ಚೆನ್ನೈ(ಮಾ.31): ಇಂಗ್ಲೆಂಡ್ ವಿರುದ್ಧದ ಸರಣಿ ಮುಗಿಸಿರುವ ಟೀಂ ಇಂಡಿಯಾ ಕ್ರಿಕೆಟಿಗರು ಇದೀಗ ತಮ್ಮ ತಮ್ಮ ಐಪಿಎಲ್ ತಂಡದತ್ತ ಮುಖ ಮಾಡಿದ್ದಾರೆ. ಪ್ರತಿ ಫ್ರಾಂಚೈಸಿ ತರಬೇತಿ ಶಿಬಿರ ನಡೆಸುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ಟ್ರೈನಿಂಗ್ ಕ್ಯಾಂಪ್ ಆರಂಭಿಸಿದೆ. ಇದೀಗ ನಾಯಕ ವಿರಾಟ್ ಕೊಹ್ಲಿ ಕೂಡ ಶಿಬಿರ ಸೇರಿಕೊಳ್ಳಲಿದ್ದಾರೆ.

ಕ್ರಿಕೆಟಿಗ ಅಶೋಕ್ ದಿಂಡಾ ಮೇಲೆ ಮಾರಕ ದಾಳಿ; Y+ ಭದ್ರತೆ ನೀಡಿದ ಕೇಂದ್ರ!.

ಎಪ್ರಿಲ್ 1 ರಂದು ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಳ್ಳಲಿದ್ದಾರೆ. ಚೆನ್ನೈಗೆ ಆಗಮಿಸಲಿರುವ ಕೊಹ್ಲಿ, ಆರ್‌ಸಿಬಿ ತರಬೇತಿ ಶಿಬಿರ ಸೇರಿಕೊಳ್ಳಲಿದ್ದಾರೆ. ಕೊರೋನಾ ಕಾರಣ ಆಟಗಾರರಿಗೆ ಬಯೋಬಬಲ್ ಸರ್ಕಲ್ ಮಾಡಲಾಗಿದೆ. ಹೀಗಾಗಿ ಕೊಹ್ಲಿ ಕ್ವಾರಂಟೈನ್ ಪಾಲಿಸಬೇಕಿದೆ.

ಐಪಿಎಲ್ ಟೂರ್ನಿ ಮುಗಿಯುವ ವರೆಗೂ ಕ್ರಿಕೆಟಿಗರು, ತಂಡದ ಸ್ಟಾಫ್ ಬಯೋಬಬಲ್ ಸರ್ಕಲ್ ಒಳಗಿರಬೇಕಿದೆ. ಕೊರೋನಾ ಕಾರಣ ಕಳೆದ ದುಬೈನಲ್ಲಿ ನಡೆದ ಐಪಿಎಲ್ ಟೂರ್ನಿಗೂ ಇದೇ ನಿಯಮ ಪಾಲಿಸಲಾಗಿತ್ತು. ಈ ಬಾರಿ ಭಾರತದಲ್ಲೇ ನಡೆಯುತ್ತಿರುವುದರಿಂದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ದಿನದ ಟ್ರೈನಿಂಗ್ ಕ್ಯಾಂಪ್ ಆಯೋಜಿಸಿದೆ. ಯಜುವೇಂದ್ರ ಚಹಾಲ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್ ಸೇರಿದಂತೆ ಹಲವು ಕ್ರಿಕೆಟಿಗರು ಈ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.  ಕೊಹ್ಲಿ ಸೈನ್ಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಹೋರಾಟ ನಡೆಸಲಿದೆ. ಎಪ್ರಿಲ್ 9 ರಿಂದ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದ್ದು, ಮೇ.30ಕ್ಕೆ ಫೈನಲ್ ಪಂದ್ಯ ನಡೆಯಲಿದೆ.