ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಸೋಲನುಭವಿಸಿದ್ದು, ನಾಯಕ ರಜತ್ ಪಟೀದಾರ್ ಅವರ ವಿವಾದಾತ್ಮಕ ಕ್ಯಾಚ್ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಥರ್ಡ್ ಅಂಪೈರ್ ತೀರ್ಪಿನ ಬಗ್ಗೆ ತಂಡದ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಘಟನೆಯು ಪಂದ್ಯದ ಫಲಿತಾಂಶದಷ್ಟೇ ಸದ್ದು ಮಾಡುತ್ತಿದೆ.

ಬೆಂಗಳೂರು (ಮೇ.1): ತವರು ಮೈದಾನದಲ್ಲಿ ನಡೆದ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲನುಭವಿಸಿದೆ. ಆದರೆ, ಪಂದ್ಯದ ಫಲಿತಾಂಶಕ್ಕಿಂತ ಹೆಚ್ಚಾಗಿ ಆರ್‌ಸಿಬಿ ನಾಯಕ ರಜತ್ ಪಟೀದಾರ್‌ ಅವರ ಔಟ್ ಆದ ರೀತಿ ಮತ್ತು ಜೇಸನ್ ಹೋಲ್ಡರ್ ಹಿಡಿದ ವಿವಾದಾತ್ಮಕ ಕ್ಯಾಚ್ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ತೀರ್ಪಿನಿಂದ ಆಕ್ರೋಶಗೊಂಡ ವಿರಾಟ್ ಕೊಹ್ಲಿ ಮೈದಾನದ ಹೊರಗಿನ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದ ಘಟನೆಯೂ ನಡೆದಿದೆ.

Add Asianetnews Kannada as a Preferred SourcegooglePreferred

ಆರ್‌ಸಿಬಿ ನಾಯಕ ರಜತ್‌ ಪಟೀದಾರ್‌ ಕ್ಯಾಚ್‌ಅನ್ನು ಜೇಸನ್‌ ಹೋಲ್ಡರ್ ಪಡೆದುಕೊಂಡಿದ್ದರು. ಆದರೆ, ಆ ಚೆಂಡು ನೆಲಕ್ಕೆ ತಗುಲಿದೆ ಎಂದು ಆರ್‌ಸಿಬಿ ಕ್ಯಾಂಪ್ ಭಾವಿಸಿತ್ತು. ಥರ್ಡ್ ಅಂಪೈರ್ ಸರಿಯಾಗಿ ಪರಿಶೀಲಿಸದೆ ಔಟ್ ಎಂದು ಘೋಷಿಸಿದ್ದು ಇಡೀ ತಂಡದ ಆಕ್ರೋಶಕ್ಕೆ ಕಾರಣವಾಯಿತು. ಪಂದ್ಯದ ನಂತರ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಈ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ.

ಭುವನೇಶ್ವರ್ ಕುಮಾರ್ ಹೇಳಿದ್ದೇನು?

ಐಪಿಎಲ್ 2026ರ ಪ್ರಸಕ್ತ ಸಾಲಿನ ಅತಿ ಹೆಚ್ಚು ವಿಕೆಟ್ ಪಡೆದಿರುವ ಭುವನೇಶ್ವರ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ: 'ದೊಡ್ಡ ಪರದೆಯ ಮೇಲೆ ದೃಶ್ಯಗಳನ್ನು ನೋಡಿದಾಗ ಚೆಂಡು ನೆಲಕ್ಕೆ ತಗುಲಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಅಂಪೈರ್ ಆ ವಿಡಿಯೋವನ್ನು ಇನ್ನೂ ಕೆಲವು ಆಂಗಲ್‌ಗಳಿಂದ ಸರಿಯಾಗಿ ಪರಿಶೀಲಿಸಬೇಕಿತ್ತು ಎಂಬುದು ನಮ್ಮ ಇಡೀ ತಂಡದ ಆಶಯವಾಗಿತ್ತು. ಚೆಂಡು ನೆಲಕ್ಕೆ ತಗುಲಿದಂತೆ ನಮಗೆ ಕಂಡಿತು, ಆದರೆ ಅಂಪೈರ್ ಏನು ಹೇಳಿದರು ಅಥವಾ ಅದು ನಿಯಮದ ವ್ಯಾಪ್ತಿಯಲ್ಲಿತ್ತೇ ಎಂಬ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ' ಎಂದಿದ್ದಾರೆ.

ಆರ್‌ಸಿಬಿ ಬ್ಯಾಟಿಂಗ್ ವೈಫಲ್ಯ

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಬ್ಯಾಟಿಂಗ್ ವಿಭಾಗ ಅಷ್ಟಾಗಿ ಕೈಕೊಟ್ಟಿರಲಿಲ್ಲ. ವಿರಾಟ್ ಕೊಹ್ಲಿ ನೀಡಿದ ಉತ್ತಮ ಆರಂಭದ ಹೊರತಾಗಿಯೂ, ಬೆಂಗಳೂರು ತಂಡ ಕೇವಲ 155 ರನ್‌ಗಳಿಗೆ ಆಲೌಟ್ ಆಯಿತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡ ಇನ್ನು 4 ಓವರ್‌ಗಳು ಬಾಕಿ ಇರುವಂತೆಯೇ ಭರ್ಜರಿ ಜಯ ದಾಖಲಿಸಿತು.

"ಇಂದು ನಮಗೆ ಕೆಟ್ಟ ದಿನ ಅಷ್ಟೇ, ಅವರು ನಮಗಿಂತ ಚೆನ್ನಾಗಿ ಆಡಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ನಾವು 14 ಪಂದ್ಯಗಳ ದೊಡ್ಡ ಟೂರ್ನಿಯಲ್ಲಿ ಎಲ್ಲ ಪಂದ್ಯಗಳಲ್ಲೂ ಪರಿಪೂರ್ಣವಾಗಿರಲು ಸಾಧ್ಯವಿಲ್ಲ. ಈ ಹಿಂದೆ ನಾವು 200ಕ್ಕೂ ಹೆಚ್ಚು ರನ್ ಗಳಿಸಿದ್ದೇವೆ. ಇಂದು ಬ್ಯಾಟಿಂಗ್ ವಿಭಾಗದಲ್ಲಿ ನಾವು ಹಿನ್ನಡೆ ಅನುಭವಿಸಿದೆವು. ಕೆಲವೊಮ್ಮೆ ಬೌಲರ್‌ಗಳು 200 ರನ್ ನೀಡಿದಾಗ ಬ್ಯಾಟರ್‌ಗಳು ಅದನ್ನು ಚೇಸ್ ಮಾಡುತ್ತಾರೆ. ಇಂದು ಸಾಧಾರಣ ಮೊತ್ತವನ್ನು ರಕ್ಷಿಸುವುದು ಬೌಲರ್‌ಗಳಾದ ನಮ್ಮ ಕರ್ತವ್ಯವಾಗಿತ್ತು, ನಾವು ಪ್ರಯತ್ನಿಸಿದೆವು ಆದರೆ ಸಾಧ್ಯವಾಗಲಿಲ್ಲ," ಎಂದು ಭುವನೇಶ್ವರ್ ತಿಳಿಸಿದರು.

Scroll to load tweet…