ಕೆ ಎಲ್ ರಾಹುಲ್ ಮತ್ತೆ ಫೇಲ್; ಪ್ರಧಾನಿ ಕಚೇರಿಗೆ ವೆಂಕಿ ಭೇಟಿ..! ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಸುರಿಮಳೆ
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲೂ ಕೆ ಎಲ್ ರಾಹುಲ್ ಫೇಲ್
ಡೆಲ್ಲಿ ಟೆಸ್ಟ್ ಎರಡನೇ ಇನಿಂಗ್ಸ್‌ನಲ್ಲಿ ಒಂದು ರನ್ ಬಾರಿಸಿ ವಿಕೆಟ್ ಒಪ್ಪಿಸಿದ ರಾಹುಲ್
ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಸಿಕ್ಕಾಪಟ್ಟೆ ಟ್ರೋಲ್
ದೆಹಲಿ(ಫೆ.19): ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಸ್ಪಿನ್ನರ್‌ಗಳು ಭರ್ಜರಿ ಪ್ರದರ್ಶನ ತೋರುವ ಮೂಲಕ ಆಸ್ಟ್ರೇಲಿಯಾ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ರವೀಂದ್ರ ಜಡೇಜಾ 7 ಹಾಗೂ ರವಿಚಂದ್ರನ್ ಅಶ್ವಿನ್ 3 ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾ ತಂಡವನ್ನು 113 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಭಾರತ ತಂಡವು ಯಶಸ್ವಿಯಾಗಿದೆ.
ಇನ್ನು ಸಾಧಾರಣ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ ಆರಂಭದಲ್ಲೇ ಬ್ಯಾಟಿಂಗ್ ಆಘಾತ ಅನುಭವಿಸಿದ್ದು, ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್ ಮತ್ತೊಮ್ಮೆ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದಾರೆ. 115 ರನ್‌ಗಳ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ 6 ರನ್ ಗಳಿಸುವಷ್ಟರಲ್ಲೇ ರಾಹುಲ್ ವಿಕೆಟ್ ಕಳೆದುಕೊಂಡಿದೆ. ಕೆ ಎಲ್ ರಾಹುಲ್ ಕೇವಲ 3 ಎಸೆತಗಳನ್ನು ಎದುರಿಸಿ ಒಂದು ರನ್ ಗಳಿಸಿ ನೇಥನ್ ಲಯನ್‌ಗೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಕೆ ಎಲ್ ರಾಹುಲ್ ದಯನೀಯ ಬ್ಯಾಟಿಂಗ್ ವೈಫಲ್ಯ ಮುಂದುವರೆದ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳು ವೈರಲ್ ಆಗಿವೆ.
ಅದರಲ್ಲೂ ಇತ್ತೀಚಿಗಿನ ದಿನಗಳಲ್ಲಿ ಕೆ ಎಲ್ ರಾಹುಲ್ ಬ್ಯಾಟಿಂಗ್ ಫಾರ್ಮ್ ಬಗ್ಗೆ ಪದೇ ಪದೇ ಬಹಿರಂಗವಾಗಿಯೇ ಟೀಕೆ ಮಾಡುತ್ತಿರುವ ವೆಂಕಟೇಶ್ ಪ್ರಸಾದ್, ಮೊದಲ ಇನಿಂಗ್ಸ್‌ನಲ್ಲಿ ರಾಹುಲ್ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದಾಗ ಸರಣಿ ಟ್ವೀಟ್ ಮೂಲಕ, ರಾಹುಲ್‌ಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಿದ್ದೇಕೆ ಎಂದು ಪ್ರಶ್ನಿಸಿದ್ದರು.
