Asianet Suvarna News Asianet Suvarna News

ನಿಧಾನಗತಿ ಬ್ಯಾಟಿಂಗ್‌: ಧೋನಿ ಮೇಲೆ ಸಿಟ್ಟಾಗಿದ್ದ ರವಿಶಾಸ್ತ್ರಿ..!

ಧೋನಿಯ ನಿಧಾನಗತಿ ಬ್ಯಾಟಿಂಗ್‌ಗೆ ಮಾಜಿ ಕೋಚ್‌ ರವಿಶಾಸ್ತ್ರಿ ಸಿಟ್ಟಾಗಿದ್ದರು
2018ರ ಇಂಗ್ಲೆಂಡ್‌ ಪ್ರವಾಸದ ವೇಳೆ ಲಾರ್ಡ್ಸ್‌ ಪಂದ್ಯದಲ್ಲಿ ಧೋನಿ ಮಂದಗತಿಯ ಬ್ಯಾಟಿಂಗ್
‘ಕೋಚಿಂಗ್‌ ಬಿಯಾಂಡ್‌: ಮೈ ಡೇಸ್‌ ವಿತ್‌ ಇಂಡಿಯನ್‌ ಕ್ರಿಕೆಟ್‌ ಟೀಂ’ನಲ್ಲಿ ಈ ವಿಚಾರ ಬಹಿರಂಗ

Ravi Shastri blasted MS Dhoni for his slow innings kvn
Author
First Published Jan 25, 2023, 1:05 PM IST

ನವದೆಹಲಿ(ಜ.25): ಮಾಜಿ ನಾಯಕ ಎಂ.ಎಸ್‌.ಧೋನಿಯ ನಿಧಾನಗತಿ ಬ್ಯಾಟಿಂಗ್‌ಗೆ ಮಾಜಿ ಕೋಚ್‌ ರವಿಶಾಸ್ತ್ರಿ ಹೇಗೆ ಸಿಟ್ಟಾಗಿದ್ದರು, ಅದಕ್ಕೆ ಧೋನಿಯ ಪ್ರತಿಕ್ರಿಯೆ ಹೇಗಿತ್ತು ಎನ್ನುವುದನ್ನು ಭಾರತ ಕ್ರಿಕೆಟ್‌ ತಂಡದ ಮಾಜಿ ಫೀಲ್ಡಿಂಗ್‌ ಕೋಚ್‌ ಆರ್‌.ಶ್ರೀಧರ್‌ ತಮ್ಮ ಪುಸ್ತಕ ‘ಕೋಚಿಂಗ್‌ ಬಿಯಾಂಡ್‌: ಮೈ ಡೇಸ್‌ ವಿತ್‌ ಇಂಡಿಯನ್‌ ಕ್ರಿಕೆಟ್‌ ಟೀಂ’ನಲ್ಲಿ ಬರೆದಿದ್ದಾರೆ.

2018ರ ಇಂಗ್ಲೆಂಡ್‌ ಪ್ರವಾಸದ ವೇಳೆ ಲಾರ್ಡ್ಸ್ನಲ್ಲಿ ನಡೆದಿದ್ದ 2ನೇ ಏಕದಿನ ಪಂದ್ಯದಲ್ಲಿ ಭಾರತ 323 ರನ್‌ ಗುರಿ ಬೆನ್ನತ್ತಿದ್ದಾಗ, ನಿರಂತರವಾಗಿ ವಿಕೆಟ್‌ಗಳು ಪತನಗೊಂಡ ಕಾರಣ ಧೋನಿ ನಿಧಾನಗತಿಯಲ್ಲಿ ಬ್ಯಾಟ್‌ ಮಾಡಿದರು. 59 ಎಸೆತದಲ್ಲಿ ಕೇವಲ 2 ಬೌಂಡರಿಯೊಂದಿಗೆ 37 ರನ್‌ ಗಳಿಸಿದರು. ‘ಕೊನೆ 10 ಓವರಲ್ಲಿ ಅಗತ್ಯ ರನ್‌ರೇಟ್‌ ಓವರ್‌ಗೆ 13 ರನ್‌ ಇದ್ದರೂ, 6 ಓವರಲ್ಲಿ ನಾವು ಕೇವಲ 20 ರನ್‌ ಗಳಿಸಿದೆವು. ಆ ಇನ್ನಿಂಗ್ಸಲ್ಲಿ ಧೋನಿ ಏಕದಿನದಲ್ಲಿ 10,000 ರನ್‌ ಮೈಲಿಗಲ್ಲು ತಲುಪಿದರು. ಅವರ ಈ ಸಾಧನೆ ಬಗ್ಗೆ ನಮಗೆಲ್ಲಾ ಖುಷಿ ಇತ್ತು. ಆದರೆ ಅವರೇಕೆ ಅಷ್ಟುನಿಧಾನವಾಗಿ ಆಡಿದರು ಎನ್ನುವುದಕ್ಕೆ ನಮಗೆ ಉತ್ತರಬೇಕಿತ್ತು’ ಎಂದು ಶ್ರೀಧರ್‌ ಬರೆದಿದ್ದಾರೆ.

2016ರಲ್ಲೇ ಧೋನಿಯಿಂದ ನಾಯಕತ್ವ ಕಿತ್ತುಕೊಳ್ಳಲು ಬಯಸಿದ್ರು ವಿರಾಟ್ ಕೊಹ್ಲಿ..!

ಇದಾಗ ಬಳಿಕ ಮುಂದಿನ ಪಂದ್ಯಕ್ಕೂ ಮುನ್ನ ತಂಡದ ಸಭೆಯಲ್ಲಿ ಕೋಚ್‌ ರವಿಶಾಸ್ತ್ರಿ ಕೆಂಡಾಮಂಡಲಗೊಂಡಿದ್ದರು ಎಂದಿರುವ ಶ್ರೀಧರ್‌, ‘ನೀವು ಎಷ್ಟೇ ದೊಡ್ಡ ಆಟಗಾರನಾಗಿದ್ದರೂ ಸರಿ, ನನ್ನ ಅವಧಿಯಲ್ಲಿ ಇನ್ನೆಂದೂ ಇಂತಹ ಸನ್ನಿವೇಶ ಮರುಕಳಿಸಬಾರದು. ಗೆಲ್ಲಲು ಪ್ರಯತ್ನಿಸದೆ ಸೋಲುವುದನ್ನು ನಾನು ಯಾವತ್ತೂ ಸಹಿಸುವುದಿಲ್ಲ. ಯಾರಾದರೂ ಆ ರೀತಿ ಮಾಡಿದರೆ ಅದೇ ಅವರ ಕೊನೆ ಪಂದ್ಯವಾಗಲಿದೆ. ಇಡೀ ತಂಡಕ್ಕೆ ಈ ಮಾತುಗಳನ್ನು ಹೇಳಿದರೂ, ಶಾಸ್ತ್ರಿಯ ಕಣ್ಣುಗಳು ಧೋನಿ ಮೇಲಿತ್ತು. ಧೋನಿ ಸಹ ಶಾಂತಚಿತ್ತದಿಂದ ಕಣ್ಣು ಮಿಟುಕಿಸದೆ, ಅತ್ತಿತ್ತ ನೋಡದೆ ಶಾಸ್ತ್ರಿಯ ಮಾತುಗಳನ್ನು ಕೇಳಿಸಿಕೊಂಡರು’ ಎಂದು ತಿಳಿಸಿದ್ದಾರೆ.

2016ರಲ್ಲೇ  ಟೀಂ ಇಂಡಿಯಾ ನಾಯಕರಾಗಲು ಬಯಸಿದ್ರು ವಿರಾಟ್ ಕೊಹ್ಲಿ: 

ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿಯೇ ವಿರಾಟ್ ಕೊಹ್ಲಿ 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾಗಿ ಕೆಲವೇ ವರ್ಷಗಳಲ್ಲಿ ವಿರಾಟ್ ಕೊಹ್ಲಿ, ಧೋನಿಯ ಉತ್ತರಾಧಿಕಾರಿಯಾಗಿ ಟೀಂ ಇಂಡಿಯಾ ನಾಯಕನಾಗಿಯೂ ನೇಮಕವಾಗಿದ್ದರು. 2014ರಲ್ಲಿ ಮಹೇಂದ್ರ ಸಿಂಗ್ ಧೋನಿ ಟೆಸ್ಟ್‌ಗೆ ವಿದಾಯ ಹೇಳಿದ ಬಳಿಕ ಭಾರತ ಟೆಸ್ಟ್‌ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ನೇಮಕವಾಗಿದ್ದರು. ಆದರೆ ವಿರಾಟ್ ಕೊಹ್ಲಿ, 2016ರಲ್ಲಿಯೇ ಟೀಂ ಇಂಡಿಯಾ ಸೀಮಿತ ಓವರ್‌ಗಳ ತಂಡದ ನಾಯಕರಾಗಲೂ ಬಯಸಿದ್ದರು ಎನ್ನುವ ವಿಚಾರವನ್ನು ಬಹಿರಂಗಗೊಳಿಸಿದ್ದರು.

"ಒಂದು ಸಂಜೆ, ರವಿಶಾಸ್ತ್ರಿ, ವಿರಾಟ್ ಕೊಹ್ಲಿಯನ್ನು ಕರೆದು, " ನೋಡು ವಿರಾಟ್, ಧೋನಿ ಈಗಾಗಲೇ ನಿಮಗೆ ಟೆಸ್ಟ್ ತಂಡದ ನಾಯಕತ್ವ ಬಿಟ್ಟುಕೊಟ್ಟಿದ್ದಾರೆ. ಅದನ್ನು ನೀನು ಮೊದಲು ಗೌರವಿಸುವುದನ್ನು ಕಲಿ. ಅವರು ನಿನಗೆ ಸರಿಯಾದ ಸಮಯ ಬಂದಾಗ ಸೀಮಿತ ಓವರ್‌ಗಳ ತಂಡದ ನಾಯಕತ್ವವನ್ನೂ ಬಿಟ್ಟುಕೊಡುತ್ತಾರೆ ಕೂಡಾ. ಅಲ್ಲಿಯವರೆಗೂ ನೀನು ಅವರ ನಿರ್ಧಾರವನ್ನು ಗೌರವಿಸು. ಒಂದು ವೇಳೆ ನೀನು ಅವರನ್ನು ಗೌರವಿಸದೇ ಹೋದರೇ, ನೀನು ನಾಯಕನಾದ ಬಳಿಕ ತಂಡವು ನಿನಗೆ ಗೌರವ ನೀಡುವುದಿಲ್ಲ ನೆನಪಿರಲಿ. ಈಗ ಪರಿಸ್ಥಿತಿ ಏನೇ ಇರಲಿ, ನೀನು ಅವರನ್ನು ಗೌರವಿಸಬೇಕಷ್ಟೇ. ನಿನ್ನ ಕಾಲ ಬಂದೇ ಬರುತ್ತದೆ, ಅದರ ಹಿಂದೆ ಓಡಬೇಡ ಅಷ್ಟೇ ಎಂದು ಹೇಳಿದ್ದರು ಎಂದು ಆರ್‌ ಶ್ರೀಧರ್ ಬರೆದುಕೊಂಡಿದ್ದಾರೆ. 

Follow Us:
Download App:
  • android
  • ios