* ರಣಜಿ ಟ್ರೋಫಿ ಟೂರ್ನಿಯಲ್ಲಿಂದು ಕರ್ನಾಟಕ-ಪುದುಚೆರಿ ಮುಖಾಮುಖಿ* ಕ್ವಾರ್ಟರ್ ಫೈನಲ್ ಪ್ರವೇಶಿಸುವ ಹೊಸ್ತಿಲಲ್ಲಿದೆ ಮನೀಶ್ ಪಾಂಡೆ ಪಡೆ* ಲೀಗ್ ಹಂತದ ಕೊನೆಯ ಪಂದ್ಯಕ್ಕೆ ವರುಣನ ಭೀತಿ
ಚೆನ್ನೈ(ಮಾ.03): 2022ರ ರಣಜಿ ಟ್ರೋಫಿಯಲ್ಲಿ (Ranji Trophy) ನೇರವಾಗಿ ಕ್ವಾರ್ಟರ್‌ಫೈನಲ್‌ಗೇರುವ ನಿರೀಕ್ಷೆಯಲ್ಲಿರುವ 8 ಬಾರಿ ಚಾಂಪಿಯನ್ ಕರ್ನಾಟಕ, ಎಲೈಟ್ ‘ಸಿ’ ಗುಂಪಿನ ಕೊನೆ ಪಂದ್ಯದಲ್ಲಿ ಪುದುಚೇರಿ ವಿರುದ್ಧ ಸೆಣಸಾಡಲಿದೆ. ರೈಲ್ವೇಸ್ ವಿರುದ್ಧ ಡ್ರಾದೊಂದಿಗೆ ಅಭಿಯಾನ ಆರಂಭಿಸಿದ್ದ ರಾಜ್ಯ ತಂಡ, 2ನೇ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ವಿರುದ್ಧ ಗೆದ್ದು ಕ್ವಾರ್ಟರ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತ್ತು. ಜಮ್ಮು-ಕಾಶ್ಮೀರದ ವಿರುದ್ಧ ಬೌಲಿಂಗ್ ಜೊತೆ ಬ್ಯಾಟಿಂಗ್‌ನಲ್ಲೂ ಸುಧಾರಿತ ಪ್ರದರ್ಶನ ತೋರಿದ ಮನೀಶ್ ಪಾಂಡೆ (Manish Pandey) ನೇತೃತ್ವದ ತಂಡ, ಲಯ ಮುಂದುವರಿಸುವ ವಿಶ್ವಾಸದಲ್ಲಿದೆ.
ಕಳೆದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 175 ಹಾಗೂ 2ನೇ ಇನ್ನಿಂಗ್ಸಲ್ಲಿ 71 ರನ್ ಸಿಡಿಸಿದ್ದ ಕರುಣ್ ನಾಯರ್ (Karun Nair) ಮತ್ತೊಂದು ದೊಡ್ಡ ಇನ್ನಿಂಗ್ಸ್ ಆಡುವ ನಿರೀಕ್ಷೆಯಲ್ಲಿದ್ದಾರೆ. ಆರ್.ಸಮರ್ಥ್ , ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ ಸಹ ಉತ್ತಮ ಪ್ರದರ್ಶನದ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಒಟ್ಟು 10 ವಿಕೆಟ್ ಕಿತ್ತಿದ್ದ ವೇಗಿ ಪ್ರಸಿದ್ಧ್ ಕೃಷ್ಣ ಮತ್ತೊಮ್ಮೆ ತಂಡದ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದು, ಯುವ ವೇಗಿ ವಿದ್ಯಾಧರ್ ಪಾಟೀಲ್ ಮೇಲೆ ತಂಡ ಭರವಸೆ ಇರಿಸಿದೆ.
ಕಳೆದ ಪಂದ್ಯದ ವೇಳೆ ಗಾಯಗೊಂಡಿದ್ದ ರೋನಿತ್ ಮೋರೆ ಈ ಪಂದ್ಯಕ್ಕೆ ಫಿಟ್ ಆಗಿರುವ ನಿರೀಕ್ಷೆ ಇದೆ. ಶ್ರೇಯಸ್ ಗೋಪಾಲ್ ತಮ್ಮ ಸ್ಪಿನ್ ಜಾದೂ ಪ್ರದರ್ಶಿಸಲು ಸಜ್ಜಾಗಿದ್ದಾರೆ. ಆಡಿರುವ ಎರಡು ಪಂದ್ಯಗಳಲ್ಲಿ ಒಂದನ್ನು ಸೋತು, ಮತ್ತೊಂದನ್ನು ಡ್ರಾ ಮಾಡಿಕೊಂಡಿರುವ ಪುದುಚೇರಿ ಈ ಪಂದ್ಯದಲ್ಲಿ ಸುಧಾರಿತ ಆಟವಾಡಲು ಎದುರು ನೋಡುತ್ತಿದೆ.
