ರಣಜಿ ಟ್ರೋಫಿ: ಮುಂಬೈ ಎದುರು ಗೆದ್ದು ಬೀಗಿದ ಕರ್ನಾಟಕ
ಕರ್ನಾಟಕ ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಮುಂಬೈ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ರಣಜಿ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ಗೆಲುವು ಕಂಡ ತಂಡಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಮುಂಬೈ[ಜ.05]: ಸಾಂಘಿಕ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡವು ಮುಂಬೈ ವಿರುದ್ಧ 5 ವಿಕೆಟ್’ಗಳ ಭರ್ಜರಿ ಜಯ ದಾಖಲಿದೆ. ಇದರ ಜತೆಗೆ ರಣಜಿ ಟೂರ್ನಿಯಲ್ಲಿ 200ನೇ ಗೆಲುವು ದಾಖಲಿಸಿದೆ.
ಮುಂಬೈ ತಂಡವನ್ನು ಕೇವಲ 149 ರನ್’ಗಳಿಗೆ ನಿಯಂತ್ರಿಸಿ ಗೆಲ್ಲಲು 126 ರನ್’ಗಳ ಗುರಿ ಪಡೆದ ಕರ್ನಾಟಕ ಸ್ಫೋಟಕ ಆರಂಭ ಪಡೆಯಿತು. ಮೊದಲ ವಿಕೆಟ್’ಗೆ ಸಮರ್ಥ್ ಹಾಗೂ ದೇವದತ್ ಪಡಿಕ್ಕಲ್ ಜೋಡಿ 78 ರನ್’ಗಳ ಜತೆಯಾಟವಾಡಿದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಪಡಿಕ್ಕಲ್ 46 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 50 ರನ್ ಬಾರಿಸಿ ಶಶಾಂಕ್’ಗೆ ವಿಕೆಟ್ ಒಪ್ಪಿಸಿದರು. ಇನ್ನು ಮೊದಲ ಇನಿಂಗ್ಸ್’ನಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ರವಿಕುಮಾರ್ ಸಮರ್ಥ್ 34 ರನ್ ಬಾರಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಅಭಿಷೇಕ್ ರೆಡ್ದಿ[4], ಕರುಣ್ ನಾಯರ್[10] ಬೇಗ ವಿಕೆಟ್ ಒಪ್ಪಿಸಿದರಾದರೂ ತಂಡದ ಗೆಲುವಿಗೆ ಅಡ್ಡಿಯಾಗಲಿಲ್ಲ.
ರಣಜಿ ಟ್ರೋಫಿ: ಕರ್ನಾಟಕಕ್ಕೆ ಗೆಲ್ಲಲು 126 ರನ್ ಟಾರ್ಗೆಟ್
ದಾಖಲೆಯ ಗೆಲುವು: ಈ ಗೆಲುವಿನೊಂದಿಗೆ ರಣಜಿ ಟೂರ್ನಿಯಲ್ಲಿ ಕರ್ನಾಟಕ 200ನೇ ಗೆಲುವು ದಾಖಲಿಸಿತು. ಈ ಮೂಲಕ ರಣಜಿ ಕ್ರಿಕೆಟ್ ಇತಿಹಾಸದಲ್ಲಿ 200 ಗೆಲುವು ಕಂಡ ಎರಡನೇ ತಂಡ ಎನ್ನುವ ಗೌರವಕ್ಕೆ ಕರ್ನಾಟಕ ತಂಡ ಪಾತ್ರವಾಯಿತು. ಈ ಪಟ್ಟಿಯಲ್ಲಿ ಮುಂಬೈ ತಂಡ[245] ಮೊದಲ ಸ್ಥಾನದಲ್ಲಿದೆ. ಇನ್ನು ಅತಿಹೆಚ್ಚು ರಣಜಿ ಗೆಲುವು ಕಂಡ ತಂಡಗಳ ಪಟ್ಟಿಯಲ್ಲಿ 188 ಗೆಲುವುಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ತಮಿಳುನಾಡು[159] ನಾಲ್ಕನೇ ಸ್ಥಾನದಲ್ಲಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದ ಕರ್ನಾಟಕ ತಂಡವು ಮೊದಲ ಇನಿಂಗ್ಸ್’ನಲ್ಲಿ ಮುಂಬೈ ತಂಡವನ್ನು ಕೇವಲ 194 ರನ್’ಗಳಿಗೆ ನಿಯಂತ್ರಿಸಿತ್ತು. ಇದಕ್ಕುತ್ತರವಾಗಿ ಆರ್. ಸಮರ್ಥ್[86] ಹಾಗೂ ಶರತ್[46] ಬ್ಯಾಟಿಂಗ್ ನೆರವಿನಿಂದ 218 ರನ್ ಬಾರಿಸಿತು. ಈ ಮೂಲಕ 24 ರನ್’ಗಳ ಮುನ್ನಡೆ ಪಡೆಯಿತು. ಇನ್ನು ದ್ವಿತಿಯ ಇನಿಂಗ್ಸ್ ಆರಂಭಿಸಿದ ಮುಂಬೈ ತಂಡಕ್ಕೆ ರಾಜ್ಯದ ವೇಗಿಗಳು ಹೆಚ್ಚುಹೊತ್ತು ಕ್ರೀಸ್’ನಲ್ಲಿ ನೆಲೆಯೂರಲು ಬಿಡಲಿಲ್ಲ. ಪ್ರತೀಕ್ 4, ಮಿಥುನ್ 3 ಹಾಗೂ ಕೌಶಿಕ್ 2 ವಿಕೆಟ್ ಪಡೆಯುವ ಮೂಲಕ ಮುಂಬೈ ತಂಡವನ್ನು ಕೇವಲ 149 ರನ್’ಗಳಿಗೆ ನಿಯಂತ್ರಿಸಿದರು.
ಆಡಿದ 4 ಪಂದ್ಯಗಳಲ್ಲಿ ಕರ್ನಾಟಕ 2 ಗೆಲುವು ಹಾಗೂ 2 ಡ್ರಾನೊಂದಿಗೆ ಒಟ್ಟು 16 ಅಂಕ ಕಲೆಹಾಕಿದ್ದು, ಬಿ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಎರಡು ಇನಿಂಗ್ಸ್’ನಲ್ಲೂ ಸಮಯೋಚಿತ ಬ್ಯಾಟಿಂಗ್ ನಡೆಸಿದ ರವಿಕುಮಾರ್ ಸಮರ್ಥ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.
ಇನ್ನು ಕರ್ನಾಟಕ ತಂಡವು ಜನವರಿ 11ರಂದು ರಾಜ್’ಕೋಟ್’ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ.