Asianet Suvarna News Asianet Suvarna News

ಬಾಂಗ್ಲಾ ವಿರುದ್ಧ ಮೊದಲ ಟೆಸ್ಟ್‌: ಕುಸಿದ ಭಾರತವನ್ನು ಮೇಲೆತ್ತಿದ ಅಶ್ವಿನ್‌-ಜಡೇಜಾ

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅಮೋಘ ಜತೆಯಾಟದ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ.

Ravichandran Ashwin And Ravindra Jadeja lift India against Bangladesh in Chennai Test kvn
Author
First Published Sep 20, 2024, 9:27 AM IST | Last Updated Sep 20, 2024, 9:27 AM IST

ಚೆನ್ನೈ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಅದರಲ್ಲೂ ತವರಿನಲ್ಲಿ ಭಾರತದ ಆಪತ್ಬಾಂಧವರು, ಸೂಪರ್‌ಸ್ಟಾರ್‌ ಎಂದೇ ಕರೆಸಿಕೊಳ್ಳುವ ಹಿರಿಯ ಆಲ್ರೌಂಡರ್‌ಗಳಾದ ಆರ್‌.ಅಶ್ವಿನ್‌ ಹಾಗೂ ರವೀಂದ್ರ ಜಡೇಜಾ ಮತ್ತೊಮ್ಮೆ ಟೀಂ ಇಂಡಿಯಾ ಪಾಲಿಗೆ ಆಸರೆಯಾಗಿದ್ದಾರೆ. ಗುರುವಾರ ಬಾಂಗ್ಲಾದೇಶ ವಿರುದ್ಧ ಆರಂಭಗೊಂಡ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆರಂಭಿಕ ಆಘಾತ ಅನುಭವಿಸಿದ ಹೊರತಾಗಿಯೂ ಭಾರತ ತಂಡ ಅಶ್ವಿನ್‌, ಜಡೇಜಾ ಹೋರಾಟದಿಂದಾಗಿ ಮೊದಲ ದಿನ 6 ವಿಕೆಟ್‌ಗೆ 339 ರನ್‌ ಕಲೆಹಾಕಿದೆ.

ಪಿಚ್‌ ಆರಂಭದಲ್ಲಿ ವೇಗಿಗಳಿಗೆ ನೆರವಾಗುವುದರ ಬಗ್ಗೆ ತಿಳಿದಿದ್ದ ಬಾಂಗ್ಲಾ, ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ನಾಯಕ ಲಿಟನ್‌ ದಾಸ್‌ ನಿರ್ಧಾರ ತಪ್ಪಾಗಲಿಲ್ಲ. ಭಾರತದ ಮೂವರು ಪ್ರಮುಖ ಬ್ಯಾಟರ್‌ಗಳಾದ ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಶುಭ್‌ಮನ್‌ ಗಿಲ್‌ ತಂಡದ ಮೊತ್ತ 34 ರನ್‌ ಆಗುವಷ್ಟರಲ್ಲೇ ಪೆವಿಲಿಯನ್‌ ಸೇರಿದ್ದರು. ರೋಹಿತ್‌, ಕೊಹ್ಲಿ ತಲಾ 6, ಗಿಲ್‌ ಸೊನ್ನೆ ಸುತ್ತಿದರು. ಈ ಹಂತದಲ್ಲಿ ಯಶಸ್ವಿ ಜೈಸ್ವಾಲ್‌ಗೆ ಜೊತೆಗೂಡಿ 62 ರನ್‌ ಸೇರಿಸಿದ ರಿಷಭ್‌ ಪಂತ್‌ 39 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಈ ನಾಲ್ವರನ್ನೂ ಯುವ ವೇಗಿ ಹಸನ್‌ ಮಹ್ಮೂದ್‌ ಔಟ್‌ ಮಾಡಿದರು.

ಆ ಬಳಿಕ 5ನೇ ವಿಕೆಟ್‌ಗೆ ಜೈಸ್ವಾಲ್‌ ಹಾಗೂ ಕೆ.ಎಲ್‌.ರಾಹುಲ್‌ 48 ರನ್‌ ಜೊತೆಯಾಟವಾಡಿದರು. 56 ರನ್‌ ಗಳಿಸಿದ್ದ 22 ವರ್ಷದ ಜೈಸ್ವಾಲ್‌ ತಂಡದ ಮೊತ್ತ 144 ರನ್‌ ಆಗುವಷ್ಟರಲ್ಲಿ ನಹೀದ್‌ ರಾಣಾಗೆ ವಿಕೆಟ್‌ ಒಪ್ಪಿಸಿದರು. ಮುಂದಿನ ಓವರ್‌ನಲ್ಲಿ ಕೆ.ಎಲ್‌.ರಾಹುಲ್‌(16) ಮೆಹಿದಿ ಹಸನ್‌ ಎಸೆತದಲ್ಲಿ ಜಾಕಿರ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

ಆಸೀಸ್ ದಿಗ್ಗಜ ರಿಕಿ ಪಾಂಟಿಂಗ್‌ ಪಂಜಾಬ್‌ ಕಿಂಗ್ಸ್‌ನ ಹೊಸ ಕೋಚ್‌; ಇನ್ನಾದರೂ ಬದಲಾಗುತ್ತಾ ಪ್ರೀತಿ ಪಡೆಯ ಲಕ್?

ಅಶ್ವಿನ್‌-ಜಡೇಜಾ ಮೋಡಿ: 6 ಪ್ರಮುಖ ಬ್ಯಾಟರ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಅಶ್ವಿನ್‌-ಜಡೇಜಾ ಆಸರೆಯಾದರು. ಬಾಂಗ್ಲಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ವೇಗವಾಗಿಯೇ ರನ್‌ ಗಳಿಸುತ್ತಾ ಸಾಗಿತು. ಮುರಿಯದ 7ನೇ ವಿಕೆಟ್‌ಗೆ 5.17ರ ಸರಾಸರಿಯಲ್ಲಿ 227 ಎಸೆತಗಳಲ್ಲಿ 195 ರನ್‌ ಕಲೆಹಾಕಿತು.

ದಿನದ ಕೊನೆ ಅವಧಿ ಪೂರ್ಣ ಬ್ಯಾಟ್‌ ಮಾಡಿದ ಇವರಿಬ್ಬರು ಒಟ್ಟು 37.4 ಓವರ್‌ ಜೊತೆಯಾಗಿ ಆಡಿದರು. ಟೆಸ್ಟ್‌ನಲ್ಲಿ 6ನೇ ಹಾಗೂ ತವರಿನಲ್ಲಿ 2ನೇ ಶತಕ ಪೂರ್ಣಗೊಳಿಸಿರುವ ಅಶ್ವಿನ್‌ 112 ಎಸೆತಗಳಳ್ಲಿ 10 ಬೌಂಡರಿ, 2 ಸಿಕ್ಸರ್‌ನೊಂದಿಗೆ ಔಟಾಗದೆ 102 ರನ್‌ ಗಳಿಸಿದ್ದು, ಜಡೇಜಾ 117 ಎಸೆತಗಳಲ್ಲಿ 86 ರನ್‌ ಸಿಡಿಸಿ ಕ್ರೀಸ್‌ನಲ್ಲಿದ್ದಾರೆ.

ಸ್ಕೋರ್‌: ಭಾರತ 80 ಓವರ್‌ಗಳಲ್ಲಿ 339/6 (ಮೊದಲ ದಿನದಂತ್ಯಕ್ಕೆ) (ಅಶ್ವಿನ್‌ 102*, ಜಡೇಜಾ 86*, ಜೈಸ್ವಾಲ್‌ 56, ಹಸನ್‌ ಮಹ್ಮೂದ್‌ 4/58)

195 ರನ್‌ ಜೊತೆಯಾಟ: ಮೊದಲ ದಿನದ ದಾಖಲೆ

ಅಶ್ವಿನ್‌-ಜಡೇಜಾ 7ನೇ ವಿಕೆಟ್‌ಗೆ 195 ರನ್ ಜೊತೆಯಾಟವಾಡಿದರು. ಇದು ಟೆಸ್ಟ್‌ನ ಮೊದಲ ದಿನ 7 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ದಾಖಲಾದ ಗರಿಷ್ಠ ರನ್‌ ಜೊತೆಯಾಟ. 2009ರಲ್ಲಿ ನ್ಯೂಜಿಲೆಂಡ್‌ನ ಜೆಸ್ಸಿ ರೇಡರ್‌-ಡೇನಿಯಲ್‌ ವೆಟೋರಿ ಭಾರತ ವಿರುದ್ಧ 7 ವಿಕೆಟ್‌ಗೆ 186 ರನ್‌ ಜೊತೆಯಾಟವಾಡಿದ್ದರು.

