2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ 'ಎ' ಗುಂಪಿನಿಂದ ಭಾರತ, ನ್ಯೂಜಿಲೆಂಡ್ ಸೆಮಿಫೈನಲ್ ತಲುಪಿವೆ. 'ಬಿ' ಗುಂಪಿನಲ್ಲಿ ಇಂಗ್ಲೆಂಡ್ ಹೊರಬಿದ್ದಿದ್ದು, ಆಸ್ಟ್ರೇಲಿಯಾ, ಆಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ ನಡುವೆ ಪೈಪೋಟಿ ಇದೆ. ದಕ್ಷಿಣ ಆಫ್ರಿಕಾದ ಬ್ಯಾಟರ್ ರಾಸಿ ವ್ಯಾನ್ ಡರ್ ಡುಸೇನ್, ಇದು ತಮ್ಮ ಕೊನೆಯ ಐಸಿಸಿ ಟೂರ್ನಿಯಾಗಲಿದೆ ಎಂದು ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ಆಫ್ಘಾನಿಸ್ತಾನ ವಿರುದ್ಧ ಗೆದ್ದಿದ್ದು, ಆಸ್ಟ್ರೇಲಿಯಾ ಪಂದ್ಯ ಮಳೆಯಿಂದ ರದ್ದಾಯಿತು.
ಕರಾಚಿ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ದಿನದಿಂದ ದಿನಕ್ಕೆ ರೋಚಕತೆ ಕಾಯ್ದುಕೊಳ್ಳುತ್ತಾ ಮುಂದುವರೆಯುತ್ತಿದೆ. ಈಗಾಗಲೇ 'ಎ' ಗುಂಪಿನಿಂದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಇನ್ನೊಂದೆಡೆ, 'ಬಿ' ಗುಂಪಿನಲ್ಲಿ ಇಂಗ್ಲೆಂಡ್ ತಂಡವು ಸತತ ಎರಡು ಪಂದ್ಯಗಳನ್ನು ಸೋಲುವ ಮೂಲಕ ಸೆಮೀಸ್ ರೇಸ್‌ನಿಂದ ಹೊರಬಿದ್ದಿದ್ದು, ಇನ್ನುಳಿದ ಎರಡು ಸ್ಥಾನಕ್ಕೆ ಆಸ್ಟ್ರೇಲಿಯಾ, ಆಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದೆ. ಹೀಗಿರುವಾಗಲೇ ಸ್ಟಾರ್ ಆಟಗಾರನೊಬ್ಬ ತಮ್ಮ ನಿವೃತ್ತಿಯ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಈ ಆಟಗಾರನ ಪಾಲಿಗೆ ಕಟ್ಟಕಡೆಯ ಐಸಿಸಿ ಟೂರ್ನಿಯಾಗಲಿದೆ ಎಂದಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ರಾಸಿ ವ್ಯಾನ್ ಡರ್ ಡುಸೇನ್ ಅಚ್ಚರಿ ಹೇಳಿಕೆ:
ದಕ್ಷಿಣ ಆಫ್ರಿಕಾ ಮೂಲದ ಸ್ಟಾರ್ ಬ್ಯಾಟರ್ ರಾಸಿ ವ್ಯಾನ್ ಡರ್ ಡುಸೇನ್, ಸದ್ಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಹರಿಣಗಳ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಆಫ್ಘಾನಿಸ್ತಾನ ಎದುರು ನಡೆದ ಪಂದ್ಯದಲ್ಲಿ ರಾಸಿ ವ್ಯಾನ್ ಡರ್ ಡುಸೇನ್ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದರ ಬೆನ್ನಲ್ಲೇ ಮಾತನಾಡಿರುವ ರಾಸಿ ವ್ಯಾನ್ ಡರ್ ಡುಸೇನ್ ಅವರು, 'ಇದು ಖಂಡಿತವಾಗಿಯೂ ನನ್ನ ಪಾಲಿನ ಕೊನೆಯ ಐಸಿಸಿ ಟೂರ್ನಿ ಎನಿಸಿಲಿದೆ. ಇತ್ತೀಚಿಗಿನ ದಿನಗಳಲ್ಲಿ ಸಾಕಷ್ಟು ಯುವ ಆಟಗಾರರು ತಂಡ ಕೂಡಿಕೊಳ್ಳಲು ಪೈಪೋಟಿ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ. ಹೀಗಾಗಿ ಟ್ರಿಸ್ಟನ್ ಸ್ಟಬ್ಸ್ ಅವರಂತಹ ಪ್ರತಿಭಾನ್ವಿತ ಆಟಗಾರರೇ ಹೊರಗುಳಿಯುತ್ತಿದ್ದಾರೆ' ಎಂದು 36 ವರ್ಷದ ಮಧ್ಯಮ ಕ್ರಮಾಂಕದ ಬ್ಯಾಟರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಈ ವರ್ಷ ಇನ್ನೂ ಎರಡ್ಮೂರು ಭಾರತ-ಪಾಕ್ ಕ್ರಿಕೆಟ್ ಪಂದ್ಯ ನೋಡಲು ರೆಡಿಯಾಗಿ!
