ರಣಜಿ ಟ್ರೋಫಿ: ಮುಂಬೈ ಎದುರು ಕರ್ನಾಟಕಕ್ಕೆ ಅಲ್ಪ ಮುನ್ನಡೆ
ಆರ್. ಸಮರ್ಥ್ ಆಕರ್ಷಕ ಅರ್ಧಶತಕ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬಿ.ಆರ್ ಶರತ್ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡವು ಮುಂಬೈ ಎದುರು ಅಲ್ಪ ಮುನ್ನಡೆ ಸಾಧಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಮುಂಬೈ[ಜ.04]: ಆರಂಭಿಕ ಬ್ಯಾಟ್ಸ್‌ಮನ್ ಆರ್. ಸಮರ್ಥ್[86] ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬಿ.ಆರ್. ಶರತ್[46] ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡವು 218 ರನ್ ಬಾರಿಸಿ ಆಲೌಟ್ ಆಗಿದೆ. ಇದರೊಂದಿಗೆ ಬಲಿಷ್ಠ ಮುಂಬೈ ಎದುರು ಕರ್ನಾಟಕ 24 ರನ್’ಗಳ ಅಲ್ಪ ಮುನ್ನಡೆ ಗಳಿಸಿದೆ.
ಮೂರು ವಿಕೆಟ್ ಕಳೆದುಕೊಂಡು 79 ರನ್’ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಕರ್ನಾಟಕ ಆರಂಭದಲ್ಲೇ ನಾಯಕ ಕರುಣ್ ನಾಯರ್ ವಿಕೆಟ್ ಕಳೆದುಕೊಂಡಿತು. ನಾಯರ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಆ ಬಳಿಕ ಸಮರ್ಥ್ ಹಾಗೂ ಶ್ರೇಯಸ್ ಗೋಪಾಲ್ ಜೋಡಿ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡವನ್ನು 150ರ ಗಡಿದ ದಾಟಿಸಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಶಶಾಂಕ್ ಯಶಸ್ವಿಯಾದರು. 85 ಎಸೆತಗಳಲ್ಲಿ 3 ಬೌಂಡರಿ ಸಹಿತ 31 ರನ್ ಬಾರಿಸಿದ್ದ ಶ್ರೇಯಸ್ ಗೋಪಾಲ್ ಮುಂಬೈ ನಾಯಕ ಸೂರ್ಯ ಕುಮಾರ್ ಯಾದವ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ರಣಜಿ ಟ್ರೋಫಿ: ಬೌಲಿಂಗ್‌ನಲ್ಲಿ ಮಿಂಚಿ ಬ್ಯಾಟಿಂಗ್‌ನಲ್ಲಿ ಎಡವಿದ ಕರ್ನಾಟಕ
ತಂಡಕ್ಕೆ ಆಸರೆಯಾದ ಸಮರ್ಥ್: ಈ ಹಿಂದಿನ ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದ್ದಕ್ಕಾಗಿ ಸಮರ್ಥ್ ತಂಡದಿಂದ ಹೊರಬಿದ್ದಿದ್ದರು. ಆದರೆ ಮಯಾಂಕ್ ಅಗರ್’ವಾಲ್’ಗೆ ವಿಶ್ರಾಂತಿ ನೀಡಿದ್ದರಿಂದ ಮತ್ತೆ ಸಮರ್ಥ್’ಗೆ ಅವಕಾಶ ನೀಡಲಾಯಿತು. ಆರಂಭಿಕನಾಗಿ ಕಣಕ್ಕಿಳಿದ ಸಮರ್ಥ್ ಕೊನೆಗೂ ತಂಡಕ್ಕೆ ಆಸರೆಯಾಗಬಲ್ಲ ಇನಿಂಗ್ಸ್ ಕಟ್ಟಿದರು. 139 ಎಸೆತಗಳನ್ನು ಎದುರಿಸಿದ ಸಮರ್ಥ್ 86 ರನ್ ಬಾರಿಸಿದರು. ಬ್ಯಾಟಿಂಗ್ ಮಾಡಲು ಕ್ಲಿಷ್ಟಕರವಾದ ಪಿಚ್’ನಲ್ಲಿ ನೆಲಕಚ್ಚಿ ಆಡುವ ಮೂಲಕ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಮರ್ಥ್ ಸಾಬೀತು ಪಡಿಸಿದರು.
ನಾಟಕೀಯ ಕುಸಿತ: ಒಂದು ಹಂತದಲ್ಲಿ 4 ವಿಕೆಟ್ ಕಳೆದುಕೊಂಡು 150 ರನ್ ಬಾರಿಸಿ ಬೃಹತ್ ಮೊತ್ತದತ್ತ ಮುನ್ನುಗ್ಗುವ ಸೂಚನೆ ನೀಡಿದ ಕರ್ನಾಟಕ ದಿಢೀರ್ ಕುಸಿತ ಕಂಡಿತು. ಗೋಪಾಲ್ ವಿಕೆಟ್ ಪತನದ ಬೆನ್ನಲ್ಲೇ ಸಮರ್ಥ್ ಕೂಡಾ ಶಶಾಂಕ್’ಗೆ ವಿಕೆಟ್ ಒಪ್ಪಿಸಿದರು. ಮಿಥುನ್ ಆಟ ಕೇವಲ 2 ರನ್’ಗೆ ಸೀಮಿತವಾದರೆ, ರೋನಿತ್ ಮೋರೆ 4 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಈ ವೇಳೆ ಕರ್ನಾಟಕ ಮೊದಲ ಇನಿಂಗ್ಸ್ ಹಿನ್ನಡೆಯ ಭೀತಿ ಅನುಭವಿಸಿತು. ಆದರೆ ಈ ವೇಳೆ ಶರತ್ ಹಾಗೂ ಕೌಶಿಕ್ ಜೋಡಿ ತಂಡವನ್ನು ಇನ್ನೂರರ ಗಡಿ ದಾಟಿಸಿತು. 54 ಎಸೆತಗಳನ್ನು ಎದುರಿಸಿದ ಶರತ್ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 46 ರನ್ ಬಾರಿಸಿದರು. ಇನ್ನು ಕೌಶಿಕ್ 35 ಎಸೆತಗಳನ್ನು ಎದುರಿಸಿ 4 ರನ್ ಬಾರಿಸಿದರಾದರೂ, ಶರತ್’ಗೆ ಉತ್ತಮ ಸಾಥ್ ನೀಡಿದರು.
ಸಂಕ್ಷಿಪ್ತ ಸ್ಕೋರ್:
ಮುಂಬೈ: 194/10
ಕರ್ನಾಟಕ: 218/10
[*ಕರ್ನಾಟಕದ ಮೊದಲ ಇನಿಂಗ್ಸ್ ಮುಕ್ತಾಯದ ವೇಳೆಗೆ]