ಮುಂಬೈ[ಜ.05]: ಪ್ರತೀಕ್ ಜೈನ್ ಮಾರಕ ದಾಳಿಗೆ ತತ್ತರಿಸಿದ ಮುಂಬೈ ಎರಡನೇ ಇನಿಂಗ್ಸ್’ನಲ್ಲಿ 9 ವಿಕೆಟ್ ಕಳೆದುಕೊಂಡು 149 ರನ್ ಬಾರಿಸಿ ಆಟ ಮುಗಿಸಿದೆ. ಇದೀಗ ಕರ್ನಾಟಕಕ್ಕೆ ಗೆಲ್ಲಲು 126 ರನ್’ಗಳ ಗುರಿ ನೀಡಿದೆ.

ಎರಡನೇ ದಿನದಂತ್ಯಕ್ಕೆ ಮುಂಬೈ ತಂಡ 5 ವಿಕೆಟ್ ಕಳೆದುಕೊಂಡು 109 ರನ್ ಬಾರಿಸಿತ್ತು. ಮೂರನೇ ದಿನದಾಟದ ಆರಂಭದಲ್ಲೇ ತನ್ನ ಖಾತೆಗೆ 40 ರನ್ ಜೋಡಿಸಲಷ್ಟೇ ಶಕ್ತವಾಯಿತು. ಇನ್ನು ಭುಜದ ಗಾಯಕ್ಕೆ ತುತ್ತಾಗಿರುವ ಪೃಥ್ವಿ ಶಾ ಬ್ಯಾಟಿಂಗ್ ಮಾಡಲು ಕಣಕ್ಕಿಳಿಯಲಿಲ್ಲ. ಹೀಗಾಗಿ ಕರ್ನಾಟಕಕ್ಕೆ ಸಾಧಾರಣ ಗುರಿ ಸಿಕ್ಕಿದೆ. ಪ್ರತೀಕ್ ಜೈನ್ ಕೇವಲ 11 ರನ್ ನೀಡಿ ಮುಂಬೈನ 4 ವಿಕೆಟ್ ಕಬಳಿಸಿ ಮಿಂಚಿದರು.

ರಣಜಿ ಟ್ರೋಫಿ: ಮುಂಬೈ ಮೇಲೆ ಬಿಗಿ ಹಿಡಿತ ಸಾಧಿಸಿದ ಕರ್ನಾಟಕ

ಮುಂಬೈ ಪರ ಎರಡನೇ ದಿನದಾಟದಂತ್ಯಕ್ಕೆ 53 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಸರ್ಫರಾಜ್ ಖಾನ್, ಮೂರನೇ ದಿನವೂ ಕರ್ನಾಟಕ ಬೌಲರ್’ಗಳೆದುರು ಪ್ರತಿರೋಧ ತೋರಿದರು. ಸರ್ಫರಾಜ್ 140 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 71 ರನ್ ಬಾರಿಸಿದರು. 

ಕರ್ನಾಟಕ ಪರ ಪ್ರತೀಕ್ ಜೈನ್ 4 ವಿಕೆಟ್ ಕಬಳಿಸಿದರೆ, ಅಭಿಮನ್ಯು ಮಿಥುನ್ 3 ಹಾಗೂ ವಿ. ಕೌಶಿಕ್ 2 ವಿಕೆಟ್ ಕಬಳಿಸಿ ಮಿಂಚಿದರು. 

ಸಂಕ್ಷಿಪ್ತ ಸ್ಕೋರ್:

ಮುಂಬೈ: 194& 149/9
ಕರ್ನಾಟಕ: 218/10

[* ಮುಂಬೈ ಬ್ಯಾಟಿಂಗ್ ಮುಕ್ತಾಯದ ವೇಳೆಗೆ]