* ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡಕ್ಕೆ ಮೊದಲ ಇನಿಂಗ್ಸ್ ಮುನ್ನಡೆ* ಮೊದಲ ಇನಿಂಗ್ಸ್‌ನಲ್ಲಿ ಮನೀಶ್ ಪಾಂಡೆ ಪಡೆಗೆ 55 ರನ್‌ಗಳ ಮುನ್ನಡೆ* ಆಲ್ರೌಂಡ್ ಪ್ರದರ್ಶನದ ಮೂಲಕ ಮಿಂಚಿದ ಕೃಷ್ಣಪ್ಪ ಗೌತಮ್
ಚೆನ್ನೈ(ಫೆ.19): ಕರ್ನಾಟಕ ಹಾಗೂ ರೈಲ್ವೇಸ್ ತಂಡಗಳ ನಡುವಿನ ರಣಜಿ ಟ್ರೋಫಿ (Ranji Trophy) ಟೂರ್ನಿಯ ಎಲೈಟ್ ‘ಸಿ’ ಗುಂಪಿನ ಪಂದ್ಯದಲ್ಲಿ ಮನೀಶ್ ಪಾಂಡೆ (Manish Pandey) ನೇತೃತ್ವದ ಕರ್ನಾಟಕ ಕ್ರಿಕೆಟ್ ತಂಡವು (Karnataka Cricket Team) ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ರೈಲ್ವೇಸ್ ತಂಡವನ್ನು (Railways) 426 ರನ್‌ಗಳಿಗೆ ಆಲೌಟ್ ಮಾಡಿದ ಕರ್ನಾಟಕ ತಂಡವು ಮೂರನೇ ದಿನದಾಟದಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 63 ರನ್ ಬಾರಿಸಿದ್ದು, ಒಟ್ಟಾರೆ 118 ರನ್‌ಗಳ ಮುನ್ನಡೆ ಸಾಧಿಸಿದೆ. ಬ್ಯಾಟಿಂಗ್‌ನಲ್ಲಿ ಸ್ಪೋಟಕ ಅರ್ಧಶತಕ ಬಾರಿಸಿದ್ದ ಕೆ. ಗೌತಮ್, ಬೌಲಿಂಗ್‌ನಲ್ಲಿ 4 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
213 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಮೂರನೇ ದಿನದಾಟವನ್ನು ಆರಂಭಿಸಿದ ರೈಲ್ವೇಸ್ ತಂಡಕ್ಕೆ ಆರಂಭದಲ್ಲಿ ಅರಿಂಧಾಮ್ ಘೋಷ್ ಹಾಗೂ ಮೊಹಮ್ಮದ್ ಸೈಫ್ ಉತ್ತಮ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಅರಿಂಧಾಮ್ ಘೋಷ್ 197 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 105 ರನ್ ಬಾರಿಸಿ ಶ್ರೇಯಸ್ ಗೋಪಾಲ್‌ಗೆ (Shreyas Gopal) ವಿಕೆಟ್ ಒಪ್ಪಿಸಿದರು. ಇನ್ನು ಮೊಹಮ್ಮದ್ ಸೈಫ್ 148 ಎಸೆತಗಳನ್ನು ಎದುರಿಸಿ 84 ರನ್ ಗಳಿಸಿ ಕೃಷ್ಣಪ್ಪ ಗೌತಮ್‌ಗೆ ನಾಲ್ಕನೇ ಬಲಿಯಾದರು.
