ಐಪಿಎಲ್‌ನಲ್ಲಿ ಪ್ಲೇ ಆಫ್‌ನ 4 ತಂಡಗಳು ಈಗಾಗಲೇ ಅಂತಿಮಗೊಂಡಿವೆ. ಆದರೆ ಅಗ್ರ-2 ಸ್ಥಾನಗಳಿಗೆ ಪೈಪೋಟಿ ಇನ್ನೂ ಜೀವಂತವಾಗಿದೆ. ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದರೆ ಅಗ್ರ-2 ಸ್ಥಾನ ಪಡೆಯುವ ಅವಕಾಶವಿದೆ.

ಲಖನೌ: ಲೀಗ್ ಹಂತದಲ್ಲಿ 7 ಪಂದ್ಯದಲ್ಲಿ ಬಾಕಿ ಇರುವಾಗಲೇ ಪ್ಲೇ ಆಫ್‌ನ 4 ತಂಡಗಳು ಅಂತಿಮ ಗೊಂಡಿದ್ದರೂ, ಲೀಗ್‌ನ ರೋಚಕತೆ ಇನ್ನೂ ಕಡಿಮೆ ಯಾಗಿಲ್ಲ. ಇದಕ್ಕೆ ಕಾರಣ ಅಗ್ರ-2 ಸ್ಥಾನಕ್ಕೆ ನಡೆಯುತ್ತಿರುವ ಪೈಪೋಟಿ. ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯಲು ರೋಚಕ ಸ್ಪರ್ಧೆ ನಡೆಯುತ್ತಿದ್ದು, ಇದಕ್ಕೆ ಮಂಗಳವಾರ ತೆರೆ ಬೀಳಲಿದೆ. ಕ್ಲೈಮ್ಯಾಕ್ಸ್ ಕದನದಲ್ಲಿ ಆರ್‌ಸಿಬಿಗೆ ಲಖನೌ ಸೂಪರ್ ಜೈಂಟ್ಸ್ ಸವಾಲು ಎದುರಾಗಲಿದೆ.

ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್‌ನ ಸತತ 2 ಸೋಲು ಗಳಿಂದಾಗಿ ಆರ್‌ಸಿಬಿ ಅಗ್ರ-2 ಸ್ಥಾನಕ್ಕೇರುವ ಸುವರ್ಣಾವಕಾಶ ಒದಗಿಬಂದಿದೆ. ಸದ್ಯ 13 ಪಂದ್ಯಗಳಲ್ಲಿ 17 ಅಂಕ ಸಂಪಾದಿಸಿರುವ ಆರ್‌ಸಿಬಿ, ಲಖನೌ ವಿರುದ್ಧ ಗೆದ್ದರೆ ಅಗ್ರ-2ರಲ್ಲಿ ಸ್ಥಾನ ಪಡೆದುಕೊಳ್ಳಲಿದ್ದು, ಕ್ವಾಲಿಫೈಯರ್-1ರಲ್ಲಿ ಪಂಜಾಬ್ ವಿರುದ್ಧ ಆಡಲಿದೆ. ಒಂದು ವೇಳೆ ಸೋತರೆ ಆರ್‌ಸಿಬಿ 3ನೇ ಸ್ಥಾನಿಯಾಗಿ ಎಲಿಮಿನೇಟ‌ರ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆಡಬೇಕಾಗುತ್ತದೆ.

ಲಯಕ್ಕೆ ಮರಳುವ ತವಕ: ಆರ್‌ಸಿಬಿ ಕೊನೆ ಬಾರಿ ಪಂದ್ಯ ಗೆದ್ದಿದ್ದು ಮೇ 3ಕ್ಕೆ. ಬಳಿಕ ಕೆಲ ದಿನ ಐಪಿಎಲ್ ಸ್ಥಗಿತಗೊಂಡಿತ್ತು. ನಂತರ ಕೆಕೆಆರ್ ವಿರುದ್ಧ ಪಂದ್ಯ ಮಳೆಗೆ ರದ್ದಾಗಿದ್ದರೆ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಸೋತಿತ್ತು. ಹೀಗಾಗಿ ತಂಡ ಗೆಲುವಿನ ಹಳಿಗೆ ಮರಳುವುದರ ಜೊತೆಗೆ, ಪ್ಲೇ-ಆಫ್‌ಗೂ ಮುನ್ನ ತಂಡದ ಕೆಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ.

