ಫೆಬ್ರವರಿ ೧೯ರಿಂದ ಪಾಕಿಸ್ತಾನದಲ್ಲಿ ಆರಂಭವಾಗುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ರವಿಶಾಸ್ತ್ರಿ ಮತ್ತು ರಿಕಿ ಪಾಂಟಿಂಗ್ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಫೈನಲ್ ತಲುಪಲಿವೆ ಎಂದು ಭವಿಷ್ಯ ನುಡಿದಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಸೆಮಿಫೈನಲ್ ತಲುಪಬಹುದು ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು: ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಇದೇ ಫೆಬ್ರವರಿ 19ರಿಂದ ಪಾಕಿಸ್ತಾನದಲ್ಲಿ ನಡೆಯಲಿದೆ. ಮಿನಿ ವಿಶ್ವಕಪ್ ಎಂದೇ ಕರೆಸಿಕೊಳ್ಳುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿದ್ದರೂ, ಭಾರತ ತಂಡವು ಪಾಕ್ ಪ್ರವಾಸ ಮಾಡಲು ಹಿಂದೇಟು ಹಾಕಿದೆ. ಹೀಗಾಗಿ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಯುಇನ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಆಡಲಿದೆ. ಇನ್ನು ಇವೆಲ್ಲದರ ನಡುವೆ ಬರೋಬ್ಬರಿ 7 ವರ್ಷಗಳ ಬಳಿಕ ನಡೆಯುತ್ತಿರುವ ಈ ಪ್ರತಿಷ್ಠಿತ ಐಸಿಸಿ ಟೂರ್ನಿಯನ್ನು ಗೆಲ್ಲೋರು ಯಾರು? ಯಾವ ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಮುಖಾಮುಖಿಯಾಗಲಿವೆ ಎನ್ನುವ ಕುತೂಹಲ ಜೋರಾಗಿದೆ. ಇದೆಲ್ಲದರ ನಡುವೆ ಐಸಿಸಿ ಕಾರ್ಯಕ್ರಮವೊಂದರಲ್ಲಿ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಹಾಗೂ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಈ ಟೂರ್ನಿಯ ಕುರಿತಂತೆ ಭವಿಷ್ಯ ನುಡಿದಿದ್ದಾರೆ.

ಜಗತ್ತಿನ 8 ಬಲಿಷ್ಠ ಕ್ರಿಕೆಟ್ ತಂಡಗಳು ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ. ರವಿಶಾಸ್ತ್ರಿ ಹಾಗೂ ರಿಕಿ ಪಾಂಟಿಂಗ್ ಇಬ್ಬರೂ ಸಹಾ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ ಎಂದು ಭವಿಷ್ಯ ನುಡಿದಿದ್ದಾರೆ.

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಆಡ್ತಾರಾ ವೇಗಿ ಬುಮ್ರಾ: ಇಂದೇ ಭವಿಷ್ಯ ಇಂದು ನಿರ್ಧಾರ

ಐಸಿಸಿ ರಿವ್ಯೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರವಿಶಾಸ್ತ್ರಿ, 'ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಮುಖಾಮುಖಿಯಾಗಲಿವೆ. ಇತ್ತೀಚಿಗಿನ ಐಸಿಸಿ ಮೆಗಾ ಟೂರ್ನಿಗಳಲ್ಲಿನ ಈ ಎರಡು ತಂಡಗಳ ಪ್ರದರ್ಶನವನ್ನು ಗಮನಿಸಿದರೆ ನನಗೆ ಹೀಗೆ ಅನಿಸುತ್ತಿದೆ. ಇನ್ನು ಎರಡೂ ತಂಡಗಳಲ್ಲೂ ಒಳ್ಳೆಯ ಪ್ರತಿಭಾನ್ವಿತ ಅಟಗಾರರಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡಗಳು ಕೂಡಾ ಸೆಮಿಫೈನಲ್‌ ಹಂತಕ್ಕೇರಲಿವೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಆಸ್ಟ್ರೇಲಿಯಾ ಕಂಡ ಯಶಸ್ವಿ ನಾಯಕರಲ್ಲಿ ಅಗ್ರಗಣ್ಯರಾಗಿ ಗುರುತಿಸಿಕೊಂಡಿರುವ ರಿಕಿ ಪಾಂಟಿಂಗ್ ಕೂಡಾ ರವಿಶಾಸ್ತ್ರಿ ಅವರ ಮಾತಿಗೆ ಸಮ್ಮತಿ ಸೂಚಿಸಿದ್ದಾರೆ. ಮಹತ್ವದ ಟೂರ್ನಿಗಳಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಅಮೋಘ ಪ್ರದರ್ಶನ ನೀಡುತ್ತಾ ಬಂದಿವೆ. ಎರಡು ತಂಡಗಳಲ್ಲೂ ಗುಣಮಟ್ಟದ ಆಟಗಾರರಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳೇ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ ಎಂದು ಪಂಟರ್ ಅಭಿಪ್ರಾಯಪಟ್ಟಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಅತ್ಯಂತ ಯಶಸ್ವಿ ತಂಡಗಳಾಗಿ ಗುರುತಿಸಿಕೊಂಡಿವೆ. ಟೀಂ ಇಂಡಿಯಾ 2002(ಲಂಕಾ ಜತೆ ಜಂಟಿ) ಹಾಗೂ 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿವೆ. ಇನ್ನು ಆಸ್ಟ್ರೇಲಿಯಾ ತಂಡವು 2006 ಹಾಗೂ 2009ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಕ್ಕಿದೆ.

ಇನ್ನು ಈ ಎರಡು ತಂಡಗಳ ಇತ್ತೀಚಿಗಿನ ಐಸಿಸಿ ಟೂರ್ನಿಯ ಪ್ರದರ್ಶನವನ್ನು ಗಮನಿಸುವುದಾದರೇ, 2023ರಲ್ಲಿ ನಡೆದ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಹಾಗೂ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲೂ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಈ ಎರಡೂ ಟೂರ್ನಿಯಲ್ಲೂ ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು 2024ರಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗುವ ಮೂಲಕ ದಶಕದ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿತ್ತು.

ಇನ್ನು ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಈ ಬಾರಿ ಭಾರತ, ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ತಂಡಗಳು ಸೆಮೀಸ್ ಪ್ರವೇಶಿಸಲಿವೆ ಎಂದು ಅಭಿಪ್ರಾಯಪಟ್ಟಿದ್ದರು. ಇದೇ ವೇಳೆ ಆಸ್ಟ್ರೇಲಿಯಾ ಈ ಬಾರಿ ಸೆಮೀಸ್ ಪ್ರವೇಶಿಸುವುದಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.