* ಚೆನ್ನೈ ಸೂಪರ್ ಕಿಂಗ್ಸ್ ಎದುರು ಆಘಾತಕಾರಿ ಸೋಲು ಕಂಡ ಆರ್‌ಸಿಬಿ* ಆರ್‌ಸಿಬಿ ಅಗ್ರಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯಕ್ಕೆ ಫ್ಯಾನ್ಸ್ ಕಿಡಿ* ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ವಿರುದ್ದ ತಿರುಗಿಬಿದ್ದ ಆರ್‌ಸಿಬಿ ಅಭಿಮಾನಿಗಳು
ನವಿ ಮುಂಬೈ(ಏ.13): ದಿನೇಶ್ ಕಾರ್ತಿಕ್ (Dinesh Karthik) ಕೆಚ್ಚೆದೆಯ ಬ್ಯಾಟಿಂಗ್ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು 28 ರನ್‌ಗಳ ಅಂತರದ ರೋಚಕ ಸೋಲು ಅನುಭವಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀಡಿದ್ದ 217 ರನ್‌ಗಳ ಕಠಿಣ ಗುರಿ ತಲುಪಬೇಕಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಆರಂಭ ಪಡೆಯಬೇಕಿತ್ತು.
ಬೃಹತ್ ಗುರಿ ಬೆನ್ನತ್ತಲು ಕಣಕ್ಕಿಳಿದ ಆರ್‌ಸಿಬಿ ತಂಡವು ಆರಂಭದಲ್ಲೇ ಸ್ಪಿನ್ನರ್ ಮೋಯಿನ್ ಅಲಿಯನ್ನು ಎದುರಿಸಬೇಕಾಗಿ ಬಂತು. ಮೊದಲ ಓವರ್‌ನಲ್ಲಿ ಮೋಯಿನ್ ಅಲಿ ಕೇವಲ ಒಂದು ರನ್ ನೀಡಿದರು. ಇನ್ನು ಪವರ್ ಪ್ಲೇ ಮುಗಿಯುವಷ್ಟರೊಳಗಾಗಿ ಆರ್‌ಸಿಬಿ ತಂಡವು ಅಗ್ರಕ್ರಮಾಂಕದ ಮೂರು ವಿಕೆಟ್ ಕಳೆದುಕೊಂಡು ಮಂಕಾಗಿ ಹೋಗಿತ್ತು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸುಯಾಶ್ ಪ್ರಭುದೇಸಾಯಿ, ದಿನೇಶ್ ಕಾರ್ತಿಕ್ ಹಾಗೂ ಶಾಬಾಜ್ ಅಹಮ್ಮದ್ ಸ್ಪೋಟಕ ಬ್ಯಾಟಿಂಗ್ ನಡೆಸಿದರಾದರೂ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಲು ಸಾದ್ಯವಾಗಲಿಲ್ಲ. ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 9 ವಿಕೆಟ್ ಕಳೆದುಕೊಂಡು 193 ರನ್ ಗಳಿಸಲಷ್ಟೇ ಶಕ್ತವಾಯಿತು.
ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನದ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅದರಲ್ಲೂ ಟೂರ್ನಿಯ ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಸೋತು ಸುಣ್ಣವಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಎದುರು ಆರ್‌ಸಿಬಿ ಶರಣಾಗಿದ್ದು, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಗತ್ಯವಾಗಿ ಬೇಕಾಗಿದ್ದ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ತೋರಲು ವಿಫಲವಾದ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ವಿರುದ್ದ ತಮ್ಮ ಬೇಸರ ಹೊರಹಾಕಿದ್ದಾರೆ.
ಹೀಗಿತ್ತು ಆರ್‌ಸಿಬಿ ವರ್ಸಸ್ ಚೆನ್ನೈ ಪಂದ್ಯ:
ನವಿ ಮುಂಬೈ: ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ಅವರ ವಿಸ್ಫೋಟಕ ಆಟ, ಮಹೀಶ್ ತೀಕ್ಷಣ ಹಾಗೂ ರವೀಂದ್ರ ಜಡೇಜಾ ಅವರ ಸ್ಪಿನ್ ಜಾದೂ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್‌್ಸಗೆ ಐಪಿಎಲ್ 15ನೇ ಆವೃತ್ತಿಯಲ್ಲಿ ಮೊದಲ ಗೆಲುವು ತಂದುಕೊಟ್ಟಿದೆ. ಆರ್‌ಸಿಬಿ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಚೆನ್ನೈ 23 ರನ್‌ಗಳ ಗೆಲುವು ಗಳಿಸಿತು. ಮೊದಲು ಬ್ಯಾಟ್ ಮಾಡಿ 20 ಓವರಲ್ಲಿ 4 ವಿಕೆಟ್‌ಗೆ 216 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದ ಚೆನ್ನೈ, ಆರ್‌ಸಿಬಿಯನ್ನು 9 ವಿಕೆಟ್‌ಗೆ 193 ರನ್‌ಗಳಿಗೆ ನಿಯಂತ್ರಿಸಿತು. ಮಧ್ಯಮ, ಕೆಳ ಕ್ರಮಾಂಕದ ದಿಟ್ಟಹೋರಾಟ ಆರ್‌ಸಿಬಿಗೆ ಗೆಲುವು ತಂದುಕೊಡಲಿಲ್ಲ.
