ರಣಜಿ ಟ್ರೋಫಿಯಲ್ಲಿ ಪಂಜಾಬ್ ವಿರುದ್ಧ ಸ್ಮರಣ್ ದ್ವಿಶತಕ (203) ಬಾರಿಸಿದ್ದರಿಂದ ಕರ್ನಾಟಕ 475 ರನ್ ಗಳಿಸಿ 420 ರನ್ ಮುನ್ನಡೆ ಸಾಧಿಸಿದೆ. ಪಂಜಾಬ್ ಎರಡನೇ ಇನ್ನಿಂಗ್ಸ್‌ನಲ್ಲಿ 24/2 ರನ್ ಗಳಿಸಿದ್ದು, ಇನ್ನೂ 396 ರನ್ ಹಿನ್ನಡೆಯಲ್ಲಿದೆ. ಕರ್ನಾಟಕ ಇನ್ನಿಂಗ್ಸ್ ಗೆಲುವಿನ ನಿರೀಕ್ಷೆಯಲ್ಲಿದ್ದು, ನಾಕೌಟ್ ಹಂತದ ಆಸೆ ಜೀವಂತವಾಗಿದೆ.

ಬೆಂಗಳೂರು: 2024-25ರ ರಣಜಿ ಟ್ರೋಫಿಯಲ್ಲಿ ನಾಕೌಟ್ ಹಂತಕ್ಕೆ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಕರ್ನಾಟಕ ಸಕಲ ಪ್ರಯತ್ನ ನಡೆಸುತ್ತಿದೆ. ಇಲ್ಲಿ ನಡೆಯುತ್ತಿರುವ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್ .ಸ್ಮರಣ್ ಅಮೋಘ ದ್ವಿಶತಕ ಬಾರಿಸಿದ್ದು, ರಾಜ್ಯ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಇನ್ನಿಂಗ್ಸ್ ಗೆಲುವಿನ ನಿರೀಕ್ಷೆ ಮೂಡಿಸಿದ್ದಾರೆ.

ಮೊದಲ ದಿನ ಪಂಜಾಬ್ ತಂಡವನ್ನು ಮೊದಲ ಇನ್ನಿಂಗ್ನಲ್ಲಿ ಕೇವಲ 55 ರನ್‌ಗೆ ಆಲೌಟ್ ಮಾಡಿ, ದಿನದಂತ್ಯಕ್ಕೆ 4 ವಿಕೆಟ್‌ಗೆ 199 ರನ್ ಗಳಿಸಿದ್ದ ಕರ್ನಾಟಕ, 2ನೇ ದಿನ ಆಕರ್ಷಕ ಬ್ಯಾಟಿಂಗ್ ಮುಂದುವರಿಸಿತು. 122.1 ಓವರ್ ಬ್ಯಾಟ್ ಮಾಡಿದ ರಾಜ್ಯ ತಂಡ 475 ರನ್‌ಗೆ ಆಲೌಟ್ ಆಗಿ 420 ರನ್‌ಗಳ ಮುನ್ನಡೆ ಪಡೆಯಿತು.

ಬೃಹತ್ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್, 2ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 24 ರನ್ ಗಳಿಸಿದ್ದು, ಇನ್ನೂ 396 ರನ್ ಹಿನ್ನಡೆಯಲ್ಲಿದೆ. 7 ರನ್ ಗಳಿಸಿರುವ ಶುಭಮನ್ ಗಿಲ್ ಕ್ರೀಸ್ ಕಾಯ್ದುಕೊಂಡಿದ್ದು, ಅವರ ಮೇಲೆ ಭಾರಿ ಒತ್ತಡವಿದೆ. 