ಸದ್ಯ ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ಹಾಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡವನ್ನು ಮಣಿಸಿ ಶುಭಾರಂಭ ಮಾಡಿತ್ತು. ಇದಾದ ಬಳಿಕ ಆಸ್ಟ್ರೇಲಿಯಾ ಎದುರಿನ ಪಂದ್ಯವು ಮಳೆಯಿಂದ ರದ್ದಾಗಿತ್ತು. ಹೀಗಾಗಿ ದಕ್ಷಿಣ ಆಫ್ರಿಕಾ ತಂಡವು 3 ಅಂಕಗಳೊಂದಿಗೆ 'ಬಿ' ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದೀಗ 'ಬಿ' ಗುಂಪಿನ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಇಂಗ್ಲೆಂಡ್ ತಂಡದ ಸವಾಲನ್ನು ಎದುರಿಸಲಿದೆ. ಬಹುತೇಕ ಹರಿಣಗಳ ಪಡೆ ಸೆಮೀಸ್‌ಗೆ ಒಂದು ಹೆಜ್ಜೆಯಿಟ್ಟಿದ್ದು, ಇಂಗ್ಲೆಂಡ್ ಎದುರು ಗೆಲುವು ಸಾಧಿಸಿದರೆ ಸೆಮೀಸ್‌ಗೆ ಅಧಿಕೃತವಾಗಿ ಎಂಟ್ರಿ ಕೊಡಲಿದೆ. ಇಂಗ್ಲೆಂಡ್ ಎದುರು ಸಣ್ಣ ಅಂತರದಲ್ಲಿ ಸೋಲು ಅನುಭವಿಸಿದರೂ ಹರಿಣಗಳ ಪಡೆಯ ಸೆಮೀಸ್ ಅವಕಾಶ ತಪ್ಪಿಹೋಗಲು ಸಾಧ್ಯವಿಲ್ಲ. ಇಂದು ನಡೆಯಲಿರುವ ಆಸ್ಟ್ರೇಲಿಯಾ-ಆಫ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ಗೆಲುವು ದಾಖಲಿಸುವ ತಂಡವು, 'ಬಿ' ಗುಂಪಿನಿಂದ ದಕ್ಷಿಣ ಆಫ್ರಿಕಾ ಜತೆ ಅಂತಿಮ ನಾಲ್ಕರ ಘಟಕ್ಕೆ ಪ್ರವೇಶ ಪಡೆಯಲಿವೆ.
ಇದನ್ನೂ ಓದಿ:ಚಾಂಪಿಯನ್ಸ್ ಟ್ರೋಫಿ: ಸೆಮೀಸ್ ಮೇಲೆ ಕಣ್ಣಿಟ್ಟ ಆಸ್ಟ್ರೇಲಿಯಾ, ಆಫ್ಘನ್ ತಂಡಗಳಿಗೆ ಡು ಆರ್ ಡೈ ಮ್ಯಾಚ್!
ರಾಸಿ ವ್ಯಾನ್ ಡರ್ ಡುಸೇನ್ ಅವರ ವೃತ್ತಿಜೀವನವನ್ನು ಗಮನಿಸುವುದಾದರೇ, ಇದುವರೆಗೂ ಅವರು 18 ಟೆಸ್ಟ್, 69 ಏಕದಿನ ಹಾಗೂ 50 ಟಿ20 ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್‌ನಲ್ಲಿ 6 ಅರ್ಧಶತಕ ಸಹಿತ 905 ರನ್, ಇನ್ನು ಏಕದಿನ ಕ್ರಿಕೆಟ್‌ನಲ್ಲಿ 6 ಶತಕ ಹಾಗೂ 15 ಅರ್ಧಶತಕ ಸಹಿತ 2516 ರನ್ ಸಿಡಿಸಿದ್ದಾರೆ. ಇನ್ನು 50 ಟಿ20 ಪಂದ್ಯಗಳಿಂದ ಹರಿಣಗಳ ಪರ 9 ಅರ್ಧಶತಕ ಸಹಿತ 1257 ರನ್ ಸಿಡಿಸಿದ್ದಾರೆ.