ಪಂದ್ಯಕ್ಕೆ ಮಳೆ ಅಡ್ಡಿ ಭೀತಿ
ಪಂದ್ಯದ 2ನೇ ದಿನ ಎಂದರೆ ಶುಕ್ರವಾರದಿಂದ ಚೆನ್ನೈನಲ್ಲಿ ಮಳೆಯಾಗುವ ಮುನ್ಸೂಚನೆ ಇದ್ದು, ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಒಂದೊಮ್ಮೆ ಮಳೆಯಿಂದಾಗಿ ಪಂದ್ಯದ ಮೊದಲ ಇನ್ನಿಂಗ್ಸ್ ಸಹ ಪೂರ್ಣಗೊಳ್ಳದಿದ್ದರೆ ಕರ್ನಾಟಕಕ್ಕೆ ಒಂದು ಅಂಕ ದೊರೆಯಲಿದೆ. ಕರ್ನಾಟಕ 2 ಪಂದ್ಯಗಳಿಂದ ಒಟ್ಟು 9 ಅಂಕ ಕಲೆಹಾಕಿ, ಎಲೈಟ್ ‘ಸಿ’ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿದೆ. ಗೆದ್ದರೆ ಇಲ್ಲವೇ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದರೆ ನೇರವಾಗಿ ಕ್ವಾರ್ಟರ್ ಫೈನಲ್‌ಗೇರಲಿದೆ. ಜಮ್ಮು-ಕಾಶ್ಮೀರ ಹಾಗೂ ರೈಲ್ವೇಸ್ ನಡುವಿನ ಪಂದ್ಯವೂ ಚೆನ್ನೈನಲ್ಲೇ ನಡೆಯಲಿರುವ ಕಾರಣ, ಆ ಪಂದ್ಯಕ್ಕೂ ಮಳೆ ಆಗಬಹುದು. ಜಮ್ಮು-ಕಾಶ್ಮೀರ 6 ಅಂಕ ಹೊಂದಿದ್ದು, ರೈಲ್ವೇಸ್ 4 ಅಂಕ ಪಡೆದಿದೆ. ಹೀಗಾಗಿ ಮಳೆಯಿಂದ ಪಂದ್ಯ ರದ್ದಾದರೂ ಕರ್ನಾಟಕಕ್ಕೇ ಲಾಭವಾಗಲಿದೆ.
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ಐಪಿಎಲ್‌ಗೆ ವಾಪಸ್ ಆಗ್ತಾರಾ ರೈನಾ ?
ಅಹಮದಾಬಾದ್: ಮೆಗಾ ಹರಾಜಿನಲ್ಲಿ (IPL Mega Auction) ಬಿಕರಿಯಾಗದೆ ಅಚ್ಚರಿ ಮೂಡಿಸಿದ್ದ ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ (Suresh Raina) ಮತ್ತೆ ಐಪಿಎಲ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ‘ಮಿಸ್ಟರ್ ಐಪಿಎಲ್’ ಖ್ಯಾತಿಯ ರೈನಾ, ಗುಜರಾತ್ ಟೈಟಾನ್ಸ್ ತಂಡವನ್ನು ಸೇರಬಹುದು ಎನ್ನುವ ಚರ್ಚೆ ಸಾಮಾಜಿಕ ತಾಣಗಳಲ್ಲಿ ಶುರುವಾಗಿದೆ.
BCCI Central Contracts: ರಹಾನೆ, ಪೂಜಾರ, ಸಾಹಗೆ ಹಿಂಬಡ್ತಿ
ಇಂಗ್ಲೆಂಡ್‌ನ ಜೇಸನ್ ರಾಯ್ (Jason Roy)) ಐಪಿಎಲ್‌ನಿಂದ ಹೊರಗುಳಿಯಲು ನಿರ್ಧರಿಸಿದ ಕಾರಣ ಅವರ ಬದಲಿಗೆ ರೈನಾ ತಂಡಕ್ಕೆ ಸೇರ್ಪಡೆಯಾಗಬಹುದು ಎನ್ನಲಾಗುತ್ತಿದೆ. 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಸುರೇಶ್ ರೈನಾ ಅವರನ್ನು ಐಪಿಎಲ್ ಮೆಗಾ ಹರಾಜಿನಲ್ಲಿ ಯಾವೊಂದು ಫ್ರಾಂಚೈಸಿಯು ಖರೀದಿಸುವ ಒಲವು ತೋರಿರಲಿಲ್ಲ. ಐಪಿಎಲ್‌ನಲ್ಲಿ ಇದುವರೆಗೂ ಒಟ್ಟು 205 ಪಂದ್ಯಗಳನ್ನಾಡಿರುವ ರೈನಾ 32.52ರ ಬ್ಯಾಟಿಂಗ್ ಸರಾಸರಿಯಲ್ಲಿ 5,528 ರನ್ ಬಾರಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 39 ಅರ್ಧಶತಕಗಳು ಸೇರಿವೆ. ಹೀಗಾಗಿ ಗುಜರಾತ್ ಟೈಟಾನ್ಸ್ ಪಾಲಿಗೆ ರೈನಾ ಉತ್ತಮ ಆಯ್ಕೆಯಾಗಬಲ್ಲರು.
