ಐಪಿಎಲ್‌ನಲ್ಲಿ ಅಗ್ರ-2 ಸ್ಥಾನ ಭದ್ರಪಡಿಸಿಕೊಳ್ಳುವ ಆರ್‌ಸಿಬಿ ಕನಸಿಗೆ ಹಿನ್ನಡೆಯಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 42 ರನ್ ಗಳಲ್ಲಿ ಸೋತ ತಂಡ, ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿಯಿತು. ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ 231 ರನ್ ಕಲೆಹಾಕಿತು, ಆರ್‌ಸಿಬಿ 189ಕ್ಕೆ ಆಲೌಟಾಯಿತು.
ಲಖನೌ: ಈ ಬಾರಿ ಐಪಿಎಲ್‌ನಲ್ಲಿ ಅಗ್ರ-2 ಸ್ಥಾನ ಭದ್ರಪಡಿಸಿಕೊಳ್ಳುವ ಆರ್‌ಸಿಬಿ ಕನಸಿಗೆ ಹಿನ್ನಡೆಯುಂಟಾಗಿದೆ. ಮಹತ್ವದ ಪಂದ್ಯದಲ್ಲಿ ಶುಕ್ರವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 42 ರನ್ ಗಳಲ್ಲಿ ಹೀನಾಯ ಸೋಲುಂಡ ತಂಡ, ಅಂಕಪಟ್ಟಿ ಯಲ್ಲಿ 2ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿಯಿತು. ಈ ಪಂದ್ಯ ಗೆದ್ದಿದ್ದರೆ ಅಗ್ರಸ್ಥಾನಕ್ಕೇರುವುದರ ಜೊತೆಗೆ, ಲೀಗ್ ಹಂತದ ಕೊನೆಗೆ ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಅವಕಾಶವಿತ್ತು.
ಸದ್ಯ ಆರ್‌ಸಿಬಿ 13 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ 17 ಅಂಕ ಗಳಿಸಿದೆ. ಕೊನೆ ಪಂದ್ಯದಲ್ಲಿ ಗೆದ್ದರೆ ತಂಡಕ್ಕೆ ಮತ್ತೆ ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬಹುದು. ಆದರೆ ಇದಕ್ಕೆ ಇತರ ತಂಡಗಳ ಫಲಿತಾಂಶ ತನ್ನ ಪರವಾಗಿ ಬರಬೇಕಿದೆ. ಮತ್ತೊಂದೆಡೆ ಸನ್‌ರೈಸರ್ಸ್ 13 ಪಂದ್ಯಗಳಲ್ಲಿ 5ನೇ ಗೆಲುವು ದಾಖಲಿಸಿದರೂ 8ನೇ ಸ್ಥಾನದಲ್ಲೇ ಉಳಿಯಿತು.
ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಸ್ಫೋಟಕ ಆಟವಾಡಿ 6 ವಿಕೆಟ್‌ಗೆ 231 ರನ್ ಕಲೆಹಾಕಿತು.ದೊಡ್ಡ ಮೊತ್ತ ಬೆನ್ನತ್ತಲು ಶುರುಮಾಡಿದ ಆರ್‌ಸಿಬಿಗೆ ಉತ್ತಮ ಆರಂಭ ದೊರಕಿತು. ಆದರೆ ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ 19.5 ಓವರ್‌ಗಳಲ್ಲಿ 189ಕ್ಕೆ ಆಲೌಟಾಯಿತು. ಪವರ್-ಪ್ಲೇನಲ್ಲೇ ತಂಡ 72 ರನ್ ಗಳಿಸಿತು. ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಅಬ್ಬರಿಸಿದರು. ಕೊಹ್ಲಿ25 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ನೊಂದಿಗೆ 43 ರನ್ ಸಿಡಿಸಿ ಔಟಾದರೆ, ಕನ್ನಡಿಗ ಮಯಾಂಕ್ ಅಗರ್‌ವಾಲ್ 11 ರನ್ ಗಳಿಸಿ ನಿರ್ಗಮಿಸಿದರು. ಸ್ಫೋಟಕ ಆಟವಾಡುತ್ತಿದ್ದ ಫಿಲ್ ಸಾಲ್ಟ್ 32 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ಗಳೊಂದಿಗೆ 62 ರನ್ ಬಾರಿಸಿ 12ನೇ ಓವರ್‌ನಲ್ಲಿ ಔಟಾದರು. ರಜತ್ ಪಾಟೀದಾರ್, ಹಂಗಾಮಿ ನಾಯಕ ಜಿತೇಶ್ ಶರ್ಮಾ ಕ್ರೀಸ್‌ನಲ್ಲಿರುವ ವರೆಗೂ ತಂಡ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ 15.4 ಓವರ್ ಬಳಿಕ ಕೇವಲ 5 ಎಸೆತಗಳ ಅಂತರದಲ್ಲಿ ರಜತ್ (18), ಜಿತೇಶ್ (24) ಹಾಗೂ ರೊಮಾರಿಯೊ ಶೆಫರ್ಡ್(0) ಔಟಾಗಿದ್ದರಿಂದ ಹಿನ್ನಡೆ ಅನುಭವಿಸಿತು. ಬಳಿಕ ಟಿಮ್ ಡೇವಿಡ್ (1), ಕೃನಾಲ್ ಪಾಂಡ್ಯ (8)ಗೆ ತಂಡವನ್ನು ಗೆಲ್ಲಿಸಲಾಗಲಿಲ್ಲ. ತಂಡ ಕೊನೆ 16 ರನ್‌ಗೆ 7 ವಿಕೆಟ್ ಕಳೆದುಕೊಂಡಿತು.
ಇಶಾನ್ ಅಬ್ಬರ: ಇದಕ್ಕೂ ಮುನ್ನ ಸನ್‌ರೈಸರ್ಸ್ ತನ್ನ ಎಂದಿನ ಆಕ್ರಮಣಕಾರಿ ಆಟವಾಡಿ ಬೃಹತ್ ಮೊತ್ತ ಕಲೆಹಾಕಿತು. ಕೊನೆವರೆಗೂ ಕ್ರೀಸ್‌ನಲ್ಲಿ ನೆಲೆ ಯೂರಿದ ಇಶಾನ್ ಕಿಶನ್, 48 ಎಸೆತಗಳಲ್ಲಿ 7 ಬೌಂಡರಿ, 5 ಸಿಕ್ಸರ್ಗಳೊಂದಿಗೆ 94 ರನ್ ಸಿಡಿಸಿ ಔಟಾಗದೆ ಉಳಿದರು. ಉಳಿದಂತೆ ಅಭಿಷೇಕ್ ಶರ್ಮಾ (17 ಎಸೆತಕ್ಕೆ 34), ಕ್ಲಾಸೆನ್ (13 ಎಸೆತಕ್ಕೆ 24), ಅನಿಕೇತ್ ವರ್ಮಾ(9 ಎಸೆತಕ್ಕೆ 26) ತಂಡದ ಮೊತ್ತವನ್ನು 230ರ ಗಡಿ ದಾಟಿಸಲು ನೆರವಾದರು.
ಸ್ಕೋರ್: ಸನ್‌ರೈಸರ್ಸ್ 20 ಓವರಲ್ಲಿ 231/6 (ಇಶಾನ್ ಔಟಾಗದೆ 94, ಅಭಿಷೇಕ್ 34, ಅನಿಕೇತ್ 26, ಶೆಫರ್ಡ್ 2-14),
ಆರ್‌ಸಿಬಿ 19.5 ಓವರಲ್ಲಿ 189/10 (ಸಾಲ್ಟ್ 62, ಕೊಹ್ಲಿ43, ಕಮಿನ್ಸ್3-28) ಪಂದ್ಯಶ್ರೇಷ್ಠ: ಇಶಾನ್ ಕಿಶನ್
ತವರಾಚೆ ಆರ್‌ಸಿಬಿಗೆ ಮೊದಲ ಸೋಲು!
ಆರ್‌ಸಿಬಿ ಈ ಬಾರಿ ತವರಿನಾಚೆ ಕ್ರೀಡಾಂಗಣಗಳಲ್ಲಿ ಮೊದಲು ಸೋಲನುಭವಿಸಿತು. ಇದಕ್ಕೂ ಮುನ್ನ ಕೋಲ್ಕತಾ, ಚೆನ್ನೈ, ಮುಂಬೈ, ಜೈಪುರ, ಚಂಡೀಗಢ, ನವದೆಹಲಿ ಕ್ರೀಡಾಂಗಣಗಳಲ್ಲಿ ಗೆದ್ದಿದ್ದವು. ಉಳಿದಂತೆ ತವರಿನಲ್ಲಿ ಆಡಿರುವ 6 ಪಂದ್ಯಗಳ ಪೈಕಿ 2ರಲ್ಲಿ ಗೆದ್ದಿದ್ದು, 3ರಲ್ಲಿ ಸೋತಿದೆ. ಒಂದು ಪಂದ್ಯ ಮಳೆಗೆ ರದ್ದಾಗಿದೆ.
ಈ ಐಪಿಎಲ್‌ನಲ್ಲಿ 42 ಬಾರಿ 200+ರನ್: ಈ ಬಾರಿ ಐಪಿಎಲ್‌ನಲ್ಲಿ ಒಟ್ಟು 42 ಬಾರಿ ತಂಡಗಳು 200ಕ್ಕೂ ಹೆಚ್ಚು ರನ್ ಕಲೆಹಾಕಿದೆ. ಇದು ಟೂರ್ನಿ ಇತಿಹಾಸದಲ್ಲೇ ಹೊಸ ದಾಖಲೆ. 2024 ರಲ್ಲಿ ಒಟ್ಟು 41 ಬಾರಿ ತಂಡಗಳು 200ಕ್ಕೂ ರನ್ ಕಲೆಹಾಕಿದ್ದವು.

