ಅಶ್ವಿನ್‌ಗೆ 5 ವಿಕೆಟ್ ಗೊಂಚಲು, ರಾಂಚಿ ಟೆಸ್ಟ್ ಗೆಲ್ಲಲು ಭಾರತಕ್ಕೆ 192 ಗುರಿ
ಭಾರತವನ್ನು 307 ರನ್‌ಗಳಿಗೆ ಕಟ್ಟಿಹಾಕಿ 46 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಬೆನ್ ಸ್ಟೋಕ್ಸ್ ಪಡೆಗೆ ಆರಂಭದಲ್ಲೇ ರವಿಚಂದ್ರನ್ ಅಶ್ವಿನ್ ಶಾಕ್ ನೀಡಿದರು. ಇಂಗ್ಲೆಂಡ್ 19 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಎರಡು ವಿಕೆಟ್ ಕಬಳಿಸುವಲ್ಲಿ ರವಿಚಂದ್ರನ್ ಅಶ್ವಿನ್ ಯಶಸ್ವಿಯಾದರು.
ರಾಂಚಿ(ಫೆ.25): ಟೀಂ ಇಂಡಿಯಾ ಅನುಭವಿ ರವಿಚಂದ್ರನ್ ಅಶ್ವಿನ್ ಹಾಗೂ ಕುಲ್ದೀಪ್ ಯಾದವ್ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡವು ರಾಂಚಿ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 145 ರನ್ ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ರಾಂಚಿ ಟೆಸ್ಟ್ ಪಂದ್ಯ ಗೆಲ್ಲಲು ಬೆನ್ ಸ್ಟೋಕ್ಸ್ ಪಡೆ ಭಾರತಕ್ಕೆ ಕೇವಲ 192 ರನ್ ಗುರಿ ನೀಡಿದೆ. ಆರ್ ಅಶ್ವಿನ್ 5 ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ 4 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
ಭಾರತವನ್ನು 307 ರನ್‌ಗಳಿಗೆ ಕಟ್ಟಿಹಾಕಿ 46 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಬೆನ್ ಸ್ಟೋಕ್ಸ್ ಪಡೆಗೆ ಆರಂಭದಲ್ಲೇ ರವಿಚಂದ್ರನ್ ಅಶ್ವಿನ್ ಶಾಕ್ ನೀಡಿದರು. ಇಂಗ್ಲೆಂಡ್ 19 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಎರಡು ವಿಕೆಟ್ ಕಬಳಿಸುವಲ್ಲಿ ರವಿಚಂದ್ರನ್ ಅಶ್ವಿನ್ ಯಶಸ್ವಿಯಾದರು. ಇಂಗ್ಲೆಂಡ್ ತಂಡದ ಪರ ಆರಂಭಿಕ ಬ್ಯಾಟರ್ ಜಾಕ್ ಕ್ರಾಲಿ ಭಾರತೀಯ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ ಆಕರ್ಷಕ ಅರ್ಧಶತಕ ಪೂರೈಸಿದರು. ಕ್ರಾಲಿ 91 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 60 ರನ್ ಸಿಡಿಸಿ ಕುಲ್ದೀಪ್ ಯಾದವ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ಇನ್ನುಳಿದಂತೆ ಜಾನಿ ಬೇರ್‌ಸ್ಟೋವ್ ಭಾರತೀಯ ಬೌಲರ್‌ಗಳೆದುರು ಕೊಂಚ ಪ್ರತಿರೋಧ ತೋರಿದರು. ಬೇರ್‌ಸ್ಟೋವ್ 42 ಎಸೆತಗಳನ್ನು ಎದುರಿಸಿ ಮೂರು ಬೌಂಡರಿ ಸಹಿತ 30 ರನ್ ಬಾರಿಸಿ ಮತ್ತೊಮ್ಮೆ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಬೆನ್ ಫೋಕ್ಸ್ 17 ರನ್ ಬಾರಿಸಿದ್ದೇ, ಇಂಗ್ಲೆಂಡ್ ಪರ ದಾಖಲಾದ ಮೂರನೇ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿತು.
ಅಶ್ವಿನ್‌ಗೆ 5 ವಿಕೆಟ್ ಗೊಂಚಲು: ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಿರುವು ಪಡೆಯುತ್ತಿದ್ದ ಪಿಚ್‌ನಲ್ಲಿ ಮತ್ತೊಮ್ಮೆ ಇಂಗ್ಲೆಂಡ್ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಅಗ್ರಕ್ರಮಾಂಕದ ಬೆನ್ ಡಕೆಟ್, ಓಲಿ ಪೋಪ್ ಹಾಗೂ ಜೋ ರೂಟ್ ಅವರನ್ನು ಬಲಿ ಪಡೆದ ಅಶ್ವಿನ್, ಇದಾದ ಬಳಿಕ ಕೊನೆಯಲ್ಲಿ ಬೆನ್ ಫೋಕ್ಸ್ ಹಾಗೂ ಜೇಮ್ಸ್ ಆಂಡರ್‌ಸನ್ ಅವರನ್ನು ಬಲಿ ಪಡೆಯುವ ಮೂಲಕ 5 ವಿಕೆಟ್ ಗೊಂಚಲು ತಮ್ಮದಾಗಿಸಿಕೊಂಡರು. ಅಶ್ವಿನ್ ಅಂತಿಮವಾಗಿ 15.5 ಓವರ್‌ಗಳಲ್ಲಿ 51 ರನ್ ನೀಡಿ 5 ವಿಕೆಟ್ ಕಬಳಿಸಿದರು. ಈ ಮೂಲಕ 35ನೇ ಬಾರಿಗೆ ಟೆಸ್ಟ್ ಇನಿಂಗ್ಸ್‌ನಲ್ಲಿ 5+ ವಿಕೆಟ್ ಕಬಳಿಸಿದ ಸಾಧನೆ ಮಾಡಿದರು. ಇದರೊಂದಿಗೆ ಕುಂಬ್ಳೆ ದಾಖಲೆ ಸರಿಗಟ್ಟಿದ್ದಾರೆ. ಕ್ರಿಕೆಟ್ ದಂತಕತೆ ಅನಿಲ್ ಕುಂಬ್ಳೆ 132 ಟೆಸ್ಟ್ ಪಂದ್ಯಗಳನ್ನಾಡಿ 35 ವಿಕೆಟ್ ಕಬಳಿಸಿದ್ದರು. ಇನ್ನು ಅಶ್ವಿನ್ ಕೇವಲ 99 ಪಂದ್ಯಗಳನ್ನಾಡಿ ಈ ಸಾಧನೆ ಮಾಡಿದ್ದಾರೆ.
ಇನ್ನು ಕುಲ್ದೀಪ್ ಯಾದವ್ ಮತ್ತೊಂದು ತುದಿಯಲ್ಲಿ ಇಂಗ್ಲೆಂಡ್ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಕುಲ್ದೀಪ್ ಯಾದವ್ 15 ಓವರ್ ಬೌಲಿಂಗ್ ಮಾಡಿ ಕೇವಲ 22 ರನ್ ನೀಡಿ 4 ವಿಕೆಟ್ ಕಬಳಿಸಿದರು.