Asianet Suvarna News Asianet Suvarna News

Ranji Trophy: ಪುದುಚೆರಿ ಮಣಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ

* ರಣಜಿ ಟ್ರೋಫಿ ಟೂರ್ನಿಯಲ್ಲಿ ಭರ್ಜರಿಯಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕರ್ನಾಟಕ

* ಪುದುಚೆರಿ ಎದುರು ಇನಿಂಗ್ಸ್ ಹಾಗೂ 20 ರನ್‌ಗಳ ಜಯ

* 16 ಅಂಕ ಸಂಪಾದಿಸಿದ ತಂಡ ಎಲೈಟ್‌ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಕ್ವಾರ್ಟರ್‌ಗೆ ಲಗ್ಗೆ

Ranji Trophy Karnataka Thrash Puducherry and enters Quarter Final kvn
Author
Bengaluru, First Published Mar 7, 2022, 8:29 AM IST

ಚೆನ್ನೈ(ಮಾ.07): ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಪುದುಚೇರಿ ವಿರುದ್ಧ ಇನ್ನಿಂಗ್ಸ್‌ ಹಾಗೂ 20 ರನ್‌ಗಳ ಭರ್ಜರಿ ಜಯ ಸಾಧಿಸಿದ ಕರ್ನಾಟಕ ತಂಡ (Karnataka Cricket Team) ರಣಜಿ ಟ್ರೋಫಿಯಲ್ಲಿ (Ranji Trophy) ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ಮೊದಲ ಪಂದ್ಯದಲ್ಲಿ ರೈಲ್ವೆಸ್‌ ವಿರುದ್ಧ ಡ್ರಾ ಸಾಧಿಸಿದ್ದ ಕರ್ನಾಟಕ, 2ನೇ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಜಯ ಸಾಧಿಸಿತ್ತು. ಇದರೊಂದಿಗೆ 16 ಅಂಕ ಸಂಪಾದಿಸಿದ ತಂಡ ಎಲೈಟ್‌ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟಿತು.

ಮೊದಲ ಇನ್ನಿಂಗ್ಸ್‌ನಲ್ಲಿ 312 ರನ್‌ಗಳ ಹಿನ್ನಡೆಯೊಂದಿಗೆ ಫಾಲೋ ಆನ್‌ಗೆ ತುತ್ತಾಗಿದ್ದ ಪುದುಚೇರಿ ತಂಡವು, 2ನೇ ಇನ್ನಿಂಗ್ಸ್‌ನಲ್ಲೂ ಕರ್ನಾಟಕದ ಬೌಲರ್‌ಗಳ ಮುಂದೆ ನಿರುತ್ತರವಾಯಿತು. 3ನೇ ದಿನದಂತ್ಯಕ್ಕೆ 4 ವಿಕೆಟ್‌ ಕಳೆದುಕೊಂಡು 64 ರನ್‌ ಗಳಿಸಿದ್ದ ಪುದುಚೇರಿ, ಪಂದ್ಯದ ಕೊನೆಯ ದಿನವಾದ ಭಾನುವಾರ ಶ್ರೇಯಸ್‌ ಗೋಪಾಲ್‌ ಸ್ಪಿನ್‌ ಮೋಡಿಗೆ ಕುಸಿದು 192 ರನ್‌ಗಳಿಗೆ ಸರ್ವಪತನಗೊಂಡಿತು. ಪವನ್‌ ದೇಶಪಾಂಡೆ(54) ಅರ್ಧಶತಕ ಗಳಿಸಿ ಅಜೇಯವಾಗಿ ಉಳಿದರೂ ಪುದುಚೇರಿಯನ್ನು ಸೋಲಿನ ದವಡೆಯಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. 5 ವಿಕೆಟ್‌ ಗೊಂಚಲು ಪಡೆದ ಶ್ರೇಯಸ್‌ ಕರ್ನಾಟಕದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಕೆ.ಗೌತಮ್‌ 5 ವಿಕೆಟ್‌ ಗೊಂಚಲು ಪಡೆದಿದ್ದರು.

ಕರ್ನಾಟಕ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ದೇವದತ್‌ ಪಡಿಕ್ಕಲ್‌(178) ಹಾಗೂ ಮನಿಷ್‌ ಪಾಂಡೆ(107) ಅವರ ಭರ್ಜರಿ ಶತಕದ ನೆರವಿನೊಂದಿಗೆ 8 ವಿಕೆಟ್‌ಗೆ 453 ರನ್‌ ಗಳಿಸಿದ್ದ ಕರ್ನಾಟಕ, ಮೊದಲ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತ್ತು.

