ಸತತ 5 ಎಸೆತದಲ್ಲಿ 5 ಸಿಕ್ಸರ್ ಚಚ್ಚಿದ RCB ಸ್ಪೋಟಕ ಬ್ಯಾಟರ್, 6ನೇಯದ್ದು ಜಸ್ಟ್ ಮಿಸ್..! ಮುಂದೈತೆ ಮಾರಿ ಹಬ್ಬ
5 ಎಸೆತಗಳಲ್ಲಿ 5 ಸಿಕ್ಸರ್ ಚಚ್ಚಿದ ವಿಲ್ ಜೇಕ್ಸ್
ವಿಟಲಿಟಿ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ ವಿಲ್ ಜೇಕ್ಸ್ ಅಬ್ಬರ
ಎಲ್ಲಾ ತಂಡಗಳಿಗೂ ಆರ್‌ಸಿಬಿ ಬ್ಯಾಟರ್ ವಾರ್ನಿಂಗ್
ಲಂಡನ್(ಜೂ.23): ಇಂಗ್ಲೆಂಡ್ ಪ್ರತಿಭಾನ್ವಿತ ಆಲ್ರೌಂಡರ್ ವಿಲ್ ಜೇಕ್ಸ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕವೇ ಜಗತ್ತಿನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಬೇಕಿದ್ದ ವಿಲ್ ಜೇಕ್ಸ್, ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದರು. ಸದ್ಯ ವಿಟಲಿಟಿ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ ಸರ್ರೆ ತಂಡವನ್ನು ಪ್ರತಿನಿಧಿಸುತ್ತಿರುವ ವಿಲ್ ಜೇಕ್ಸ್ 5 ಎಸೆತಗಳಲ್ಲಿ ಸತತ 5 ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಎಲ್ಲಾ ತಂಡಗಳಿಗೂ ಆರ್‌ಸಿಬಿ ಬ್ಯಾಟರ್ ವಾರ್ನಿಂಗ್ ರವಾನಿಸಿದ್ದಾರೆ.
ಮಿಡ್ಲ್‌ಎಸೆಕ್ಸ್ ಎದುರಿನ ಪಂದ್ಯದ 11 ಓವರ್ ಬೌಲಿಂಗ್ ಮಾಡಿದ ಲೂಕ್ ಹೋಲ್‌ಮನ್ ವಿರುದ್ದ ವಿಲ್ ಜೇಕ್ಸ್ ಸತತ 5 ಸಿಕ್ಸರ್ ಸಿಡಿಸಿದರು. ಇನ್ನ ಆರನೇ ಎಸೆತವನ್ನು ಹೈ ಫುಲ್ ಟಾಸ್ ಹಾಕಿದರು. ಆ ಎಸೆತವನ್ನು ಸರಿಯಾಗಿ ಗ್ರಹಿಸಲು ವಿಫಲವಾಗುವ ಮೂಲಕ ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಚಚ್ಚುವ ಅವಕಾಶವನ್ನು ಕೈಚಲ್ಲಿದರು. ಈಗಾಗಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹರ್ಷಲ್ ಗಿಬ್ಸ್, ವೆಸ್ಟ್ ಇಂಡೀಸ್ ಮಾಜಿ ನಾಯಕ ಕೀರನ್ ಪೊಲ್ಲಾರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಹೀಗಿತ್ತು ನೋಡಿ ವಿಲ್ ಜೇಕ್ಸ್ ಅಬ್ಬರಿಸಿದ ರೀತಿ:
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿನ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 3.2 ಕೋಟಿ ರುಪಾಯಿ ನೀಡಿ ವಿಲ್ ಜೇಕ್ಸ್ ಅವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ 2023ನೇ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ದ ಮೀರ್‌ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ಮಾಡುವ ಸಂದರ್ಭದಲ್ಲಿ ವಿಲ್ ಜೇಕ್ಸ್ ಸ್ನಾಯು ಸೆಳೆತಕ್ಕೆ ಒಳಗಾಗಿ ಬಾಂಗ್ಲಾ ಎದುರಿನ ಸರಣಿಯಿಂದ ಹೊರಬಿದ್ದಿದ್ದರು. ಇದಾದ ಬಳಿಕ ತಜ್ಞರ ಸಲಹೆಯ ಮೇರೆಗೆ ವಿಲ್ ಜೇಕ್ಸ್ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೂ ಹೊರಗುಳಿದಿದ್ದರು.
3.80 ಕೋಟಿ ರುಪಾಯಿ ವಾಚ್ ತೊಟ್ಟು ಫೋಸ್ ಕೊಟ್ಟ ಹಾರ್ದಿಕ್ ಪಾಂಡ್ಯ..! ಈ ವಾಚ್ ವಿಶೇಷತೆಗಳೇನು?
ಪ್ರತಿಭಾನ್ವಿತ ಆಲ್ರೌಂಡರ್ ವಿಲ್ ಜೇಕ್ಸ್, 2023ರಲ್ಲಿ ಇಂಗ್ಲೆಂಡ್ ಪರ ಮೂರು ಮಾದರಿಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ವರ್ಷಾರಂಭದಲ್ಲಿ ಪಾಕಿಸ್ತಾನ ವಿರುದ್ದ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಜೇಕ್ಸ್, ಇದಾದ ಬಳಿಕ ಬಾಂಗ್ಲಾದೇಶ ವಿರುದ್ದ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.