ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2023ರ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ 14 ವರ್ಷಗಳ ಹಿಂದೆ ಮಾಡಿದ್ದ ಸಾಮಾಜಿಕ ಜಾಲತಾಣದ ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್‌ನಲ್ಲಿ ಕೊಹ್ಲಿ ಮಂಗಳವಾರದಂದು ನಡೆಯಲಿರುವ ಪಂದ್ಯವನ್ನು 'ಬಿಗ್ ಗೇಮ್' ಎಂದು ಬಣ್ಣಿಸಿದ್ದರು.

ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ತಂಡವಾಗಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ರನ್ ಮಷೀನ್ ವಿರಾಟ್ ಕೊಹ್ಲಿ ಬರೋಬ್ಬರಿ 14 ವರ್ಷಗಳ ಹಿಂದೆ ಮಾಡಿದ ಸೋಷಿಯಲ್ ಮೀಡಿಯಾ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೇ 29ರಂದು ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 8 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿತ್ತು. ಈ ಮೂಲಕ ಜೂನ್ 03ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಟಿಕೆಟ್ ಕನ್ಫರ್ಮ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಪಂಜಾಬ್ ಕಿಂಗ್ಸ್ ತಂಡವು ಜೋಶ್ ಹೇಜಲ್‌ವುಡ್, ಸುಯಾಶ್ ಶರ್ಮಾ ಮಾರಕ ದಾಳಿಗೆ ತತ್ತರಿಸುವ ಮೂಲಕ ತವರಿನಲ್ಲಿಯೇ 101 ರನ್‌ಗಳಿಗೆ ಸರ್ವಪತನ ಕಂಡಿತು. ಸಾಧಾರಣ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೇವಲ 2 ವಿಕೆಟ್ ಕಳೆದುಕೊಂಡು ಇನ್ನೂ 10 ಓವರ್ ಬಾಕಿ ಇರುವಂತೆಯೇ ಅನಾಯಾಸವಾಗಿ ಗೆಲುವಿನ ನಗೆ ಬೀರಿತು. ಇದರ ಜತೆಗೆ ಬರೋಬ್ಬರಿ 9 ವರ್ಷಗಳ ಬಳಿಕ ಐಪಿಎಲ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದು, ಆರ್‌ಸಿಬಿ ತಂಡವು ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲಲು ಇನ್ನೊಂದೇ ಹೆಜ್ಜೆ ಬಾಕಿ ಉಳಿದಿದೆ.

2025ರ ಐಪಿಎಲ್ ಫೈನಲ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಇದೀಗ ಆರ್‌ಸಿಬಿ ತಂಡವು 2016ರ ಬಳಿಕ ಐಪಿಎಲ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ, ಬರೋಬ್ಬರಿ 14 ವರ್ಷಗಳ ಹಿಂದೆ ಮಂಗಳವಾರ ದೊಡ್ಡ ಗೇಮ್‌ ಇದೆ ಎಂದಿದ್ದ ಸೋಷಿಯಲ್ ಮೀಡಿಯಾ ಪೋಸ್ಟ್ ಇದೀಗ ವೈರಲ್ ಆಗಿದೆ.

ವಿರಾಟ್ ಕೊಹ್ಲಿ 2011ರ ಏಪ್ರಿಲ್ 11ರಂದು, 'ಆರ್‌ಸಿಬಿ ತಂಡವು ಒಳ್ಳೆಯ ಗೆಲುವು ದಾಖಲಿಸಿದೆ, ಇದರ ಜತೆಗೆ ತಂಡ ಸರಿಯಾಗಿ ರೂಪುಗೊಳ್ಳುತ್ತಿದೆ. ಬಿಗ್ ಗೇಮ್ ಮಂಗಳವಾರವಿದೆ' ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದರು.

Scroll to load tweet…

ವಿರಾಟ್ ಕೊಹ್ಲಿ, 2011ರ ಐಪಿಎಲ್ ಟೂರ್ನಿಯಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ವಿರುದ್ದ 6 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿತ್ತು. ಇದರ ಬೆನ್ನಲ್ಲೇ ಮಂಗಳವಾರ ನಡೆಯಲಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಉದ್ದೇಶಿಸಿ 2011ರಲ್ಲಿ ಈ ರೀತಿ ಟ್ವೀಟ್ ಮಾಡಿದ್ದರು. ಆದರೆ ಆ ಭಾನುವಾರ ನಡೆದಿದ್ದ ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 9 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತ್ತು.

2011ರ ಐಪಿಎಲ್ ಟೂರ್ನಿಯಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು 58 ರನ್ ಅಂತರದ ಹೀನಾಯ ಸೋಲು ಅನುಭವಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇನ್ನು ಇದೀಗ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಅದ್ಭುತ ಪ್ರದರ್ಶನ ತೋರುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ ಒಂದು ರದ್ದಾದ ಪಂದ್ಯ ಸೇರಿದಂತೆ 19 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿತ್ತು. ಆರ್‌ಸಿಬಿ ತಂಡವು ಈ ಬಾರಿ ತಾನಾಡಿದ ಎಲ್ಲಾ ತವರಿನಾಚೆಯ ಪಂದ್ಯಗಳನ್ನು ಜಯಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.

ಇದೀಗ ಆರ್‌ಸಿಬಿ ಪಾಲಿಗೆ ಈ ಮಂಗಳವಾರ(ಜೂನ್ 03) ಬಿಗ್ ಡೇ ಎನಿಸಿಕೊಂಡಿದ್ದು, ಕಳೆದ 17 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ.