ಐಪಿಎಲ್‌ 2026 ರ ಕ್ವಾಲಿಫೈಯರ್‌ 1 ಪಂದ್ಯದಲ್ಲಿ, ರಜತ್ ಪಾಟೀದಾರ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ 254 ರನ್‌ಗಳ ದಾಖಲೆಯ ಮೊತ್ತ ಕಲೆಹಾಕಿತು. ಈ ಬೃಹತ್ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡವನ್ನು 92 ರನ್‌ಗಳಿಂದ ಮಣಿಸಿದ ಆರ್‌ಸಿಬಿ, ಸತತ ಎರಡನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿದೆ.

ಧರ್ಮಶಾಲಾ (ಮೇ.26): ಐಪಿಎಲ್‌ 2026 ಕ್ವಾಲಿಫೈಯರ್‌ 1 ಪಂದ್ಯದಲ್ಲಿ ಹಿಮಾಲಯದಂತಹ 254 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಬಳಿಕ ಬೌಲಿಂಗ್‌ನಲ್ಲೂ ಸಂಘಟಿತ ಪ್ರದರ್ಶನ ನೀಡುವ ಮೂಲಕ ಗುಜರಾತ್ ಟೈಟನ್ಸ್ ತಂಡವನ್ನು 92 ರನ್‌ಗಳಿಂದ ಸೋಲಿಸಿ ಸತತ 2ನೇ ವರ್ಷ ಐಪಿಎಲ್‌ ಫೈನಲ್‌ಗೇರಿದೆ. ಆರ್‌ಸಿಬಿ ನೀಡಿದ್ದ 255 ರನ್‌ಗಳ ಮಹಾ ಗುರಿಯನ್ನು ಬೆನ್ನಟ್ಟಲಾಗದೆ ತತ್ತರಿಸಿದ ಗುಜರಾತ್‌ ಟೈಟಾನ್ಸ್‌, 19.3 ಓವರ್‌ಗಳಲ್ಲಿ 162 ರನ್‌ ಬಾರಿಸಿ ಸೋಲೊಪ್ಪಿಕೊಂಡಿದೆ. ಆ ಮೂಲಕ ಐಪಿಎಲ್‌ ಟ್ರೋಫಿ ಉಳಿಸಿಕೊಳ್ಳುವ ಹಾದಿಯಲ್ಲಿ ಆರ್‌ಸಿಬಿ ಇನ್ನೊಂದೇ ಗೆಲುವಿನ ದೂರದಲ್ಲಿದೆ.

ಆರ್‌ಸಿಬಿ ಬೌಲರ್‌ಗಳ ಮಾರಕ ದಾಳಿಗೆ ಗುಜರಾತ್ ತತ್ತರ!

ಬೃಹತ್ ಮೊತ್ತವನ್ನು ಬೆನ್ನಟ್ಟ ಹೊರಟ ಗುಜರಾತ್ ಟೈಟನ್ಸ್ ತಂಡಕ್ಕೆ ಆರಂಭದಲ್ಲೇ ಆರ್‌ಸಿಬಿ ಬೌಲರ್‌ಗಳು ಸರಣಿ ಆಘಾತ ನೀಡಿದರು. ನಾಯಕ ಶುಭ್‌ಮನ್ ಗಿಲ್ ಕೇವಲ 2 ರನ್ ಗಳಿಸಿ ಭುವನೇಶ್ವರ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರೆ, ಸಾಯ್ ಸುದರ್ಶನ್ (14 ರನ್) ಹಿಟ್ ವಿಕೆಟ್ ಆಗಿ ಜೇಕಬ್ ಡಫಿಗೆ ಶರಣಾದರು. ಸ್ಪೋಟಕ ಬ್ಯಾಟಿಂಗ್ ಆರಂಭಿಸಿದ್ದ ಜೋಸ್ ಬಟ್ಲರ್ (29 ರನ್, 11 ಎಸೆತ, 4 ಬೌಂಡರಿ, 2 ಸಿಕ್ಸರ್) ಅವರನ್ನು ಜೋಶ್ ಹ್ಯಾಜಲ್‌ವುಡ್ ಪೆವಿಲಿಯನ್‌ಗೆ ಅಟ್ಟುವ ಮೂಲಕ ಗುಜರಾತ್ ತಂಡದ ಬೆನ್ನುಮೂಳೆ ಮುರಿದರು.

