* ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಶುಭಾರಂಭ* ಪಾಕಿಸ್ತಾನ ಎದುರು 107 ರನ್‌ಗಳ ಅಂತರದ ಜಯ ಸಾಧಿಸಿದ ಮಿಥಾಲಿ ರಾಜ್* 4 ವಿಕೆಟ್ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್‌

ಮೌಂಟ್‌ ಮಾಂಗನುಯಿ(ಮಾ.06): ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಮಿಥಾಲಿ ರಾಜ್ ನೇತೃತ್ವದ ಭಾರತ ತಂಡವು ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು 107 ರನ್‌ಗಳ ಅಂತರದ ಭರ್ಜರಿ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಪ್ರಮುಖ 4 ವಿಕೆಟ್‌ ಕಬಳಿಸುವ ಮೂಲಕ ಭಾರತ ತಂಡದ ಸುಲಭ ಗೆಲುವು ದಾಖಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಈ ಗೆಲುವಿನೊಂದಿಗೆ ಪಾಕಿಸ್ತಾನ ಎದುರು ಭಾರತ ತಂಡದ ಅಜೇಯ ಗೆಲುವಿನ ನಾಗಾಲೋಟ ಮುಂದುವರೆದಿದ್ದು, ಏಕದಿನ ಕ್ರಿಕೆಟ್‌ನಲ್ಲಿ 11ನೇ ಗೆಲುವು ದಾಖಲಿಸಿದರು. 

ಇಲ್ಲಿನ ಬೇ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ನೀಡಿದ್ದ 245 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಮಂದಗತಿಯ ಆರಂಭವನ್ನು ಪಡೆಯಿತು. ಮೊದಲ 11ನೇ ಓವರ್‌ನ ಕೊನೆಯ ಎಸೆತದಲ್ಲಿ ರಾಜೇಶ್ವರಿ ಗಾಯಕ್ವಾಡ್‌ ಮೊದಲ ಯಶಸ್ಸು ದಕ್ಕಿಸಿಕೊಟ್ಟರು. ಇನ್ನು ಪಾಕ್ ನಾಯಕಿ ಬಿಷ್ಮಾ ಮಹರೂಪ್ 15 ರನ್ ಬಾರಿಸಿ ದೀಪ್ತಿ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಸಿದ್ರಾ ಅಮೀನ್ 30 ರನ್ ಬಾರಿಸುವ ಮೂಲಕ ಕೆಲಕಾಲ ಭಾರತೀಯ ಬೌಲರ್‌ಗಳೆದುರು ಪ್ರತಿರೋಧ ತೋರಿದರು. ಸಿದ್ರಾ ಅಮೀನ್(30), ಡಯಾನಾ ಬೇಗ್(23) ಹೊರತುಪಡಿಸಿ ಪಾಕಿಸ್ತಾನ ಯಾವ ಬ್ಯಾಟರ್‌ ಕೂಡಾ ಕನಿಷ್ಠ 20 ರನ್ ಬಾರಿಸಲು ಯಶಸ್ವಿಯಾಗಲಿಲ್ಲ. 

ಭಾರತ ತಂಡದ ಪರ ರಾಜೇಶ್ವರಿ ಗಾಯಕ್ವಾಡ್‌ 31 ರನ್ ನೀಡಿ 4 ವಿಕೆಟ್ ಪಡೆದರೆ, ಜೂಲನ್ ಗೋಸ್ವಾಮಿ 2, ಸ್ನೆಹ್ ರಾಣಾ 2, ದೀಪ್ತಿ ಶರ್ಮಾ ಹಾಗೂ ಮೆಘನಾ ಸಿಂಗ್ 1 ವಿಕೆಟ್ ಕಬಳಿಸುವ ಮೂಲಕ ಭಾರತ ತಂಡವು ಭಾರೀ ಅಂತರದ ಗೆಲುವು ದಾಖಲಿಸುವಲ್ಲಿ ಮಹತ್ತರ ಪಾತ್ರ ನಿಭಾಯಿಸಿದರು. 

