ಬೆಂಗಳೂರು(ಫೆ.12): ಕರ್ನಾಟಕ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿದ ಬರೋಡ ತಂಡ ಮೊದಲ ಇನಿಂಗ್ಸ್‌ನಲ್ಲಿ ಕೇವಲ 85 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಇನಿಂಗ್ಸ್ ಮುನ್ನಡೆ ಸಾಧಿಸಲು ಕರ್ನಾಟಕಕ್ಕೆ ಒಳ್ಳೆಯ ಅವಕಾಶ ಸಿಕ್ಕಂತಾಗಿದೆ.

ರಣಜಿ ಟ್ರೋಫಿ: ಕರ್ನಾಟಕಕ್ಕೆ ಉತ್ತಮ ಆರಂಭ ನೀಡಿದ ಪ್ರಸಿದ್ದ್ ಕೃಷ್ಣ

ಟಾಸ್ ಗೆದ್ದ ಕರ್ನಾಟಕದ ನಾಯಕ ಕರುಣ್ ನಾಯರ್ ಫೀಲ್ಡಿಂಗ್ ಮಾಡಲು ತೀರ್ಮಾನಿಸಿದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ಮಾಡಿದ ಕರ್ನಾಟಕದ ಬೌಲರ್‌ಗಳು ಬರೋಡ ಬ್ಯಾಟ್ಸ್‌ಮನ್‌ಗಳನ್ನು ರನ್‌ ಗಳಿಸಲು ಪರದಾಡುವಂತೆ ಮಾಡಿದರು. ಬರೋಡ ಪರ ಅಮನ್ದೂರ್ ಪಠಾನ್(40) ಹಾಗೂ ದೀಪಕ್ ಹೂಡಾ(20) ಹೊರತುಪಡಿಸಿ ಉಳಿದ್ಯಾವ ಆಟಗಾರರು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಬರೋಡ ತಂಡದ ಐವರು ಬ್ಯಾಟ್ಸ್‌ಮನ್‌ಗಳು ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು.

ಮಿಥುನ್-ಗೌತಮ್-ಕೃಷ್ಣನ ಆರ್ಭಟ: ಗಾಯಾದ ಬಳಿಕ ತಂಡ ಕೂಡಿಕೊಂಡ ವೇಗಿ ಪ್ರಸಿದ್ಧ್ ಕೃಷ್ಣ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಆರಂಭದಲ್ಲೇ ಮೊದಲ ಎರಡು ವಿಕೆಟ್‌ ಕಬಳಿಸುವಲ್ಲಿ ಕೃಷ್ಣ ಯಶಸ್ವಿಯಾದರು. ಇನ್ನು ಪಂದ್ಯದ 20ನೇ ಓವರ್‌ನಲ್ಲಿ ಪೀಣ್ಯ ಎಕ್ಸ್‌ಪ್ರೆಸ್ ಖ್ಯಾತಿಯ ಅಭಿಮನ್ಯು ಮಿಥುನ್ ಒಂದೇ ಓವರ್‌ನಲ್ಲಿ 3 ವಿಕೆಟ್ ಕಬಳಿಸುವ ಮೂಲಕ ಬರೋಡ ತಂಡಕ್ಕೆ ಶಾಕ್ ನೀಡಿದರು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಹೂಡಾ(20) ಹಾಗೂ ನಾಯಕ ಕೃನಾಲ್ ಪಾಂಡ್ಯರನ್ನು ಸತತ 2 ಎಸೆತಗಳಲ್ಲಿ ಪೆವಿಲಿಯನ್ನಿಗಟ್ಟಿದರು. ಹ್ಯಾಟ್ರಿಕ್ ಅವಕಾಶ ತಪ್ಪಿಸಿಕೊಂಡರಾದರೂ ಮರು ಎಸೆತದಲ್ಲಿ ಅಭಿಮನ್ಯು ರಜಪೂತ್ ಅವರನ್ನು ಪೆವಿಲಿಯನ್ನಿಗಟ್ಟಿ ಓವರ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಇನ್ನು ಕೊನೆಯಲ್ಲಿ ಕೃಷ್ಣಪ್ಪ ಗೌತಮ್, ಪಾರ್ಥ್ ಕೊಹ್ಲಿ, ಆರಂಭಿಕ ಬ್ಯಾಟ್ಸ್‌ಮನ್ ಅಮನ್ದೂರ್ ಪಠಾನ್ ಸೇರಿ 3 ವಿಕೆಟ್ ಪಡೆದರೆ, ಶ್ರೇಯಸ್ ಗೋಪಾಲ್ ಕೊನೆಯ ವಿಕೆಟ್ ಕಬಳಿಸುವ ಮೂಲಕ ಬರೋಡ ಇನಿಂಗ್ಸ್‌ಗೆ ಅಂತ್ಯ ಹಾಡಿದರು.