ಸಿಡ್ನಿ(ಜ.11): ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಕೊನೆಯ ದಿನದಾಟ ರೋಚಕ ಘಟ್ಟ ತಲುಪಿದ್ದು, ಟೀಂ ಇಂಡಿಯಾ ಲಂಚ್ ಬ್ರೇಕ್‌ ವೇಳೆಗೆ ಕೇವಲ 3 ವಿಕೆಟ್‌ ಕಳೆದುಕೊಂಡು 206 ರನ್‌ ಗಳಿಸಿದೆ. ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಪಂತ್ ಅಬ್ಬರದ ಬ್ಯಾಟಿಂಗ್‌ ಮೂಲಕ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದ್ದಾರೆ.

ಹೌದು, ಕೊನೆಯ ದಿನ ಗೆಲ್ಲಲು ಭಾರತಕ್ಕೆ ಬರೋಬ್ಬರಿ 309 ರನ್‌ಗಳ ಅಗತ್ಯವಿತ್ತು. ಕಳೆದ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ನಾಯಕ ರಹಾನೆ ಕೇವಲ 4 ರನ್‌ ಬಾರಿಸಿ ವಿಕೆಟ್‌ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಆದರೆ ನಾಲ್ಕನೇ ವಿಕೆಟ್‌ ಜತೆಯಾಟ ಟೆಸ್ಟ್‌ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಹಾಗೂ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಆಕರ್ಷಕ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. 

ಸಿಡ್ನಿ ಟೆಸ್ಟ್ ಅಂತಿಮ ದಿನ ಟೀಂ ಇಂಡಿಯಾಗೆ 309 ಸವಾಲು!

ಪೂಜಾರ 147 ಎಸೆತಗಳನ್ನು ಎದುರಿಸಿ ಕೇವಲ 41 ರನ್‌ಗಳನ್ನು ಬಾರಿಸುವ ಮೂಲಕ ಆಸ್ಟ್ರೇಲಿಯಾ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಇನ್ನು ಸೀಮಿತ ಓವರ್‌ಗಳ ಪಂದ್ಯದಂತೆ ಬ್ಯಾಟಿಂಗ್‌ ನಡೆಸಿದ ರಿಷಭ್ ಪಂತ್ ಕೇವಲ 97 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಮನಮೋಹಕ ಸಿಕ್ಸರ್‌ಗಳ ನೆರವಿನಿಂದ 73 ರನ್‌ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದ್ದಾರೆ.