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮಿಥಾಲಿ ರಾಜ್ ನೇತೃತ್ವದ ಭಾರತ ತಂಡವು ಆರಂಭದಲ್ಲೇ ಶಫಾಲಿ ವರ್ಮಾ ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್‌ಗೆ ದೀಪ್ತಿ ಶರ್ಮಾ ಹಾಗೂ ಸ್ಮೃತಿ ಮಂಧನಾ ಜೋಡಿ 116 ಎಸೆತಗಳನ್ನು ಎದುರಿಸಿ 92 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ದೀಪ್ತಿ ಶರ್ಮಾ 57 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 40 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರೆ ಮತ್ತೊಂದು ತುದಿಯಲ್ಲಿ ಸ್ಮೃತಿ ಮಂಧನಾ 75 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 52 ರನ್ ಬಾರಿಸಿ ಅನಮ್ ಅಮಿನ್ ಬೌಲಿಂಗ್‌ನಲ್ಲಿ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ದಿಢೀರ್ ಕುಸಿತ ಕಂಡ ಮಧ್ಯಮ ಕ್ರಮಾಂಕ: ಒಂದು ಹಂತದಲ್ಲಿ 96 ರನ್‌ಗಳವರೆಗೆ ಕೇವಲ ಒಂದು ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡವು ದೀಪ್ತಿ ಶರ್ಮಾ ವಿಕೆಟ್ ಪತನವಾಗುತ್ತಿದ್ದಂತೆಯೇ ದಿಢೀರ್ ಕುಸಿತ ಕಂಡಿತು. ಕೇವಲ 20 ರನ್‌ಗಳ ಅಂತರದಲ್ಲಿ ಭಾರತ ತಂಡವು ಪ್ರಮುಖ 5 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತು. ನಾಯಕಿ ಮಿಥಾಲಿ ರಾಜ್(9), ಹರ್ಮನ್‌ಪ್ರೀತ್ ಕೌರ್(5), ರಿಚಾ ಘೋಷ್(1) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು.

ಸ್ನೆಹ್ ರಾಣಾ-ಪೂಜಾ ವಸ್ತ್ರಾಕರ್ ಜತೆಯಾಟದ ಝಲಕ್: ಒಂದು ಹಂತದಲ್ಲಿ ಕೇವಲ 114 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದ್ದ ಭಾರತ ತಂಡಕ್ಕೆ 7ನೇ ವಿಕೆಟ್‌ಗೆ ಪೂಜಾ ವಸ್ತ್ರಾಕರ್ ಹಾಗೂ ಸ್ನೆಹ್ ರಾಣಾ ಜೋಡಿ ಕೇವಲ 97 ಎಸೆತಗಳನ್ನು ಎದುರಿಸಿ 122 ರನ್‌ಗಳ ಜತೆಯಾಟ ನಿಭಾಯಿಸಿತು. ಚೊಚ್ಚಲ ಏಕದಿನ ವಿಶ್ವಕಪ್‌ ಆಡುತ್ತಿರುವ ಪೂಜಾ ವಸ್ತ್ರಾಕರ್ ಹಾಗೂ ಸ್ನೆಹ್ ರಾಣಾ ಮೊದಲ ಪಂದ್ಯದಲ್ಲೇ ಅಮೋಘ ಅರ್ಧಶತಕ ಬಾರಿಸಿ ಮಿಂಚಿದರು. ಪೂಜಾ ವಸ್ತ್ರಾಕರ್ 59 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 67 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ಸ್ನೆಹ್ ರಾಣಾ 48 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ ಅಜೇಯ 53 ರನ್‌ ಬಾರಿಸಿ ತಂಡದ ಮೊತ್ತವನ್ನು 240ರ ಗಡಿ ದಾಟಿಸಿದರು.