ಡೆಲ್ಲಿ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾಗೆ 6 ವಿಕೆಟ್‌ ಜಯಎರಡನೇ ಇನಿಂಗ್ಸ್‌ನಲ್ಲಿ 7 ವಿಕೆಟ್ ಕಬಳಿಸಿ ಮಿಂಚಿದ ರವೀಂದ್ರ ಜಡೇಜಾ4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ ಟೀಂ ಇಂಡಿಯಾ

ದೆಹಲಿ(ಫೆ.19): ಟೀಂ ಇಂಡಿಯಾ ಆಲ್ರೌಂಡರ್‌ ರವೀಂದ್ರ ಜಡೇಜಾ ಮಾರಕ ದಾಳಿ ಹಾಗೂ ನೂರನೇ ಟೆಸ್ಟ್‌ ಪಂದ್ಯವನ್ನಾಡಿದ ಚೇತೇಶ್ವರ್ ಪೂಜಾರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಟೆಸ್ಟ್‌ ಪಂದ್ಯವನ್ನು ಟೀಂ ಇಂಡಿಯಾ 6 ವಿಕೆಟ್‌ಗಳಿಂದ ಜಯಿಸಿದೆ. ಈ ಮೂಲಕ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 2-0 ಮುನ್ನಡೆ ಸಾಧಿಸಿದೆ. 

ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 115 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಆರಂಭದಲ್ಲೇ ಕೆ ಎಲ್ ರಾಹುಲ್‌(01) ವಿಕೆಟ್‌ ಕಳೆದುಕೊಂಡಿತು. ಇನ್ನು ನಾಯಕ ರೋಹಿತ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ಮೂಲಕ ರನ್‌ ವೇಗಕ್ಕೆ ಚುರುಕು ಮುಟ್ಟಿಸಿದರು. ರೋಹಿತ್ ಶರ್ಮಾ ಕೇವಲ 20 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 31 ರನ್‌ ಬಾರಿಸಿ ರನೌಟ್ ಆಗಿ ಪೆವಿಲಿಯನ್‌ ಸೇರಿದರು..

ಇನ್ನು ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಕೊಹ್ಲಿ ಮೂರನೇ ವಿಕೆಟ್‌ಗೆ 30 ರನ್‌ಗಳ ಜತೆಯಾಟ ನಿಭಾಯಿಸಿತು. ವಿರಾಟ್ ಕೊಹ್ಲಿ 31 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 20 ರನ್‌ ಗಳಿಸಿ ಟೆಸ್ಟ್‌ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಸ್ಟಂಪೌಟ್ ಆದರು. ಇದುವರೆಗೂ 180 ಇನಿಂಗ್ಸ್‌ಗಳನ್ನಾಡಿ ಕೊಹ್ಲಿ ಮೊದಲ ಬಾರಿಗೆ ಸ್ಟಂಪೌಟ್‌ ಆದರು. ಇನ್ನು ಶ್ರೇಯಸ್ ಅಯ್ಯರ್ 12 ರನ್‌ ಬಾರಿಸಿ ನೇಥನ್ ಲಯನ್‌ಗೆ ಎರಡನೇ ಬಲಿಯಾದರು.

Scroll to load tweet…

ಗೆಲುವಿನ ದಡ ಸೇರಿಸಿದ ಪೂಜಾರ-ಭರತ್: ತಮ್ಮ ವೃತ್ತಿಜೀವನದ ನೂರನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದ್ದ ಚೇತೇಶ್ವರ್ ಪೂಜಾರ, ಎರಡನೇ ಇನಿಂಗ್ಸ್‌ನಲ್ಲಿ ಅಜೇಯ 31 ರನ್‌ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಶ್ರೀಕರ್ ಭರತ್ ಅಜೇಯ 23 ರನ್ ಬಾರಿಸುವ ಮೂಲಕ ಉತ್ತಮ ಸಾಥ್ ನೀಡಿದರು.

ಕೆ ಎಲ್ ರಾಹುಲ್‌ ಮತ್ತೆ ಫೇಲ್‌; ಪ್ರಧಾನಿ ಕಚೇರಿಗೆ ವೆಂಕಿ ಭೇಟಿ..! ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಸುರಿಮಳೆ

ಇದಕ್ಕೂ ಮೊದಲು ಎರಡನೇ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದಂತ್ಯದ ವೇಳೆಗೆ ಒಂದು ವಿಕೆಟ್‌ ಕಳೆದುಕೊಂಡು 61 ರನ್‌ ಕಲೆಹಾಕಿತ್ತು. ಆದರೆ ಎರಡನೇ ದಿನ ದೊಡ್ಡ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿದ್ದ ಆಸ್ಟ್ರೇಲಿಯಾಗೆ ಆರಂಭದಲ್ಲೇ ರವಿಚಂದ್ರನ್ ಅಶ್ವಿನ್ ಆಘಾತ ನೀಡಿದರು. ಚುರುಕಿನ ಬ್ಯಾಟಿಂಗ್ ನಡೆಸುತ್ತಿದ್ದ ಟ್ರಾವಿಸ್ ಹೆಡ್ 46 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 43 ರನ್‌ ಬಾರಿಸಿ ರವಿಚಂದ್ರನ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಅನುಭವಿ ಬ್ಯಾಟರ್‌ ಸ್ಟೀವ್ ಸ್ಮಿತ್ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಅಶ್ವಿನ್‌ ಯಶಸ್ವಿಯಾದರು.

ಜಡೇಜಾ ಖಾತೆಗೆ 7 ವಿಕೆಟ್‌: ಎರಡನೇ ದಿನದಾಟದಲ್ಲಿ ಒಂದು ವಿಕೆಟ್ ಉರುಳಿಸಿದ್ದ ರವೀಂದ್ರ ಜಡೇಜಾ, ಮೂರನೇ ದಿನದಾಟದಲ್ಲಿ ಪ್ರಮುಖ 6 ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾದರು. 85 ರನ್‌ಗಳವರೆಗೆ ಕೇವಲ 2 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ಇದಾದ 10 ಸೇರಿಸುವಷ್ಟರಲ್ಲಿ ಮತ್ತೆ 5 ವಿಕೆಟ್ ಕಳೆದುಕೊಂಡಿತು. ಜಡೇಜಾ ಸ್ಪಿನ್ ಅಸ್ತ್ರಕ್ಕೆ ಆಸ್ಟ್ರೇಲಿಯಾ ಬಳಿ ಉತ್ತರವೇ ಇರಲಿಲ್ಲ. ಜಡೇಜಾ ಕೇವಲ 12.1 ಓವರ್‌ ಬೌಲಿಂಗ್ ಮಾಡಿ 42 ರನ್ ನೀಡಿ 7 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಜಡೇಜಾಗೆ ಉತ್ತಮ ಸಾಥ್ ನೀಡಿದ ರವಿಚಂದ್ರನ್ ಅಶ್ವಿನ್, ತಮ್ಮ ಖಾತೆಗೆ 3 ವಿಕೆಟ್ ಸೇರ್ಪಡೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.