ಸ್ಮರಣೀಯ ಆಟ: ಆರ್. ಸ್ಮರಣ್ ಸುಲಲಿತವಾಗಿ ಬ್ಯಾಟ್ ಬೀಸಿ ನಿರಾಯಾಸವಾಗಿ ರನ್ ಕಲೆಹಾಕಿದರೆ, ಅಭಿನವ್‌ ಮನೋಹರ್ (34), ಶ್ರೇಯಸ್ ಗೋಪಾಲ್ (31), ಯಶೋವರ್ಧನ್ (26) ರಿಂದ ಎಡಗೈ ಬ್ಯಾಟರ್ ಗೆ ಉತ್ತಮ ಬೆಂಬಲ ದೊರೆಯಿತು. ತಮ್ಮ ಇನ್ನಿಂಗನ್ನು ಶತಕಕ್ಕೆ ಸೀಮಿತಗೊಳಿಸದ ಸ್ಮರಣ್, ದ್ವಿಶತಕ ತಲುಪಿ ಸಂಭ್ರಮದ ಅಲೆಯಲ್ಲಿ ತೇಲಿದರು. 277 ಎಸೆತಗಳಲ್ಲಿ 25 ಬೌಂಡರಿ, 3 ಸಿಕ್ಸರ್‌ನೊಂದಿಗೆ 203 ರನ್ ಗಳಿಸಿ ಔಟಾಗುವ ವೇಳೆಗೆ ತಂಡದ ಮೊತ್ತ 400 ರನ್ ದಾಟಿತ್ತು. ಪ್ರಸಿದ್ಧ ಕೃಷ್ಣ 30, ಕೌಶಿಕ್ ಔಟಾಗದೆ 10, ಅಭಿಲಾಷ್ 12 ರನ್ ಕಲೆಹಾಕಿ ತಂಡದ ಮೊತ್ತವನ್ನು 475ಕ್ಕೆ ಹೆಚ್ಚಿಸಿದರು.

ಪಂದ್ಯ ಶನಿವಾರಮುಕ್ತಾಯಗೊಳ್ಳುವ ನಿರೀಕ್ಷೆ ಇದ್ದು, ಕರ್ನಾಟಕ ಇನ್ನಿಂಗ್ಸ್ ಗೆಲುವು ಸಾಧಿಸಿದರೆ ಒಂದು ಬೋನಸ್ ಅಂಕ ಸಿಗಲಿದೆ. ಅದು ರಾಜ್ಯ ತಂಡ ನಾಕೌಟ್ ಹಂತಕ್ಕೆ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ನೆರವಾಗಲಿದೆ.

ಸ್ಕೋರ್: 
ಪಂಜಾಬ್ 55 ಹಾಗೂ 24/2(ಅನ್ನೋಲ್ ಪ್ರೀತ್ 14, ಗಿಲ್ ಔಟಾಗದೆ 7, ಪ್ರಸಿದ್ 1-4, ಅಭಿಲಾಷ್ 1-11),
ಕರ್ನಾಟಕ 475/10 (ಸ್ಮರಣ್ 203, ಅಭಿನವ್ 34, ಶ್ರೇಯಸ್ 31, ಪ್ರಸಿದ್ಧ 30, ಯಶೋವರ್ಧನ್ 26, ಮಾರ್ಕಂಡೆ 3-53)

ರಣಜಿ: ಇನ್ನಿಂಗ್ಸಲ್ಲಿ 9 ವಿಕೆಟ್‌ ಕಿತ್ತ ಗುಜರಾತ್‌ ಸ್ಪಿನ್ನರ್‌ ಸಿದ್ಧಾರ್ಥ್‌ ದೇಸಾಯಿ

ಅಹಮದಾಬಾದ್‌: ಗುಜರಾತ್‌ನ ಎಡಗೈ ಸ್ಪಿನ್ನರ್‌ ಸಿದ್ಧಾರ್ಥ್‌ ದೇಸಾಯಿಗೆ ಇನ್ನಿಂಗ್ಸ್‌ನಲ್ಲಿ ಎಲ್ಲ 10 ವಿಕೆಟ್‌ ಕಿತ್ತ ಸಾಧನೆ ಮಾಡುವ ಅವಕಾಶ ಸ್ವಲ್ಪದರಲ್ಲೇ ಕೈತಪ್ಪಿತು. ಇಲ್ಲಿ ನಡೆಯುತ್ತಿರುವ ಉತ್ತರಾಖಂಡ ವಿರುದ್ಧದ ರಣಜಿ ಪಂದ್ಯದ ಮೊದಲ ದಿನವಾದ ಗುರುವಾರ, ಮೊದಲ ಇನ್ನಿಂಗ್ಸಲ್ಲಿ ಸಿದ್ಧಾರ್ಥ್‌ ಎದುರಾಳಿಯ ಮೊದಲ 9 ವಿಕೆಟ್‌ ಉರುಳಿಸಿದ್ದರು. ಕೊನೆಯ ವಿಕೆಟ್‌ ಸಹ ಅವರೇ ಪಡೆಯುವ ನಿರೀಕ್ಷೆಯಿತ್ತು. ಆದರೆ ಕೊನೆಯ ವಿಕೆಟ್‌ ಮತ್ತೊಬ್ಬ ಎಡಗೈ ಸ್ಪಿನ್ನರ್‌ ವಿಶಾಲ್‌ ಜೈಸ್ವಾಲ್‌ ಪಾಲಾಯಿತು.