IPL ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಆರ್‌ಸಿಬಿ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿದೆ. ವಾಷಿಂಗ್ಟನ್ ಸುಂದರ್ ಅವರ ಅರ್ಧಶತಕದ ನೆರವಿನಿಂದ ಗುಜರಾತ್ ಸ್ಪರ್ಧಾತ್ಮಕ ಮೊತ್ತ ಪೇರಿಸಿದರೆ, ಆರ್‌ಸಿಬಿ ಪರ ರಸಿಖ್ ಸಲಾಮ್ ದಾರ್ 3 ವಿಕೆಟ್ ಪಡೆದು ಮಿಂಚಿದರು.

ಅಹಮದಾಬಾದ್ (ಮೇ.31): ಐಪಿಎಲ್‌ನ ಸತತ 2ನೇ ಟ್ರೋಫಿ ಮೇಲೆ ಕಣ್ಣಿಟ್ಟಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಆ ನಿಟ್ಟಿನಲ್ಲಿ ಅರ್ಧ ಯಶಸ್ಸನ್ನು ಸಂಪಾದಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಲು ಯಶಸ್ವಿಯಾಗಿದೆ. ಆರ್‌ಸಿಬಿ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿದ ಗುಜರಾತ್‌ ಟೈಟಾನ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್‌ ಕಲೆಹಾಕಿದೆ. ವಾಷಿಂಗ್ಟನ್ ಸುಂದರ್ ಅವರ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಗುಜರಾತ್ ತಂಡ ಸ್ಪರ್ಧಾತ್ಮಕ ಮೊತ್ತ ತಲುಪಲು ಕಾರಣವಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐಪಿಎಲ್‌ ಫೈನಲ್‌ ಪಂದ್ಯದಲ್ಲಿ 160ಕ್ಕಿಂತ ಕಡಿಮೆ ಮೊತ್ತವನ್ನು ಯಶಸ್ವಿಯಾಗಿ ನಾಲ್ಕು ಬಾರಿ ರಕ್ಷಿಸಿಕೊಳ್ಳಲಾಗಿದೆ. ಮುಂಬೈ ಇಂಡಿಯನ್ಸ್‌ 2013, 2017 ಹಾಗೂ 2019ರಲ್ಲಿ ಈ ಸಾಧನೆ ಮಾಡಿದ್ದರೆ, 2009ರಲ್ಲಿ ಡೆಕ್ಕನ್‌ ಚಾರ್ಜರ್ಸ್ಸ್‌ ಈ ಸಾಧನೆ ಮಾಡಿತ್ತು.

ಆರಂಭದಲ್ಲೇ ಆರ್‌ಸಿಬಿ ವೇಗಿಗಳ ಆಘಾತ!

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆರ್‌ಸಿಬಿ ನಾಯಕನ ನಿರ್ಧಾರವನ್ನು ಬೌಲರ್‌ಗಳು ಸಂಪೂರ್ಣವಾಗಿ ಸಮರ್ಥಿಸಿಕೊಂಡರು. ಗುಜರಾತ್ ತಂಡದ ಆರಂಭಿಕರಾದ ಸಾಯಿ ಸುದರ್ಶನ್ (12 ರನ್, 12 ಎಸೆತ) ಭುವನೇಶ್ವರ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರೆ, ಅಪಾಯಕಾರಿ ನಾಯಕ ಶುಭ್‌ಮನ್ ಗಿಲ್ (10 ರನ್, 8 ಎಸೆತ) ಜೋಶ್ ಹ್ಯಾಜಲ್‌ವುಡ್ ಬೌಲಿಂಗ್‌ನಲ್ಲಿ ರಜತ್ ಪಾಟೀದರ್‌ಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು. ಆ ಬಳಿಕ ಬಂದ ನಿಶಾಂತ್ ಸಿಂಧು (20 ರನ್, 18 ಎಸೆತ) ಹಾಗೂ ವಿಕೆಟ್ ಕೀಪರ್ ಜೋಸ್ ಬಟ್ಲರ್ (19 ರನ್, 23 ಎಸೆತ) ಕ್ರೀಸ್‌ನಲ್ಲಿ ನಿಲ್ಲುವ ಮುನ್ಸೂಚನೆ ನೀಡಿದರೂ ದೊಡ್ಡ ಇನ್ನಿಂಗ್ಸ್ ಆಡಲು ಆರ್‌ಸಿಬಿ ಬೌಲರ್‌ಗಳು ಅವಕಾಶ ನೀಡಲಿಲ್ಲ.

