ಸಿಡ್ನಿ(ನ.21): ಟೀಂ ಇಂಡಿಯಾ ಲೆಗ್‌ ಸ್ಪಿನ್ನರ್ ಯುಜುವೇಂದ್ರ ಚಹಲ್ ಸದ್ಯ ಸೀಮಿತ ಓವರ್‌ಗಳ ಸರಣಿಯಾಡಲು ಆಸ್ಟ್ರೇಲಿಯಾಗೆ ಬಂದಿಳಿದಿದ್ದಾರೆ. ಟೀಂ ಇಂಡಿಯಾ ಸಿಡ್ನಿಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದು, ಅಲ್ಲಿಯೇ ವಿರಾಟ್ ಕೊಹ್ಲಿ ಪಡೆ ಮುಂಬರುವ ಸರಣಿಗೆ ಅಭ್ಯಾಸ ಆರಂಭಿಸಿದೆ.

ನವೆಂಬರ್ 10ರಂದು ಮುಕ್ತಾಯವಾದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಬಳಿಕ ಅಲ್ಲಿಂದಲೇ ಟೀಂ ಇಂಡಿಯಾ ಆಟಗಾರರು ದೀರ್ಘಕಾಲಿಕ ಸರಣಿಯಾಡಲು ಆಸ್ಟ್ರೇಲಿಯಾಗೆ ಬಂದಿಳಿದಿದ್ದಾರೆ. ಯುಜುವೇಂದ್ರ ಚಹಲ್ ಟೀಂ ಇಂಡಿಯಾದ ಅತ್ಯಂತ ಅನುಭವಿ ಲೆಗ್‌ಸ್ಪಿನ್ನರ್ ಆಗಿದ್ದು, ಆಸೀಸ್ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ಅವರಿಂದ ಒಳ್ಳೆಯ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ. ನವೆಂಬರ್ 27ರಂದು ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೆ ಚಹಲ್ ಈಗಿನಿಂದಲೇ ಸಾಕಷ್ಟು ಬೆವರು ಹರಿಸುತ್ತಿದ್ದಾರೆ.

ಕೆಲವೇ ಗಂಟೆಗಳಲ್ಲಿ ಇಂಡೋ-ಆಸೀಸ್‌ ಪಂದ್ಯಗಳ ಟಿಕೆಟ್‌ ಸೋಲ್ಡೌಟ್‌..!

ಇತ್ತೀಚೆಗಷ್ಟೇ ಚಹಲ್ ಜಿಮ್‌ನಲ್ಲಿ ರಿಷಭ್ ಪಂತ್ ಹಾಗೂ ಸ್ಪಿನ್ ಜತೆಗಾರ ಕುಲ್ದೀಪ್ ಯಾದವ್ ಅವರೊಂದಿಗೆ ಸೈಕ್ಲಿಂಗ್ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ಈ ಫೋಟೋ ನೋಡಿದ ಶ್ರೀಲಂಕಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಇಸುರು ಉಡಾನ, ನಿನಗೆ ಸೈಕಲ್ ಸೀಟು ತುಂಬಾನೆ ಎತ್ತರವಾಯ್ತು ಎಂದು ಕಾಲೆಳೆದಿದ್ದಾರೆ.

ಇನ್ನು ಐಪಿಎಲ್ ಟೂರ್ನಿಗೂ ಮುನ್ನ ಚಹಲ್ ಜತೆ ನಿಶ್ಚಿತಾರ್ಥ ಮಾಡಿಕೊಂಡ ಧನಶ್ರೀ ವರ್ಮಾ ಸಹ ಆರ್‌ಸಿಬಿ ಸ್ಟಾರ್ ಸ್ಪಿನ್ನರ್ ಕಾಲೆಳೆದಿದ್ದು, ಎಲ್ಲಿವರೆಗೂ ಬಂತು ನಿಮ್ಮ ಸವಾರಿ ಎಂದು ಕಮೆಂಟ್ ಮಾಡಿದ್ದಾರೆ.