ಇನ್ನುಳಿದಂತೆ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಉಪೇಂದ್ರ ಯಾದವ್(12) ಹಾಗೂ ಕರ್ಣ್ ಶರ್ಮಾ(6) ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲು ವೇಗಿ ವಿದ್ಯಾಧರ್ ಪಾಟೀಲ್ ಅವಕಾಶ ನೀಡಲಿಲ್ಲ. ಇನ್ನುಳಿದಂತೆ ಆಲ್ರೌಂಡರ್ ಯುವರಾಜ್ ಸಿಂಗ್ 48 ರನ್ ಬಾರಿಸುವ ಮೂಲಕ ಕರ್ನಾಟಕದ ಬೌಲರ್‌ಗಳ ಸವಾಲಿಗೆ ಕೊಂಚ ಪ್ರತಿರೋಧ ತೋರಿದರು. ಇವರಿಗೆ ಅವಿನಾಶ್ ಯಾದವ್(22) ಕೆಲಕಾಲ ಉತ್ತಮ ಸಾಥ್ ನೀಡಿದರು. ಆದರೆ ಕರ್ನಾಟಕದ ವೇಗಿ ರೋನಿತ್ ಮೋರೆ, ರೈಲ್ವೇಸ್‌ನ ಯುವರಾಜ್ ಸಿಂಗ್, ಅವಿನಾಶ್ ಯಾದವ್ ಹಾಗೂ ಹಿಮಾಂಶು ಸಂಗ್ವಾನ್ ಅವರ ಬಲಿ ಪಡೆಯುವ ಮೂಲಕ ಎದುರಾಳಿ ತಂಡವನ್ನು 426 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಈ ಮೊದಲ ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ 55 ರನ್‌ಗಳ ಅಮೂಲ್ಯ ಮುನ್ನಡೆ ಪಡೆಯಿತು.
Ranji Trophy ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲೇ ತ್ರಿಶತಕ: ಬಿಹಾರದ ಗನಿ ವಿಶ್ವದಾಖಲೆ
ಕರ್ನಾಟಕ ತಂಡಕ್ಕೆ ಆರಂಭಿಕ ಆಘಾತ: ಇನ್ನು 55 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡವು ಆರಂಭದಲ್ಲೇ ತಾರಾ ಆಟಗಾರ ದೇವದತ್ ಪಡಿಕ್ಕಲ್ (Devdutt Padikkal) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮೊದಲ ಇನಿಂಗ್ಸ್‌ನಲ್ಲಿ 21 ರನ್ ಬಾರಿಸಿದ್ದ ಪಡಿಕ್ಕಲ್, ಇದೀಗ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 4 ರನ್ ಬಾರಿಸಿ ವೇಗಿ ಅಮಿತ್ ಮಿಶ್ರಾ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಕೇವಲ 11 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿದ್ದ ಕರ್ನಾಟಕ ತಂಡಕ್ಕೆ ಅನುಭವಿ ಬ್ಯಾಟರ್‌ಗಳಾದ ಮಯಾಂಕ್ ಅಗರ್‌ವಾಲ್ (Mayank Agarwal) ಹಾಗೂ ರವಿಕುಮಾರ್ ಸಮರ್ಥ್ (Ravikumar Samarth) ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಎರಡನೇ ವಿಕೆಟ್‌ಗೆ ಈ ಜೋಡಿ ಮುರಿಯದ 52 ರನ್‌ಗಳ ಜತೆಯಾಟ ನಿಭಾಯಿಸಿದೆ. ಆರಂಭಿಕ ಬ್ಯಾಟರ್ ಮಯಾಂಕ್ ಅಗರ್‌ವಾಲ್ ಅಜೇಯ 39 ರನ್ ಬಾರಿಸಿದರೆ, ರವಿಕುಮಾರ್ ಸಮರ್ಥ್ 20 ರನ್ ಬಾರಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 481/10(ಮೊದಲ ಇನಿಂಗ್ಸ್)
ಮನೀಶ್ ಪಾಂಡೆ: 156
ಸಿದ್ದಾರ್ಥ್: 146
ಯುವರಾಜ್ ಸಿಂಗ್: 93/5
ರೈಲ್ವೇಸ್: 426/10(ಮೊದಲ ಇನಿಂಗ್ಸ್)
ಅರಿಂಧಾಮ್ ಘೋಷ್: 105
ಮೊಹಮ್ಮದ್ ಸೈಫ್: 84
ಕೃಷ್ಣಪ್ಪ ಗೌತಮ್: 27/4
ಕರ್ನಾಟಕ: 63/1 (ಎರಡನೇ ಇನಿಂಗ್ಸ್)
ಮಯಾಂಕ್ ಅಗರ್‌ವಾಲ್: 39
ರವಿಕುಮಾರ್ ಸಮರ್ಥ್: 20
(* ಮೂರನೇ ದಿನದಾಟ ಮುಕ್ತಾಯದ ವೇಳೆಗೆ)