ಜಿಟಿ ಕೈಹಿಡಿದ ವಾಷಿಂಗ್ಟನ್ ಸುಂದರ್ ಜವಾಬ್ದಾರಿಯುತ ಆಟ

ಒಂದು ಕಡೆ ನಿರಂತರವಾಗಿ ವಿಕೆಟ್‌ಗಳು ಉರುಳುತ್ತಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ವಾಷಿಂಗ್ಟನ್ ಸುಂದರ್ ಅತ್ಯಂತ ತಾಳ್ಮೆಯ ಆಟ ಪ್ರದರ್ಶಿಸಿದರು. ಆರ್‌ಸಿಬಿ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರು 37 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ ಭರ್ಜರಿ 50 ರನ್ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಇವರಿಗೆ ಸಾಥ್ ನೀಡಿದ ಅರ್ಶದ್ ಖಾನ್ ಕೇವಲ 6 ಎಸೆತಗಳಲ್ಲಿ 2 ಸಿಕ್ಸರ್ ನೆರವಿನಿಂದ 15 ರನ್ ಸಿಡಿಸಿ ರನ್ ಗತಿಗೆ ವೇಗ ತುಂಬಿದರು. ಉಳಿದಂತೆ ರಾಹುಲ್ ತೆವಾಟಿಯಾ (7), ಜೇಸನ್ ಹೋಲ್ಡರ್ (7) ಮತ್ತು ರಶೀದ್ ಖಾನ್ (7) ರನ್ ಗಳಿಸಿ ಔಟಾದರು. ಕಗಿಸೊ ರಬಾಡ 3 ರನ್ ಗಳಿಸಿ ಅಜೇಯರಾಗುಳಿದರು.

ಆರ್‌ಸಿಬಿ ಪರ ರಸಿಖ್ ಸಲಾಮ್ ದಾರ್ 3 ವಿಕೆಟ್ ಸಾಧನೆ

ಬೆಂಗಳೂರು ತಂಡದ ಪರ ಯುವ ಬೌಲರ್ ರಾಸಿಖ್ ಸಲಾಮ್ ದಾರ್ ಅತ್ಯಂತ ಮಿತವ್ಯಯಿ ಬೌಲಿಂಗ್ ಪ್ರದರ್ಶಿಸಿ 4 ಓವರ್‌ಗಳಲ್ಲಿ ಕೇವಲ 27 ರನ್ ನೀಡಿ ಪ್ರಮುಖ 3 ವಿಕೆಟ್ ಕಸಿದು ಗುಜರಾತ್ ತಂಡಕ್ಕೆ ದೊಡ್ಡ ಬ್ರೇಕ್ ನೀಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ಅನುಭವಿ ಭುವನೇಶ್ವರ್ ಕುಮಾರ್ (29ಕ್ಕೆ 2) ಮತ್ತು ಜೋಶ್ ಹ್ಯಾಜಲ್‌ವುಡ್ (37ಕ್ಕೆ 2) ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಸ್ಪಿನ್ನರ್ ಕೃನಾಲ್ ಪಾಂಡ್ಯ 4 ಓವರ್‌ಗಳಲ್ಲಿ ಕೇವಲ 23 ರನ್ ನೀಡಿ 1 ವಿಕೆಟ್ ಪಡೆದರೆ, ಜಾಕೋಬ್ ಡಫಿ ವಿಕೆಟ್ ರಹಿತರಾಗಿ ಉಳಿದರು.