ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ನಾಯಕ ರೋಹಿತ್ ಶರ್ಮಾ ಅವರನ್ನು ಸಿಡ್ನಿ ಟೆಸ್ಟ್‌ನಿಂದ ಕೈಬಿಡಲಾಗಿದೆ. ರೋಹಿತ್ 'ವಿಶ್ರಾಂತಿ' ಪಡೆಯುತ್ತಿದ್ದಾರೆ ಎಂದು ಅಧಿಕೃತವಾಗಿ ಹೇಳಲಾಗಿದ್ದರೂ, ಅವರ ಟೆಸ್ಟ್ ವೃತ್ತಿಜೀವನ ಅಂತಿಮ ಹಂತದಲ್ಲಿದೆ ಎಂದು ವರದಿಯಾಗಿದೆ. ಟೆಸ್ಟ್ ಸರಣಿ ಮಧ್ಯೆ ತಂಡದಿಂದ ಹೊರಬಿದ್ದ ಭಾರತದ ಮೊದಲ ನಾಯಕ ರೋಹಿತ್. ಬುಮ್ರಾ ಭವಿಷ್ಯದಲ್ಲಿ ನಾಯಕರಾಗುವ ಸಾಧ್ಯತೆ ಇದೆ.
ಸಿಡ್ನಿ: ಕಳಪೆ ಪ್ರದರ್ಶನ ನೀಡುತ್ತಿದ್ದ ನಾಯಕ ರೋಹಿತ್ ಶರ್ಮಾ ಅವರನ್ನೇ ತಂಡದಿಂದ ಹೊರಗಿಟ್ಟು ಭಾರತ, ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧ 5ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದೆ. ರೋಹಿತ್‌ರನ್ನು ಕೈ ಬಿಟ್ಟು ಆಡಲು ನಿರ್ಧರಿಸಿದ್ದ ಬಗ್ಗೆ ಗುರುವಾರವೇ ಮಾಧ್ಯಮಗಳಲ್ಲಿ ವರದಿಯಾಗಿತ್ತು. ನಿರೀಕ್ಷೆಯಂತೆಯೇ ರೋಹಿತ್‌ಗೆ ಸಿಡ್ನಿ ಟೆಸ್ಟ್‌ನಲ್ಲಿ ಆಡುವ ಅವಕಾಶ ಸಿಗಲಿಲ್ಲ.
ರೋಹಿತ್ ಈ ಪಂದ್ಯದಲ್ಲಿ ‘ವಿಶ್ರಾಂತಿ’ ಪಡೆದಿದ್ದಾರೆ ಎಂದು ತಂಡ ತಿಳಿಸಿದೆ. ಆದರೆ ಕಳಪೆ ಪ್ರದರ್ಶನ ಕಾರಣಕ್ಕೆ ಅವರನ್ನು ಆಯ್ಕೆ ಸಮಿತಿಯೇ ಹೊರಗಿಟ್ಟಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ರೋಹಿತ್ ಇನ್ನು ಭಾರತ ಟೆಸ್ಟ್ ಪಂದ್ಯದಲ್ಲಿ ಕಾಣಸಿಗುವುದಿಲ್ಲ. ಅವರ ಟೆಸ್ಟ್ ವೃತ್ತಿ ಬದುಕು ಕೊನೆಗೊಂಡಿದ್ದು, ಆಯ್ಕೆ ಸಮಿತಿ ಬೇರೆ ಆಯ್ಕೆಗಳ ಮೇಲೆ ಕಣ್ಣಿಟ್ಟಿದೆ ಎಂದು ವರದಿಯಾಗಿದೆ. ಈ ಬಗ್ಗೆ ಸ್ವತಃ ಆಯ್ಕೆ ಸಮಿತಿಯೇ ರೋಹಿತ್‌ಗೆ ಮಾಹಿತಿ ನೀಡಿದೆ ಎಂದು ಹೇಳಲಾಗುತ್ತಿದೆ.