IPL 2022: ಆರ್‌ಸಿಬಿ Vs ಸಿಎಸ್‌ಕೆ ಪಂದ್ಯದ ವೇಳೆ ಹರಿದಾಡಿದ ಟಾಪ್ 10 ಮೀಮ್ಸ್‌ಗಳಿವು..!
ಬೃಹತ್ ಗುರಿ ಬೆನ್ನತ್ತಿದ ಆರ್‌ಸಿಬಿ 50 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಾಧಾರಣ ಮೊತ್ತಕ್ಕೆ ಕುಸಿಯವ ಭೀತಿಯಲ್ಲಿದ್ದಾಗ ಶಾಬಾಜ್ ಅಹ್ಮದ್, ಸುಯಶ್ ಪ್ರಭುದೇಸಾಯಿ ಹಾಗೂ ದಿನೇಶ್ ಕಾರ್ತಿಕ್ ತಂಡವನ್ನು ಅವಮಾನದಿಂದ ಪಾರು ಮಾಡಿದರು. ಮ್ಯಾಕ್ಸ್‌ವೆಲ್ 11 ಎಸೆತಗಳಲ್ಲಿ 26 ರನ್ ಸಿಡಿಸಿ ಔಟಾದ ಬಳಿಕ ಶಾಬಾಜ್ 41, ಸುಯಶ್ 34, ಕಾರ್ತಿಕ್ 14 ಎಸೆತಗಳಲ್ಲಿ 34 ರನ್ ಚಚ್ಚಿದರು. ಸಿರಾಜ್(14), ಹೇಜಲ್‌ವುಡ್(07) ಔಟಾಗದೆ ಉಳಿದು ತಂಡ ಆಲೌಟ್ ಆಗುವುದನ್ನು ತಪ್ಪಿಸಿದರು. ಚೆನ್ನೈನ ಸ್ಪಿನ್ನರ್‌ಗಳಾದ ತೀಕ್ಷಣ 4, ಜಡೇಜಾ 3 ವಿಕೆಟ್ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ದುಬೆ, ಉತ್ತಪ್ಪ ಸಿಡಿಲಬ್ಬರ: ಮೊದಲ 10 ಓವರಲ್ಲಿ ಕೇವಲ 60 ರನ್ ಸಿಡಿಸಿದ್ದ ಚೆನ್ನೈಗೆ ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ಆಪತ್ಭಾಂದವರಾದರು. 11ನೇ ಓವರ್‌ನಿಂದ 20 ಓವರ್ ವರೆಗೂ ಪ್ರತಿ ಓವರಲ್ಲೂ ಚೆನ್ನೈ 13ಕ್ಕಿಂತ ಹೆಚ್ಚು ರನ್ ಗಳಿಸಿತು. ಕೊನೆ 10 ಓವರಲ್ಲಿ ಬರೋಬ್ಬರಿ 155 ರನ್ ಕಲೆಹಾಕಿತು. ದುಬೆ 46 ಎಸೆತದಲ್ಲಿ 5 ಬೌಂಡರಿ, 8 ಸಿಕ್ಸರ್‌ನೊಂದಿಗೆ 95 ರನ್ ಗಳಿಸಿ ಔಟಾಗದೆ ಉಳಿದರೆ, ಉತ್ತಪ್ಪ 4 ಬೌಂಡರಿ, 9 ಸಿಕ್ಸರ್‌ನೊಂದಿಗೆ 88 ರನ್ ಸಿಡಿಸಿದರು. ಇವರಿಬ್ಬರ ನಡುವೆ 3ನೇ ವಿಕೆಟ್‌ಗೆ 165 ರನ್ ಜೊತೆಯಾಟ ಮೂಡಿಬಂತು. ಚೆನ್ನೈ ಈ ಆವೃತ್ತಿಯ ಅತಿದೊಡ್ಡ ಮೊತ್ತ ದಾಖಲಿಸಿತು.
