ಯಲ್ಲಿ ಸಾಧಿಸದಷ್ಟು ಯಶಸ್ಸು ರಶೀದ್ ಖಾನ್ ಏಕದಿನದಲ್ಲಿ ಕಾಣದೆ ಇರುವುದು ತಂಡದ ಚಿಂತೆಗೆ ಕಾರಣವಾಗಿರುವುದು ಸುಳ್ಳಲ್ಲ.
ಪಿಚ್ ರಿಪೋರ್ಟ್: ವಿಶ್ವಕಪ್‌ಗಾಗಿ ಹೊಸ ಪಿಚ್ ಸಿದ್ಧ ಪಡಿಸಿದ್ದು, ಅದು ಬ್ಯಾಟಿಂಗ್ ಸ್ನೇಹಿಯಾಗಿದೆ. ಜೊತೆಗೆ ಬೌಂಡರಿಗಳು ಸಣ್ಣದಾಗಿರುವ ಕಾರಣ ಹೆಚ್ಚು ಬೌಂಡರಿ, ಸಿಕ್ಸರ್‌ಗಳನ್ನು ನಿರೀಕ್ಷಿಸಬಹುದು. ದ.ಆಫ್ರಿಕಾ - ಲಂಕಾ ನಡುವಿನ ಪಂದ್ಯದಲ್ಲಿ 31 ಸಿಕ್ಸರ್‌ಗಳು ದಾಖಲಾಗಿದ್ದವು. ಈ ಪಂದ್ಯದಲ್ಲೂ ರನ್ ಹೊಳೆ ಹರಿಯುವ ನಿರೀಕ್ಷೆ ಇದೆ. ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟ್ ಮಾಡುವ ಸಾಧ್ಯತೆ ಹೆಚ್ಚು
ಸಂಭವನೀಯ ಆಟಗಾರರ ಪಟ್ಟಿ:
ಭಾರತ:
ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಅಫ್ಘಾನಿಸ್ತಾನ:
ರೆಹಮನುಲ್ಲಾ ಗುರ್ಬಾಜ್, ಇಬ್ರಾಹಿಂ, ರಹಮತ್, ಹಶ್ಮತುಲ್ಲಾ(ನಾಯಕ), ಮೊಹಮ್ಮದ್ ನಬಿ, ನಜೀಬುಲ್ಲಾ, ಅಜ್ಮತುಲ್ಲಾ, ರಶೀದ್ ಖಾನ್, ನವೀನ್, ಮುಜೀಬ್ ಉರ್ ರೆಹಮಾನ್, ಫಜಲ್‌ಹಕ್ ಫಾರೂಕಿ.
ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಟೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್.