ಸಿಡ್ನಿ ಟೆಸ್ಟ್; ಸಿರಾಜ್, ಪ್ರಸಿದ್ಧ್ ಮಾರಕ ದಾಳಿ, ಟೀಂ ಇಂಡಿಯಾಗೆ ಅಲ್ಪ ಮುನ್ನಡೆ!
2013ರಲ್ಲಿ ಟೆಸ್ಟ್ ಪಾದಾರ್ಪಣೆ ಮಾಡಿದ್ದ ರೋಹಿತ್, ಇತ್ತೀಚೆಗೆ ಮೆಲ್ಬರ್ನ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಕಣಕ್ಕಿಳಿದಿದ್ದರು. ಅದೇ ಅವರ ಕೊನೆ ಟೆಸ್ಟ್ ಪಂದ್ಯ ಆಗಲಿದೆ ಎಂದು ತಿಳಿದುಬಂದಿದೆ. ಅವರು ಈ ವರೆಗೂ ಭಾರತ ಪರ 67 ಟೆಸ್ಟ್ ಆಡಿದ್ದು, 4301 ರನ್ ಗಳಿಸಿದ್ದಾರೆ. ಅಂದಹಾಗೆ, ಟೆಸ್ಟ್ ಸರಣಿ ಮಧ್ಯೆ ತಂಡದಿಂದ ಹೊರಬಿದ್ದ ಭಾರತದ ಮೊದಲ ನಾಯಕ ರೋಹಿತ್ ಶರ್ಮಾ.
ಸಿಡ್ನಿ ಟೆಸ್ಟ್‌ನಿಂದ ರೋಹಿತ್ ಶರ್ಮಾ ಹೊರಬಿದ್ದಿದ್ದೇಕೆ? ಅಚ್ಚರಿ ಮಾಹಿತಿ ಬಿಚ್ಚಿಟ್ಟ ಬುಮ್ರಾ
ರೋಹಿತ್ ಸ್ಥಾನಕ್ಕೆ ಕುತ್ತು: ಬುಮ್ರಾ ಕಾಯಂ ನಾಯಕ?
ಭಾರತದ ಖಾಯಂ ನಾಯಕ ರೋಹಿತ್‌ರ ಕಳಪೆ ಪ್ರದರ್ಶನ ತಂಡದಲ್ಲಿ ಅವರ ಸ್ಥಾನಕ್ಕೇ ಕುತ್ತು ತಂದಿದೆ. ರೋಹಿತ್ ಶರ್ಮಾ ಸಿಡ್ನಿ ಟೆಸ್ಟ್‌ನಿಂದ ಹೊರಗುಳಿಯುವ ಮೂಲಕ ಕಳಪೆ ಪ್ರದರ್ಶನದಿಂದ ತಂಡದಿಂದ ಹೊರಬಿದ್ದ ಭಾರತದ ಮೊದಲ ನಾಯಕ ಎಂಬ ಅಪಖ್ಯಾತಿಗೆ ಗುರಿಯಾಗಿದ್ದಾರೆ. ಇದೀಗ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಭವಿಷ್ಯದಲ್ಲಿ ತಂಡದ ಕಾಯಂ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಪರ್ತ್ ಟೆಸ್ಟ್‌ನಲ್ಲಿ ರೋಹಿತ್ ಗೈರಿನಲ್ಲಿ ಬೂಮ್ರಾ ತಂಡವನ್ನು ಮುನ್ನಡೆಸಿದ್ದರು. ಭಾರತ ಆಡಿದ ಕಳೆದ 7 ಪಂದ್ಯಗಳ ಪೈಕಿ ಗೆದ್ದಿದ್ದು ಪರ್ತ್ ಟೆಸ್ಟ್‌ನಲ್ಲಿ ಮಾತ್ರ ಎಂಬುದು ಗಮನಾರ್ಹ.