ಸಂಕ್ಷಿಪ್ತ ಸ್ಕೋರ್‌: 
ಕರ್ನಾಟಕ 453/8 ಡಿ. 
ಪುದುಚೇರಿ 241/10 ಮತ್ತು 192/10
(ಪವನ್‌ ದೇಶಪಾಂಡೆ 54, ಶ್ರೇಯಸ್‌ 5-82)

6 ವಿಶ್ವಕಪ್‌ ಆಡಿದ ಮೊದಲ ಮಹಿಳಾ ಕ್ರಿಕೆಟರ್‌ ಮಿಥಾಲಿ ರಾಜ್

ಮೌಂಟ್‌ ಮಾಂಗನುಯಿ: ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್‌ (Mithali Raj) 6 ಬಾರಿ ವಿಶ್ವಕಪ್‌ನಲ್ಲಿ ಆಡಿದ ಪ್ರಪ್ರಥಮ ಮಹಿಳಾ ಕ್ರಿಕೆಟರ್‌ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಭಾನುವಾರ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಅವರು ಈ ಮೈಲಿಗಲ್ಲು ಸಾಧಿಸಿದರು. 39 ವರ್ಷದ ಮಿಥಾಲಿ 2000, 2005, 2009, 2013, 2017 ಹಾಗೂ 2022ರ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 

ICC Women's World Cup: ಪಾಕ್ ಬಗ್ಗುಬಡಿದು ಶುಭಾರಂಭ ಮಾಡಿದ ಭಾರತ

ಒಟ್ಟಾರೆ ಮಿಥಾಲಿ ರಾಜ್ ಕ್ರಿಕೆಟ್‌ ಇತಿಹಾಸದಲ್ಲಿ 6 ವಿಶ್ವಕಪ್‌ ಆಡಿದ 3ನೇ ಕ್ರಿಕೆಟರ್‌ ಎನಿಸಿಕೊಂಡರು. ದಿಗ್ಗಜ ಆಟಗಾರರಾದ ಸಚಿನ್‌ ತೆಂಡುಲ್ಕರ್‌ (Sachin Tendulkar) ಮತ್ತು ಪಾಕಿಸ್ತಾನದ ಜಾವೆದ್‌ ಮಿಯಾಂದಾದ್‌ ಮಾತ್ರ ಈ ಸಾಧನೆ ಮಾಡಿದ್ದಾರೆ. ಇನ್ನು, ಭಾರತದ ಹಿರಿಯ ಬೌಲರ್‌ ಜೂಲನ್‌ ಗೋಸ್ವಾಮಿ, ನ್ಯೂಜಿಲೆಂಡ್‌ನ ಡೆಬ್ಬೀ ಹೋಕ್ಲಿ, ಇಂಗ್ಲೆಂಡ್‌ನ ಚಾರ್ಲೋಟ್‌ ಎಡ್ವರ್ಡ್‌ 5 ಬಾರಿ ವಿಶ್ವಕಪ್‌ ಆಡಿದ್ದಾರೆ.

ಭಾರತದ ಮುಂದೆ ಮಂಡಿಯೂರಿದ ಪಾಕ್‌

ಮೌಂಟ್‌ ಮಾಂಗನುಯಿ: ಕಳೆದ ಬಾರಿ ರನ್ನರ್‌-ಅಪ್‌ ಭಾರತ 12ನೇ ಆವೃತ್ತಿಯ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ (ICC Women's World Cup) ಭರ್ಜರಿ ಆರಂಭ ಪಡೆದಿದೆ. ಭಾನುವಾರ ಸಾಂಪ್ರದಾಯಿಕ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಮಿಥಾಲಿ ರಾಜ್‌ ಪಡೆ 107 ರನ್‌ಗಳ ಜಯ ದಾಖಲಿಸಿತು.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿ ಭಾರತ 7 ವಿಕೆಟ್‌ಗೆ 244 ರನ್‌ ಕಲೆ ಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕ್‌ 43 ಓವರ್‌ಗಳಲ್ಲಿ ಕೇವಲ 137 ರನ್‌ಗೆ ಆಲೌಟಾಯಿತು. ಸಿದ್ರಾ ಅಮೀನ್‌(30), ದಿಯಾನ ಬೇಗ್‌(24) ಮಾತ್ರ ಕೆಲಹೊತ್ತು ಕ್ರೀಸ್‌ನಲ್ಲಿದ್ದರು. ಪಾಕ್‌ ಆಟಗಾರ್ತಿಯರನ್ನು ಇನ್ನಿಲ್ಲದಂತೆ ಕಾಡಿದ ಕರ್ನಾಟಕದ ಸ್ಪಿನ್ನರ್‌ ರಾಜೇಶ್ವರಿ ಗಾಯಕ್ವಾಡ್‌ 31 ರನ್‌ಗೆ 4 ವಿಕೆಟ್‌ ಕಿತ್ತರು. ಜೂಲನ್‌ ಗೋಸ್ವಾಮಿ, ಸ್ನೇಹ ರಾಣಾ ತಲಾ 2 ವಿಕೆಟ್‌ ಪಡೆದರು.

Follow Us:
Download App:
  • android
  • ios