ಮಧ್ಯಮ ಕ್ರಮಾಂಕ ಧ್ವಂಸ

ನಿಶಾಂತ್ ಸಿಂಧು (5) ಮತ್ತು ವಾಷಿಂಗ್ಟನ್ ಸುಂದರ್ (8) ಆರ್‌ಸಿಬಿ ಬೌಲಿಂಗ್‌ಗೆ ಉತ್ತರಿಸಲಾಗದೆ ವಿಕೆಟ್ ಕಳೆದುಕೊಂಡರು. ಜೇಸನ್ ಹೋಲ್ಡರ್ ಶೂನ್ಯ ಸುತ್ತಿದರೆ, ರಶೀದ್ ಖಾನ್ (8) ಹಾಗೂ ಕಗಿಸೊ ರಬಾಡ (9) ಬಂದಷ್ಟೇ ವೇಗವಾಗಿ ಮರಳಿದರು. ಕೊನೆಯಲ್ಲಿ ರಾಹುಲ್‌ ಟೆವಾಟಿಯಾ 68 ರನ್‌ ಬಾರಿಸಿ ಪ್ರತಿರೋಧ ತೋರಿದ್ದು ಬಿಟ್ಟರೆ, ಉಳಿದರ ಆಟ ನಗಣ್ಯವಾಗಿತ್ತು. ಆರ್‌ಸಿಬಿ ಪರ ಅತ್ಯಂತ ಕರಾರುವಾಕ್ ಬೌಲಿಂಗ್ ಪ್ರದರ್ಶಿಸಿದ ನ್ಯೂಜಿಲೆಂಡ್ ವೇಗಿ ಜೇಕಬ್ ಡಫಿ 3 ಪ್ರಮುಖ ವಿಕೆಟ್ (ಸಾಯ್ ಸುದರ್ಶನ್, ವಾಷಿಂಗ್ಟನ್ ಸುಂದರ್, ರಶೀದ್ ಖಾನ್) ಕಬಳಿಸುವ ಮೂಲಕ ಗುಜರಾತ್ ಬ್ಯಾಟಿಂಗ್ ಕೋಟೆಯನ್ನು ನಡುಗಿಸಿದರು. ಇವರಿಗೆ ಸಾಥ್ ನೀಡಿದ ರಾಸಿಖ್ ಸಲಾಮ್ ದಾರ್ , ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ ತಲಾ 2 ವಿಕೆಟ್ ಹಂಚಿಕೊಂಡರು.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿತು. ಈ ಮೂಲಕ ಐಪಿಎಲ್ ಪ್ಲೇ-ಆಫ್ ಇತಿಹಾಸದಲ್ಲೇ ತಂಡವೊಂದು ಗಳಿಸಿದ ಅತ್ಯಧಿಕ ರನ್‌ಗಳ ಸರ್ವಕಾಲಿಕ ದಾಖಲೆಯನ್ನು ಬೆಂಗಳೂರು ತಂಡ ತನ್ನ ಹೆಸರಿಗೆ ಬರೆದುಕೊಂಡಿದೆ. ಪಂದ್ಯದಲ್ಲಿ ಆರ್‌ಸಿಬಿ 234 ರನ್ ದಾಟುತ್ತಿದ್ದಂತೆ ಈ ಮೈಲಿಗಲ್ಲು ನಿರ್ಮಾಣವಾಯಿತು. ಇದಕ್ಕೂ ಮುನ್ನ ಈ ದಾಖಲೆ ಗುಜರಾತ್ ಟೈಟನ್ಸ್ ಹೆಸರಿನಲ್ಲಿತ್ತು. ಗುಜರಾತ್ ತಂಡವು 2023ರ ಕ್ವಾಲಿಫೈಯರ್ 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 3 ವಿಕೆಟ್ ಕಳೆದುಕೊಂಡು 233 ರನ್ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಇದೀಗ ಬರೋಬ್ಬರಿ 3 ವರ್ಷಗಳ ಬಳಿಕ ಆರ್‌ಸಿಬಿ ಈ ದಾಖಲೆಯನ್ನು ಧೂಳೀಪಟ ಮಾಡಿದೆ.

ನಾಯಕ ರಜತ್ ಪಾಟೀದಾರ್, ಕೊಹ್ಲಿ ದಂಡಯಾತ್ರೆ

ಆರ್‌ಸಿಬಿ ಪರ ನಾಯಕ ರಜತ್ ಪಾಟೀದಾರ್ ನಾಯಕನ ಆಟವಾಡಿ ಗುಜರಾತ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 33 ಎಸೆತಗಳನ್ನು ಎದುರಿಸಿದ ಪಾಟೀದಾರ್ 9 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ ಅಜೇಯ 93 ರನ್ ಚಚ್ಚಿ ಧರ್ಮಶಾಲಾ ಮೈದಾನದಲ್ಲಿ ರನ್ ಮಳೆ ಹರಿಸಿದರು. ಉಳಿದಂತೆ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ತಲಾ 43 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ 30 ರನ್ ಕೊಡುಗೆ ನೀಡಿದರೆ, ವೆಂಕಟೇಶ್ ಅಯ್ಯರ್ 19 ರನ್ ಗಳಿಸಿದರು. ಕೊನೆಯಲ್ಲಿ ಜಿತೇಶ್ ಶರ್ಮಾ ಅಜೇಯ 15 ರನ್ ಗಳಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ಗುಜರಾತ್ ಪರ ಜೇಸನ್ ಹೋಲ್ಡರ್ ಮತ್ತು ಕಗಿಸೊ ರಬಾಡ ತಲಾ 2 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ 1 ವಿಕೆಟ್ ಉರುಳಿಸಿದರು.