* ರಣಜಿ ಟ್ರೋಫಿ ಟೂರ್ನಿಯಲ್ಲಿ ಪುದುಚೆರಿ ವಿರುದ್ದ ಇನಿಂಗ್ಸ್‌ ಗೆಲುವಿನ ನಿರೀಕ್ಷೆಯಲ್ಲಿ ಕರ್ನಾಟಕ* ಪುದುಚೆರಿ ಮೇಲೆ ಫಾಲೋ ಆನ್ ಹೇರಿದ ಕರ್ನಾಟಕ ಕ್ರಿಕೆಟ್ ತಂಡ* ಬೌಲಿಂಗ್‌ನಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದ ಕೃಷ್ಣಪ್ಪ ಗೌತಮ್

ಚೆನ್ನೈ(ಫೆ.05): ಅನುಭವಿ ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ () ಮಾರಕ ದಾಳಿಗೆ ತತ್ತರಿಸಿದ ಪುದುಚೆರಿ ತಂಡವು ಮೊದಲ ಇನಿಂಗ್ಸ್‌ನಲ್ಲಿ ಕೇವಲ 241 ರನ್‌ಗಳಿಗೆ ಆಲೌಟ್ ಆಗಿದೆ. ಪರಿಣಾಮ ಮನೀಶ ಪಾಂಡೆ ನೇತೃತ್ವದ ಕರ್ನಾಟಕ ತಂಡವು ಪುದುಚೆರಿ ಮೇಲೆ ಫಾಲೋ ಆನ್ ಹೇರಿದೆ. ಇದೀಗ ಮೂರನೇ ದಿನದಾಟದಂತ್ಯದ ವೇಳೆಗೆ ಪುದುಚೆರಿ ತಂಡವು 4 ವಿಕೆಟ್ ಕಳೆದುಕೊಂಡು 62 ರನ್ ಬಾರಿಸಿದ್ದು, ಇನ್ನೂ 150 ರನ್‌ಗಳ ಹಿನ್ನೆಡೆಯಲ್ಲಿದೆ.

ಎರಡು ವಿಕೆಟ್ ಕಳೆದುಕೊಂಡು 33 ರನ್‌ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಪುದುಚೆರಿ ತಂಡಕ್ಕೆ ಆರಂಭದಲ್ಲೇ ವೇಗಿ ವಿದ್ಯಾಧರ್ ಪಾಟೀಲ್ ಶಾಕ್ ನೀಡಿದರು. 25 ರನ್‌ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ ಆರಂಭಿಕ ಬ್ಯಾಟರ್‌ ಶ್ಯಾಮ್‌ ಕಂಗಾಯನ್ ಅವರನ್ನು ಪೆವಿಲಿಯನ್ನಿಗಟ್ಟುವ ಮೂಲಕ ರಾಜ್ಯಕ್ಕೆ ಆರಂಭಿಕ ಯಶಸ್ಸು ದಕ್ಕಿಸಿಕೊಟ್ಟರು. ಇದಾದ ಬಳಿಕ ಪುದುಚೆರಿಯ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬು ಮುರಿಯುವಲ್ಲಿ ಕೃಷ್ಣಪ್ಪ ಗೌತಮ್ ಯಶಸ್ವಿಯಾದರು. 

5 ವಿಕೆಟ್ ಕಬಳಿಸಿದ ಕೃಷ್ಣಪ್ಪ ಗೌತಮ್‌: ಪ್ರಸಕ್ತ ಆವೃತ್ತಿಯ ರಣಜಿ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಕೃಷ್ಣಪ್ಪ ಗೌತಮ್‌, ಮತ್ತೊಮ್ಮೆ ಪುದುಚೆರಿ ಬ್ಯಾಟರ್‌ಗಳ ಮೇಲೆ ತಮ್ಮ ಪ್ರಾಬಲ್ಯವನ್ನು ಮೆರೆದರು. ಪವನ್‌ ದೇಶ್‌ಪಾಂಡೆ, ಚಿರಂಜೀವಿ ಸೇರಿದಂತೆ ಪುದುಚೆರಿ ತಂಡದ ಪ್ರಮುಖ 5 ವಿಕೆಟ್ ಕಬಳಿಸುವ ಮೂಲಕ ಎದುರಾಳಿ ತಂಡ ಫಾಲೋ ಆನ್ ಬಲೆಗೆ ಸಿಲುಕುವಂತೆ ಮಾಡಿದರು.