ಆರ್‌ಸಿಬಿ ತಂಡವು ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಉತ್ತಮ ಆರಂಭ ಪಡೆಯಿತಾದರೂ, ಮಧ್ಯಮ ಕ್ರಮಾಂಕದಲ್ಲಿ ನಾಟಕೀಯ ಕುಸಿತ ಕಾಣುವ ಮೂಲಕ ಮೊದಲ ಬಾರಿಗೆ ತವರಿನಾಚೆಯ ಪಂದ್ಯದಲ್ಲಿ ಸೋಲು ಅನುಭವಿಸಿತ್ತು. ಇದೀಗ ಲಖನೌ ಎದುರಿನ ಪಂದ್ಯಕ್ಕೂ ಮುನ್ನ ಆರ್‌ಸಿಬಿಯ ನಂಬಿಗಸ್ಥ ವೇಗಿ ಜೋಶ್ ಹೇಜಲ್‌ವುಡ್ ತಂಡಕೂಡಿಕೊಂಡಿದ್ದು ರಜತ್ ಪಾಟೀದಾರ್ ಪಡೆಯ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.

ಅತ್ತ, ರಿಷಭ್ ಪಂತ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್‌ ಈ ಬಾರಿ 13 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿದ್ದು, ಕೊನೆ ಪಂದ್ಯದಲ್ಲಿ ಗೆಲ್ಲುವ ಮೂಲಕ ಟೂರ್ನಿಗೆ ವಿದಾಯ ಹೇಳಲು ಕಾಯುತ್ತಿದೆ. ನ್ಯೂಜಿಲೆಂಡ್‌ನ ವಿಲಿಯಂ ಒರೂರ್ಕೆ ಆಗಮನ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ತವರಿನ ಅಭಿಮಾನಿಗಳ ಎದುರು ಗೆಲ್ಲುವ ಕನವರಿಕೆಯಲ್ಲಿದೆ ರಿಷಭ್ ಪಂತ್ ಪಡೆ

ಪಂದ್ಯ ಮಳೆಗೆ ರದ್ದಾದರೆ 0.001 ರನ್‌ರೇಟಲ್ಲಿ ಆರ್‌ಸಿಬಿ ಟಾಪ್-2

ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಆರ್‌ಸಿಬಿ ಈ ಪಂದ್ಯದಲ್ಲಿ ಗೆಲ್ಲಬೇಕು. ಒಂದು ವೇಳೆ ಪಂದ್ಯ ಮಳೆಯಿಂದ ರದ್ದಾದರೂ, ಆರ್‌ಸಿಬಿಗೆ ನೆಟ್ ರನ್‌ರೇಟ್ ಆಧಾರದಲ್ಲಿ ಅಗ್ರ -2ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬಹುದು. ಗುಜರಾತ್ ಸದ್ಯ 18 ಅಂಕ ಹೊಂದಿದ್ದು, 0.254 ನೆಟ್ ರನ್‌ರೇಟ್ ಇದೆ. ಮಂಗಳವಾರದ ಪಂದ್ಯ ರದ್ದಾದರೆ 1 ಅಂಕ ಲಭಿಸಿ, ಆರ್‌ಸಿಬಿ ಅಂಕ 18 ಆಗುತ್ತದೆ. ತಂಡದ ನೆಟ್ ರನ್ ರೇಟ್ ಈಗ 0.255 ಇದೆ. ಅಂದರೆ 0.001 ಅಂತರದಲ್ಲಿ ಗುಜರಾತ್‌ಗಿಂತ ಹೆಚ್ಚಿದೆ. ಅಂಕಗಳು ಸಮಗೊಂಡರೆ ನೆಟ್ ರನ್‌ರೇಟ್‌ನಲ್ಲಿ ಆರ್‌ಸಿಬಿ ಅಗ್ರ-2 ಸ್ಥಾನ ಪಡೆಯಲಿದೆ.

ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ

ಲಖನೌ ಸೂಪರ್ ಜೈಂಟ್ಸ್: ಮಿಚೆಲ್ ಮಾರ್ಷ್, ಆರ್ಯನ್ ಜುಯೆಲ್, ನಿಕೋಲಸ್ ಪೂರನ್, ರಿಷಭ್ ಪಂತ್(ನಾಯಕ&ವಿಕೆಟ್ ಕೀಪರ್), ಆಯುಷ್ ಬದೋನಿ, ಅಬ್ದುಲ್ ಸಮದ್, ಶಾರ್ದೂಲ್ ಠಾಕೂರ್, ಆಕಾಶ್‌ದೀಪ್ ಸಿಂಗ್, ಆವೇಶ್ ಖಾನ್, ಶಾಬಾಜ್ ಅಹಮದ್, ದಿಗ್ವೇಶ್ ರಾಥಿ, ವಿಲಿಯಂ ಓ'ರೂರ್ಕೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್‌ ಅಗರ್‌ವಾಲ್, ರಜತ್ ಪಾಟೀದಾರ್(ನಾಯಕ), ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮ್ಯಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹೇಜಲ್‌ವುಡ್, ಸುಯಾಶ್ ಶರ್ಮಾ

ಪಂದ್ಯ: ಸಂಜೆ 7.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್