* ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ-ರೈಲ್ವೇಸ್ ಪಂದ್ಯ ಡ್ರಾನಲ್ಲಿ ಅಂತ್ಯ* ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದ್ದ ಕರ್ನಾಟಕ ಖಾತೆಗೆ 3 ಅಂಕ* 2ನೇ ಇನ್ನಿಂಗ್ಸ್‌ನಲ್ಲಿ 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 63 ರನ್ ಗಳಿಸಿದ್ದ ರಾಜ್ಯ ತಂಡ
ಚೆನ್ನೈ(ಫೆ.21): ರಣಜಿ ಟ್ರೋಫಿಯ ಎಲೈಟ್ ‘ಸಿ’ ಗುಂಪಿನ ಕರ್ನಾಟಕ ಹಾಗೂ ರೈಲ್ವೇಸ್ ನಡುವಿನ ಮೊದಲ ಪಂದ್ರ ಡ್ರಾನಲ್ಲಿ ಮುಕ್ತಾಯಗೊಂಡಿದೆ. ಗೆಲುವಿಗೆ 279 ರನ್ ಗುರಿ ಪಡೆದಿದ್ದ ರೈಲ್ವೇಸ್ 2ನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಕಳೆದುಕೊಂಡು 69 ರನ್ ಗಳಿಸಿದ್ದಾಗ ಪಂದ್ಯ ಡ್ರಾ ಎಂದು ಘೋಷಿಸಲಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 55 ರನ್ ಮುನ್ನಡೆ ಪಡೆದಿದ್ದ ರಾಜ್ಯ ತಂಡ 3 ಅಂಕ ಪಡೆಯಿತು.
ಇದಕ್ಕೂ ಮೊದಲು 2ನೇ ಇನ್ನಿಂಗ್ಸ್‌ನಲ್ಲಿ 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 63 ರನ್ ಗಳಿಸಿದ್ದ ರಾಜ್ಯ ತಂಡ, ಕೊನೆ ದಿನವಾದ ಭಾನುವಾರ 9 ವಿಕೆಟ್‌ಗೆ 223 ರನ್ ಗಳಿಸಿ 2ನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಮಯಾಂಕ್ ಅಗರ್‌ವಾಲ್(56), ಆರ್.ಸಮರ್ಥ್(83) ತಲಾ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದರು. ಮೊದಲ ಇನ್ನಿಂಗ್ಸ್‌ನಲ್ಲಿ 481 ರನ್ ಗಳಿಸಿದ್ದ ರಾಜ್ಯ ತಂಡ, ಬಳಿಕ ರೈಲ್ವೇಸ್‌ನ್ನು 426ಕ್ಕೆ ನಿಯಂತ್ರಿಸಿ ಇನ್ನಿಂಗ್ಸ್ ಮುನ್ನಡೆ ಪಡೆದಿತ್ತು.
ಸ್ಕೋರ್:
ಕರ್ನಾಟಕ 481/10 ಹಾಗೂ 223/9 ಡಿಕ್ಲೇರ್(ಸಮರ್ಥ್ 83, ಮಯಾಂಕ್ 56, ಅಮಿತ್ 4-58)
ರೈಲ್ವೇಸ್ 426/10 ಹಾಗೂ 69/4(ಸೈಫ್ 27, ವೈಶಾಕ್ 2-16)
ಫೆಬ್ರವರಿ 24ರಿಂದ 2ನೇ ಪಂದ್ಯ: ಜಮ್ಮು-ಕಾಶ್ಮೀರ ಎದುರಾಳಿ
ಕರ್ನಾಟಕ ತಂಡ ಮುಂದಿನ ಪಂದ್ಯದಲ್ಲಿ ಫೆ.24ರಿಂದ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಆಡಲಿದೆ. ಮೊದಲ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡ ಪುದುಚೇರಿ ವಿರುದ್ಧ 8 ವಿಕೆಟ್‌ಗಳ ಗೆಲುವು ಸಾಧಿಸಿ, ‘ಸಿ’ ಗುಂಪಿನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕರ್ನಾಟಕ 2ನೇ ಸ್ಥಾನ ಪಡೆದಿದೆ.