ಕಳೆದ 20 ವರ್ಷದಲ್ಲಿ ಯಾವುದೇ ಆರಂಭಿಕ ಬ್ಯಾಟರ್ ಕಳಪೆ ಸರಾಸರಿಯಲ್ಲಿ ಇಷ್ಟು ಪಂದ್ಯಗಳನ್ನು ಆಡಿಲ್ಲ. ರಾಹುಲ್‌ಗೆ ಸಿಕ್ಕಷ್ಟುಅವಕಾಶ ನೈಜ ಪ್ರತಿಭೆಗಳಿಗೆ ಸಿಕ್ಕಿಲ್ಲ. ಶಿಖರ್ ಧವನ್, ಮಯಾಂಕ್ ಸರಾಸರಿ 40+ ಇದ್ದರೂ ಅವರಿಗೆ ಅವಕಾಶವಿಲ್ಲ. ಶುಭ್ಮನ್ ಗಿಲ್, ಸರ್ಫರಾಜ್ ಖಾನ್ ತಂಡದಲ್ಲಿ ಸ್ಥಾನ ಗಿಟ್ಟಿಸಲು ಇನ್ನೂ ಕಾಯುತ್ತಿದ್ದಾರೆ. ಕುಲ್ದೀಪ್ ಯಾದವ್ ಪಂದ್ಯಶ್ರೇಷ್ಠ ಪಡೆದು ಮುಂದಿನ ಟೆಸ್ಟ್ನಿಂದ ಹೊರಗುಳಿಯುವ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಆಸ್ಟ್ರೇಲಿಯಾ ಎದುರು ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆ ಎಲ್ ರಾಹುಲ್, 71 ಎಸೆತಗಳನ್ನು ಎದುರಿಸಿ ಕೇವಲ ಒಂದು ಬೌಂಡರಿ ಸಹಿತ 20 ರನ್ ಬಾರಿಸಿ ಟೋಡ್ ಮರ್ಫಿಗೆ ವಿಕೆಟ್ ಒಪ್ಪಿಸಿದ್ದರು. ಇನ್ನು ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೆ ಎಲ್ ರಾಹುಲ್ 41 ಎಸೆತಗಳನ್ನು ಎದುರಿಸಿ 17 ರನ್ ಬಾರಿಸಿ ನೇಥನ್ ಲಯನ್ ಎಲ್‌ಬಿ ಬಲೆಗೆ ಬಿದ್ದರು.
ಇನ್ನು ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲೂ ಕೆ ಎಲ್ ರಾಹುಲ್ ದಯನೀಯ ಬ್ಯಾಟಿಂಗ್ ವೈಫಲ್ಯ ಮುಂದುವರೆದಿದ್ದು, ಕೇವಲ ಒಂದು ರನ್ ಬಾರಿಸಿ ನೇಥನ್ ಲಯನ್‌ಗೆ ವಿಕೆಟ್ ಒಪ್ಪಿಸಿದರು.
ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್‌ಗಳು ವೈರಲ್ ಆಗಿವೆ. ಅದರಲ್ಲೂ ಕೆಲ ದಿನಗಳ ಹಿಂದಷ್ಟೇ ವೆಂಕಟೇಶ್ ಪ್ರಸಾದ್, ಬೆಂಗಳೂರಿನ ರಾಜಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ಫೋಟೋ ಬಳಸಿ, ನೆಟ್ಟಿಗರೊಬ್ಬರು, 'ಇದೀಗ ಬಂದ ಮಾಹಿತಿ: ಕೆ ಎಲ್ ರಾಹುಲ್ ಭವಿಷ್ಯವನ್ನು ಚರ್ಚಿಸಲು ವೆಂಕಟೇಶ್ ಪ್ರಸಾದ್, ಪ್ರಧಾನಮಂತ್ರಿ ಕಾರ್ಯಾಲಯವನ್ನು ತಲುಪಿದ್ದಾರೆ' ಎಂದು ಟ್ರೋಲ್ ಮಾಡಲಾಗಿದೆ.
ಆಸ್ಟ್ರೇಲಿಯಾ ಎದುರಿನ ಸರಣಿಯ ಬಳಿಕ ಕೆ ಎಲ್ ರಾಹುಲ್ ಮನೆಗೆ ಬಂದಾಗ ಮಾವ ಸುನಿಲ್ ಶೆಟ್ಟಿ ಪ್ರತಿಕ್ರಿಯೆಯ ಹೀಗಿರಲಿದೆ ಎಂದು ನೆಟ್ಟಿಗರೊಬ್ಬರು ಟ್ರೋಲ್ ಮಾಡಿದ್ದಾರೆ.