ಬೆಂಗಳೂರು(ಫೆ.12)2019-20ರ ರಣಜಿ ಟ್ರೋಫಿಯಲ್ಲಿ ನಾಕೌಟ್‌ ಹಂತಕ್ಕೆ ಪ್ರವೇಶಿಸುವ ಗುರಿಯೊಂದಿಗೆ ಕಣಕ್ಕಿಳಿದಿರುವ ಕರ್ನಾಟಕ ತಂಡ ಬರೋಡ ಎದುರು ಭರ್ಜರಿಯಾಗಿಯೇ ಶುಭಾರಂಭ ಮಾಡಿದೆ. ಆರಂಭದಲ್ಲೇ 2 ವಿಕೆಟ್ ಕಬಳಿಸುವಲ್ಲಿ ಕರ್ನಾಟಕ ಯಶಸ್ವಿಯಾಗಿದ್ದಾರೆ.

ಮಧ್ಯ ಪ್ರದೇಶ ವಿರುದ್ಧ ಹಿನ್ನಡೆ; ಕರ್ನಾಟಕ ರಣಜಿ ಕ್ವಾರ್ಟರ್ ಫೈನಲ್ ಹಾದಿ ಕಠಿಣ!

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿರುವ ಕರ್ನಾಟಕ ಆಕ್ರಮಣಕಾರಿ ಆಟಕ್ಕೆ ಮುಂದಾಗಿದೆ. ತಂಡ ಕೂಡಿಕೊಂಡಿರುವ ಪ್ರಸಿದ್ಧ್ ಕೃಷ್ಣ ಆರಂಭದಲ್ಲೇ 2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸಿದ್ಧ್ ಬೌಲಿಂಗ್‌ನಲ್ಲಿ ಕೇದಾರ್ ದೇವ್‌ಧರ್ ಹಾಗೂ ವಿಷ್ಣು ಸೋಲಂಕಿ ಸ್ಲಿಪ್‌ನಲ್ಲಿದ್ದ ಆರ್‌. ಸಮರ್ಥ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದ್ದಾರೆ. 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾದ ಪಂದ್ಯ ಗುಂಪು ಹಂತದ ಕೊನೆ ಪಂದ್ಯವಾಗಿದ್ದು, ಕರ್ನಾಟಕ ತಂಡ ಗೆಲ್ಲಬೇಕು ಇಲ್ಲವೇ ಇನಿಂಗ್ಸ್ ಮುನ್ನಡೆ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿದೆ. ಕರ್ನಾಟಕ ಗೆದ್ದರೆ ಕ್ವಾರ್ಟರ್‌ ಫೈನಲ್‌ ಹಾದಿ ಸಲೀಸಾಗಲಿದೆ. ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆದು ಡ್ರಾ ಮಾಡಿಕೊಂಡರೂ ಕ್ವಾರ್ಟರ್‌ಗೇರುವ ಅವಕಾಶ ಹೆಚ್ಚಿರಲಿದೆ. ಒಂದೊಮ್ಮೆ ಸೋತರೂ ಕರ್ನಾಟಕಕ್ಕೆ ಮುಂದಿನ ಹಂತಕ್ಕೆ ಪ್ರವೇಶಿಸಲು ಅವಕಾಶವಿರಲಿದೆ.

25 ಅಂಕಗಳೊಂದಿಗೆ ಎಲೈಟ್‌ ‘ಎ’ ಹಾಗೂ ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದೆ. ಬರೋಡಾ ಕ್ವಾರ್ಟರ್‌ ರೇಸ್‌ನಿಂದ ಈಗಾಗಲೇ ಹೊರಬಿದ್ದಿದೆ.

ಉಚಿತ ಪ್ರವೇಶ: ಪಂದ್ಯ ಬೆಳಗ್ಗೆ 9.30ಕ್ಕೆ ಆರಂಭವಾಗಿದ್ದು, ಹಾಟ್‌ ಸ್ಟಾರ್‌ನಲ್ಲಿ ನೇರ ಪ್ರಸಾರಗೊಳ್ಳಲಿದೆ. ಕ್ರೀಡಾಂಗಣಕ್ಕೆ ಆಗಮಿಸುವ ಅಭಿಮಾನಿಗಳಿಗೆ ಕೆಎಸ್‌ಸಿಎ ಉಚಿತ ಪ್ರವೇಶ ಕಲ್ಪಿಸಿದೆ.

ಕರ್ನಾಟಕ ಕ್ವಾರ್ಟರ್‌ ಪ್ರವೇಶ ಹೇಗೆ?

ಕರ್ನಾಟಕ ತಂಡ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಬೇಕಿದ್ದರೆ, ಈ ಪಂದ್ಯವನ್ನು ಗೆಲ್ಲಬೇಕು ಇಲ್ಲವೇ ಮೊದಲ ಇನ್ನಿಂಗ್ಸ್‌ ಮುನ್ನಡೆಯೊಂದಿಗೆ ಡ್ರಾ ಮಾಡಿಕೊಳ್ಳಬೇಕು. ಒಂದೊಮ್ಮೆ ಬರೋಡಾ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದರೆ, ಪಂಜಾಬ್‌ ವಿರುದ್ಧ ಬಂಗಾಳ ಗೆಲ್ಲುವಂತೆ, ಹಿಮಾಚಲ ವಿರುದ್ಧ ಉತ್ತರ ಪ್ರದೇಶ ಗೆಲ್ಲದಂತೆ, ಸೌರಾಷ್ಟ್ರ ವಿರುದ್ಧ ತಮಿಳುನಾಡು ಬೋನಸ್‌ ಅಂಕ ಗಳಿಸದಂತೆ ಕರ್ನಾಟಕ ಪ್ರಾರ್ಥಿಸಬೇಕು.

ಕರ್ನಾಟಕ ಒಂದೊಮ್ಮೆ ಸೋಲುಂಡರೂ ಕ್ವಾರ್ಟರ್‌ಗೇರುವ ಅವಕಾಶವಿರಲಿದೆ. ಆಗ, ಪಂಜಾಬ್‌ ವಿರುದ್ಧ ಬಂಗಾಳ ಗೆಲ್ಲಬೇಕು. ಉತ್ತರ ಪ್ರದೇಶ ಹಾಗೂ ತಮಿಳುನಾಡು ಡ್ರಾಗೆ ತೃಪ್ತಿಪಡಬೇಕು ಇಲ್ಲವೇ ಸೋಲಬೇಕು. ವಿದರ್ಭ ಹಾಗೂ ದೆಹಲಿ ತಂಡಗಳು ಬೋನಸ್‌ ಅಂಕ ಗಳಿಸಬಾರದು.