ಚೊಚ್ಚಲ ರಣಜಿ ಪಂದ್ಯದಲ್ಲಿ ಎರಡು ಶತಕ: ಧುಳ್ ದಾಖಲೆ
ಗುವಾಹಟಿ: ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಯಶ್ ಧುಳ್ ರಣಜಿ ಟ್ರೋಫಿ ಪಾದಾರ್ಪಣಾ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಎಲೈಟ್ ‘ಎಚ್’ ಗುಂಪಿನ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ 113 ರನ್ ಬಾರಿಸಿದ್ದ ಅವರು, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಔಟಾಗದೆ 113 ರನ್ ಗಳಿಸಿದರು. ಇದರೊಂದಿಗೆ ಚೊಚ್ಚಲ ರಣಜಿ ಪಂದ್ಯದಲ್ಲೇ ಈ ಸಾಧನೆ ಮಾಡಿದ 3ನೇ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು 1952-53ರಲ್ಲಿ ಗುಜರಾತ್ ಪರ ನಾರಿ ಕಾಂಟ್ರಾಕ್ಟರ್ ಹಾಗೂ 2012-13ರಲ್ಲಿ ಮಹಾರಾಷ್ಟ್ರ ಪರ ವಿರಾಗ್ ಅವಾಟೆ ಚೊಚ್ಚಲ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ್ದರು. ಧುಳ್ ಭರ್ಜರಿ ಆಟದ ಹೊರತಾಗಿಯೂ ಪಂದ್ಯ ಡ್ರಾಗೊಂಡಿದೆ.
ಸ್ಪೋಟಕ 91 ರನ್ ಚಚ್ಚಿದ ಚೇತೇಶ್ವರ್ ಪೂಜಾರ
ಅಹಮದಾಬಾದ್: ಲಂಕಾ ವಿರುದ್ದದ ಟೆಸ್ಟ್ ಸರಣಿಗೆ ತಮ್ಮನ್ನು ಕೈಬಿಟ್ಟು 24 ಗಂಟೆಗಳು ಕಳೆಯುವಷ್ಟರಲ್ಲಿ ಟೆಸ್ಟ್ ಸ್ಪೆಷಲಿಸ್ಟ ಚೇತೇಶ್ವರ್ ಪೂಜಾರ ಮುಂಬೈ ಎದುರು ಕೇವಲ 83 ಎಸೆತಗಳಲ್ಲಿ 91 ರನ್ ಬಾರಿಸಿ ಗಮನ ಸೆಳೆದಿದ್ದಾರೆ. ಎಲೈಟ್ ‘ಡಿ’ ಗುಂಪಿನ ಪಂದ್ಯದಲ್ಲಿ ಸೌರಾಷ್ಟ್ರ ಹಾಗೂ ಮುಂಬೈ ತಂಡಗಳು ಮುಖಾಮುಖಿಯಾಗಿದ್ದವು. ನಾಲ್ಕನೇ ಹಾಗೂ ಕೊನೆಯ ದಿನದಾಟದಲ್ಲಿ ಸೌರಾಷ್ಟ್ರ ತಂಡವು 9 ವಿಕೆಟ್ ಕಳೆದುಕೊಂಡು 372 ರನ್ ಕಲೆಹಾಕಿತು. ಅಂತಿಮವಾಗಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ನಾಲ್ಕನೇ ದಿನದಾಟದ ಆರಂಭಕ್ಕೂ ಮುನ್ನ ಸೌರಾಷ್ಟ್ರ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಕೇವಲ 48 ರನ್‌ಗಳ ಮುನ್ನಡೆ ಮಾತ್ರ ಗಳಿಸಿತ್ತು. ಮುಂಬೈ ತಂಡವು ಆದಷ್ಟು ಬೇಗ ಹಾಲಿ ಚಾಂಪಿಯನ್ ಸೌರಾಷ್ಟ್ರ ತಂಡವನ್ನು ಆಲೌಟ್ ಮಾಡಿ ಗೆಲುವಿನ ಖಾತೆ ತೆರೆಯಲು ಹಾತೊರೆಯುತ್ತಿತ್ತು. ಆದರೆ ಚೇತೇಶ್ವರ್ ಪೂಜಾರ ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದ 41 ಬಾರಿಯ ರಣಜಿ ಚಾಂಪಿಯನ್ 3 ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡರೆ, ಹಾಲಿ ಚಾಂಪಿಯನ್ ಸೌರಾಷ್ಟ್ರ ತಂಡವು ಒಂದು ಅಂಕ ಮಾತ್ರ ಗಳಿಸಿತು.
