ಸಿಡ್ನಿ(ನ.21): 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಕ್ತಾಯವಾದ ಬೆನ್ನಲ್ಲೇ ಇದೀಗ ಬಹುನಿರೀಕ್ಷಿತ ಭಾರತ-ಆಸ್ಟ್ರೇಲಿಯಾ ನಡುವಿನ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 27ರಿಂದ ಆರಂಭವಾಗಲಿರುವ ಸರಣಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 3 ಏಕದಿನ, 3 ಟಿ20 ಹಾಗೂ 4 ಪಂದ್ಯಗಳ ಟೆಸ್ಟ್‌ ಸರಣಿಯಾಡಲಿದೆ.

ಇಂಡೋ-ಆಸೀಸ್ ಸರಣಿಯ ಕ್ರೇಜ್ ಹೇಗಿದೆಯೆಂದರೆ, ಶುಕ್ರವಾರ ಟಿಕೆಟ್‌ ಕೌಂಟರ್ ಓಪನ್ ಮಾಡಿ ಕೆಲವೇ ಗಂಟೆಗಳಲ್ಲಿ 3 ಟಿ20 ಪಂದ್ಯಗಳ ಸಂಪೂರ್ಣ ಟಿಕೆಟ್‌ಗಳು ಮಾರಾಟವಾಗಿವೆ. ಇನ್ನೂ ಕುತೂಹಲಕಾರಿ ವಿಚಾರವೆಂದರೆ ಎರಡು ಹಾಗೂ ಮೂರನೇ ಏಕದಿನ ಪಂದ್ಯದ ಟಿಕೆಟ್‌ಗಳು ಸಂಪೂರ್ಣ ಮಾರಾಟವಾಗಿದ್ದು, ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದ ಕೇವಲ 1900 ಟಿಕೆಟ್‌ಗಳು ಬಾಕಿ ಉಳಿದಿವೆ ಎಂದು ವರದಿಯಾಗಿದೆ. ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಯ ಅಧಿಕಾರಿಗಳು ಇಂಡೋ-ಆಸೀಸ್ ಸರಣಿಯಲ್ಲಿ  50% ಮಂದಿಗೆ ಮೈದಾನ ಪ್ರವೇಶಿಸಲು ಅವಕಾಶ ನೀಡಿದೆ. ಈ ವರ್ಷಾರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಬಳಿಕ ಟೀಂ ಇಂಡಿಯಾ ಆಡುತ್ತಿರುವ  ವರ್ಷದ ಎರಡನೇ ಸರಣಿ ಇದಾಗಿದೆ.

ಆಸೀಸ್ ಎದುರಿನ ಸೀಮಿತ ಓವರ್‌ ಸರಣಿಯಲ್ಲಿ ಈ ಐವರು ರೋಹಿತ್ ಶರ್ಮಾ ಸ್ಥಾನ ತುಂಬಬಹುದು..!
 
ಭಾರತ-ಆಸ್ಟ್ರೇಲಿಯಾ ತಂಡಗಳ ನಡುವಿನ ಸೀಮಿತ ಓವರ್‌ಗಳ ಕಾದಾಟ ಸಾಕಷ್ಟು ರೋಚಕತೆಯಿಂದ ಕೂಡಿರಲಿದ್ದು, ಪಂದ್ಯದ ಟಿಕೆಟ್‌ಗಳು ನಿರೀಕ್ಷೆಗಿಂತ ವೇಗವಾಗಿ ಮಾರಾಟವಾಗಿವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಕಾರ್ಯನಿರ್ವಾಹಕ ವ್ಯವಸ್ಥಾಪಕ ಆಂಟನಿ ಎವ್ರಾರ್ಡ್ ತಿಳಿಸಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸೀಮಿತ ಓವರ್‌ಗಳ ಸರಣಿಗೆ ಸಿಡ್ನಿ ಕ್ರಿಕೆಟ್ ಮೈದಾನ ಹಾಗೂ ಕ್ಯಾನ್‌ಬೆರಾದ ಮನೂಕ ಓವಲ್ ಮೈದಾನ ಆತಿಥ್ಯ ವಹಿಸಿದೆ.