ರಾಹುಲ್‌ ದ್ರಾವಿಡ್‌ರ ಕೋಚಿಂಗ್‌ ಶೈಲಿಗೂ ಗೌತಮ್‌ ಗಂಭೀರ್‌ರ ಕೋಚಿಂಗ್‌ ಶೈಲಿಗೂ ವ್ಯತ್ಯಾಸವಿದೆ.: ರೋಹಿತ್ ಶರ್ಮಾ

ಚೆನ್ನೈನಲ್ಲಿ 2 ಶತಕ, 2 ಬಾರಿ 5+ ವಿಕೆಟ್‌: ಅಶ್ವಿನ್‌ ದಾಖಲೆ

ಅಶ್ವಿನ್‌ ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ಟೆಸ್ಟ್‌ನಲ್ಲಿ 2 ಶತಕ ಬಾರಿಸಿದ್ದಾರೆ. ಈ ಮೂಲಕ ಒಂದೇ ಕ್ರೀಡಾಂಗಣದಲ್ಲಿ 2+ ಶತಕ ಹಾಗೂ 2ಕ್ಕಿಂತ ಹೆಚ್ಚು ಬಾರಿ 5+ ವಿಕೆಟ್‌ ಕಿತ್ತ 5ನೇ ಆಟಗಾರ ಎನಿಸಿಕೊಂಡಿದ್ದಾರೆ. ವೆಸ್ಟ್‌ಇಂಡೀಸ್‌ನ ಗ್ಯಾರ್‌ಫೀಲ್ಡ್‌ ಸೋಬರ್ಸ್‌(ಹೆಡ್ಲಿಂಗ್ಲೆ ಕ್ರೀಡಾಂಗಣ), ಭಾರತದ ಕಪಿಲ್ ದೇವ್‌(ಚೆನ್ನೈ), ನ್ಯೂಜಿಲೆಂಡ್‌ನ ಕ್ರಿಸ್‌ ಕೇರ್ನ್ಸ್‌(ಆಕ್ಲಂಡ್‌), ಇಂಗ್ಲೆಂಡ್‌ನ ಇಯಾನ್‌ ಬೋಥಮ್‌(ಹೆಡ್ಲಿಂಗ್ಲೆ) ಕೂಡಾ ಈ ಸಾಧನೆ ಮಾಡಿದ್ದಾರೆ.

04 ಶತಕ: ಅಶ್ವಿನ್‌ 8ನೇ ಕ್ರಮಾಂಕದಲ್ಲಿ 4ನೇ ಶತಕ ಬಾರಿಸಿದರು. ಇದು 2ನೇ ಗರಿಷ್ಠ. ನ್ಯೂಜಿಲೆಂಡ್‌ನ ಡೇನಿಯಲ್‌ ವೆಟೋರಿ 5 ಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ.

06 ಶತಕ: 6ನೇ ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ 6 ಶತಕ ಬಾರಿಸಿದ ವಿಶ್ವದ 8ನೇ ಕ್ರಿಕೆಟಿಗ ಅಶ್ವಿನ್‌. ಅಲಾನ್‌ ಬಾರ್ಡರ್‌, ದಿನೇಶ್‌ ಚಾಂಡಿಮಲ್‌, ಡಿ ಕಾಕ್‌, ಕಮ್ರಾನ್‌ ಅಕ್ಮಲ್‌, ರವಿ ಶಾಸ್ತ್ರಿ, ವೆಟೋರಿ, ಡಗ್‌ ವಾಲ್ಟರ್ಸ್‌ ಇತರ ಸಾಧಕರು.
 

Latest Videos
Follow Us:
Download App:
  • android
  • ios