ನಾಯಕ ದಾಮೋದರನ್ ರೋಹಿತ್ ಏಕಾಂಗಿ ಹೋರಾಟ: ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಸಹಾ, ಮಧ್ಯಮ ಕ್ರಮಾಂಕದಲ್ಲಿ ನಾಯಕ ದಾಮೋದರನ್ ರೋಹಿತ್ ಏಕಾಂಗಿ ಹೋರಾಟ ನಡೆಸುವ ಮೂಲಕ ತಂಡವನ್ನು ಫಾಲೋ ಆನ್‌ನಿಂದ ಬಚಾವ್ ಮಾಡಲು ಪ್ರಯತ್ನಿಸಿದರು. ಇವರಿಗೆ ಕರ್ನಾಟಕ ಮೂಲದ ಪವನ್ ದೇಶ್‌ಪಾಂಡೆ ಕೊಂಚ ಸಾಥ್ ನೀಡಿದರು. ಕರ್ನಾಟಕ ತಂಡ ತೊರೆದು ಪುದುಚೆರಿ ತಂಡವನ್ನು ಪ್ರತಿನಿಧಿಸುತ್ತಿರುವ ಪವನ್ ದೇಶ್‌ಪಾಂಡೆ 83 ಎಸೆತಗಳನ್ನು ಎದುರಿಸಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 29 ರನ್ ಬಾರಿಸಿದರು. ಇನ್ನು ಮತ್ತೊಂದು ಕಡೆ ದಾಮೋದರನ್‌ ರೋಹಿತ್ 133 ಎಸೆತಗಳನ್ನು ಎದುರಿಸಿ 15 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 100 ರನ್ ಬಾರಿಸಿದರಾದರೂ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗಲಿಲ್ಲ.

Ranji Trophy: ಮನೀಶ್ ಪಾಂಡೆ ಶತಕ, ಕರ್ನಾಟಕದ ಹಿಡಿತದಲ್ಲಿ ಪುದುಚೆರಿ

ಒಟ್ಟಾರೆ ಮೊದಲ ಇನಿಂಗ್ಸ್‌ನಲ್ಲಿ 212 ರನ್‌ಗಳ ಮುನ್ನಡೆ ಪಡೆದ ಕರ್ನಾಟಕ ತಂಡವು, ಪುದುಚೆರಿ ತಂಡದ ಮೇಲೆ ಫಾಲೋ ಆನ್ ಹೇರಿತು. ಎರಡನೇ ಇನಿಂಗ್ಸ್ ಆರಂಭಿಸಿದ ಪುದುಚೆರಿ ತಂಡಕ್ಕೆ ಮತ್ತೆ ವೇಗಿಗಳಾದ ಪ್ರಸಿದ್ದ್ ಕೃಷ್ಣ ಹಾಗೂ ವಿದ್ಯಾಧರ್ ಪಾಟೀಲ್ ಶಾಕ್ ನೀಡಿದರು. ಪ್ರಸಿದ್ದ್ ಕೃಷ್ಣ 2 ವಿಕೆಟ್ ಪಡೆದರೆ, ವಿದ್ಯಾಧರ್ ಪಾಟೀಲ್ ಹಾಗೂ ಸ್ಪಿನ್ನರ್ ಶ್ರೇಯಸ್ ಗೋಪಾಲ್ ತಲಾ ಒಂದೊಂದು ವಿಕೆಟ್ ಪಡೆದರು. ಸದ್ಯ ಮೂರನೇ ದಿನದಾಟದಂತ್ಯದ ವೇಳೆಗೆ ಕನ್ನಡಿಗ ಪವನ್ ದೇಶಪಾಂಡೆ 3 ಹಾಗೂ ನಾಯಕ ದಾಮೋದರನ್ ರೋಹಿತ್ 10 ರನ್‌ ಬಾರಿಸಿ ಕೊನೆಯ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇನಿಂಗ್ಸ್‌ ಸೋಲಿನಿಂದ ಪಾರಾಗಬೇಕಿದ್ದರೆ ಪುದುಚೆರಿ ತಂಡವು ಇನ್ನೂ 150 ರನ್‌ಗಳನ್ನು ಬಾರಿಸಬೇಕಿದೆ.

ಸಂಕ್ಷಿಪ್ತ ಸ್ಕೋರ್

ಕರ್ನಾಟಕ: 453/8 ಡಿಕ್ಲೇರ್(ಮೊದಲ ಇನಿಂಗ್ಸ್)
ದೇವದತ್ ಪಡಿಕ್ಕಲ್‌: 178
ಆಶಿತ್ ರಾಜೀವ್: 80/4

ಪುದುಚೆರಿ: 241/10 (ಮೊದಲ ಇನಿಂಗ್ಸ್)
ದಾಮೋದರನ್‌ ರೋಹಿತ್: 100*
ಕೃಷ್ಣಪ್ಪ ಗೌತಮ್: 86/5

ಪುದುಚೆರಿ: 62/4(ಎರಡನೇ ಇನಿಂಗ್ಸ್)
ನೆಯಾನ್‌ ಶ್ಯಾಮ್‌ ಕಂಗಾಯನ್: 16
ಪ್ರಸಿದ್ದ್ ಕೃಷ್ಣ: 31/2

(* ಮೂರನೇ ದಿನದಾಟದಂತ್ಯದ ವೇಳೆಗೆ)