IPL ಟೂರ್ನಿಗೆ ಕಿಚ್ಚು ಹಚ್ಚಿದ ರಿಷಭ್ ಶೆಟ್ಟಿ..! ಕಾಂತಾರ ಹೀರೋ RCB ಬಗ್ಗೆ ಏನ್ ಹೇಳ್ತಿದ್ದಾರೆ ಅರ್ಥ ಆಯ್ತಾ..?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದ 16 ಆವೃತ್ತಿಯ ಐಪಿಎಲ್ ಆಡುತ್ತಾ ಬಂದಿದ್ದರೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಮನರಂಜನೆ ವಿಚಾರದಲ್ಲಿ ಆರ್‌ಸಿಬಿ ಎಂದೆಂದಿಗೂ ಹಿಂದೆ ಬಿದ್ದಿಲ್ಲ. ಅದೇ ರೀತಿ ಆರ್‌ಸಿಬಿ ಅನ್‌ಬಾಕ್ಸಿಂಗ್ ಕಾರ್ಯಕ್ರಮದ ಮೂಲಕವೂ ಒಂದಿಲ್ಲೊಂದು ಹೊಸತನವನ್ನು ಮೆರೆಯುತ್ತಲೇ ಬಂದಿದೆ. ಆದರೆ, ಇದೀಗ ಆರ್‌ಸಿಬಿ ಹಂಚಿಕೊಂಡ ಒಂದು ಟ್ರೇಲರ್ ನಿಜಕ್ಕೂ ಆರ್‌ಸಿಬಿ ಅಭಿಮಾನಿಗಳಿಗೆ ಹೊಸ ಹುರುಪನ್ನು ತಂದಿದೆ.
ಬೆಂಗಳೂರು(ಮಾ.13): ಬಹುನಿರೀಕ್ಷಿತ 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. 17ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 22ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಬದ್ದ ಎದುರಾಳಿಗಳಾದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಚೆನ್ನೈನ ಚೆಪಾಕ್ ಮೈದಾನ ಆತಿಥ್ಯವನ್ನು ವಹಿಸಿದೆ. ಈ ಟೂರ್ನಿ ಆರಂಭಕ್ಕೂ ಮುನ್ನ ಮಾರ್ಚ್ 19ರಂದು ಬೆಂಗಳೂರಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ನಟ, ನಿರ್ದೇಶಕ, ಕಾಂತಾರ ಸಿನಿಮಾ ಹೀರೋ ರಿಷಭ್ ಶೆಟ್ಟಿ ಹೊಸ ಸುಳಿವೊಂದನ್ನು ನೀಡಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದ 16 ಆವೃತ್ತಿಯ ಐಪಿಎಲ್ ಆಡುತ್ತಾ ಬಂದಿದ್ದರೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಮನರಂಜನೆ ವಿಚಾರದಲ್ಲಿ ಆರ್‌ಸಿಬಿ ಎಂದೆಂದಿಗೂ ಹಿಂದೆ ಬಿದ್ದಿಲ್ಲ. ಅದೇ ರೀತಿ ಆರ್‌ಸಿಬಿ ಅನ್‌ಬಾಕ್ಸಿಂಗ್ ಕಾರ್ಯಕ್ರಮದ ಮೂಲಕವೂ ಒಂದಿಲ್ಲೊಂದು ಹೊಸತನವನ್ನು ಮೆರೆಯುತ್ತಲೇ ಬಂದಿದೆ. ಆದರೆ, ಇದೀಗ ಆರ್‌ಸಿಬಿ ಹಂಚಿಕೊಂಡ ಒಂದು ಟ್ರೇಲರ್ ನಿಜಕ್ಕೂ ಆರ್‌ಸಿಬಿ ಅಭಿಮಾನಿಗಳಿಗೆ ಹೊಸ ಹುರುಪನ್ನು ತಂದಿದೆ.
'ಸೀರೆಲಿ ಹುಡುಗೀರ ನೋಡಲೇಬಾರದು....': RCB ಡ್ರೀಮ್ ಗರ್ಲ್ ಪೆರ್ರಿಯ ದೇಸಿ ಲುಕ್ ವೈರಲ್
ಸ್ಯಾಂಡಲ್‌ವುಡ್ ನಟ ರಿಷಭ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾವು ದೇಶಾದ್ಯಂತ ಹೊಸ ಟ್ರೆಂಡ್ ಹುಟ್ಟುಹಾಕಿದೆ. ಇದೇ ಝಲಕ್ ಅನ್ನು ಬಳಸಿಕೊಂಡಿರುವ ಆರ್‌ಸಿಬಿ ಫ್ರಾಂಚೈಸಿಯು ಆರ್‌ಸಿಬಿ ಅನ್‌ಬಾಕ್ಸಿಂಗ್ ಕಾರ್ಯಕ್ರಮದ ಟ್ರೇಲರ್ ರಿಲೀಸ್ ಮಾಡಿದೆ. ಇದರಲ್ಲಿ ರಿಷಭ್ ಶೆಟ್ಟಿ ಕಾಣಿಸಿಕೊಂಡಿದ್ದು, ಅವರ ಮುಂದೆ ಮೂರು ಕೋಣಗಳನ್ನು ನಿಲ್ಲಿಸಲಾಗಿದೆ. ಒಂದು ಕೋಣದ ಮೇಲೆ ರಾಯಲ್, ಇನ್ನೊಂದು ಕೋಣದ ಮೇಲೆ ಚಾಲೆಂಜರ್ಸ್ ಹಾಗೂ ಕೊನೆಯ ಕೋಣದ ಮೇಲೆ ಬ್ಯಾಂಗಳೂರು ಎಂದು ಬರೆಯಲಾಗಿದೆ. ರಿಷಭ್ ಶೆಟ್ಟಿ ಎರಡು ಕೋಣಗಳನ್ನು ದಾಟಿ ಮೂರನೇ ಕೋಣದ ಬಳಿ ಬಂದು, ಇದು ಬೇಡ, ಭಟ್ರೆ ತಗೊಂಡು ಹೋಗಿ ಇದನ್ನು ಎಂದಿದ್ದಾರೆ. ಕೊನೆಯ ಅರ್ಥ ಆಯ್ತಾ ಎಂದಿದ್ದಾರೆ.
ಇದರರ್ಥ ರಾಯಲ್ ಚಾಲೆಂಜರ್ಸ್ ಬ್ಯಾಂಗಳೂರು(Royal Challengers Bangalore) ಎನ್ನುವುದು ಇನ್ನು ಮುಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ಎಂದು ಬದಲಾಗುವ ಸುಳಿವನ್ನು ಈ ಟ್ರೇಲರ್ ಬಿಟ್ಟುಕೊಟ್ಟಂತೆ ಇದೆ. ಇದನ್ನು ಹೊರತುಪಡಿಸಿ ಮತ್ತೆ ಏನಿರಬಹುದು ಎನ್ನುವುದು ಅರ್ಥವಾದರೆ ಕಾಮೆಂಟ್ ಮಾಡಿ ತಿಳಿಸಿ.
ಹೀಗಿದೆ ನೋಡಿ ಆ ಟ್ರೇಲರ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಮೇಲ್ನೋಟಕ್ಕೆ ಸಾಕಷ್ಟು ಸಮತೋಲಿತವಾಗಿ ಕಾಣಿಸಿಕೊಂಡಿದ್ದು, ಎಂದಿನಂತೆ ಮತ್ತೊಮ್ಮೆ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಇದೀಗ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಗ್ಗುಬಡಿಯುವ ಮೂಲಕ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ ಫಾಫ್ ಡು ಪ್ಲೆಸಿಸ್ ಪಡೆ.