* 2022ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕಕ್ಕೆ ಮೊದಲ ಗೆಲುವಿನ ಸಿಹಿ* ಜಮ್ಮು ಕಾಶ್ಮೀರ ಎದುರು ಭರ್ಜರಿ ಗೆಲುವು ಸಾಧಿಸಿದ ಮನೀಶ್ ಪಾಂಡೆ ಪಡೆ* ಎರಡೂ ಇನಿಂಗ್ಸ್‌ನಲ್ಲಿ ಮಿಂಚಿದ ಕರುಣ್ ನಾಯರ್‌ಗೆ ಪಂದ್ಯಶ್ರೇಷ್ಠ ಗೌರವ

ಚೆನ್ನೈ(ಫೆ.28): 2022ರ ರಣಜಿ ಟ್ರೋಫಿಯಲ್ಲಿ (Ranji Trophy) ಕರ್ನಾಟಕ ಮೊದಲ ಗೆಲುವು ಸಾಧಿಸಿದ್ದು, ನೇರವಾಗಿ ಕ್ವಾರ್ಟರ್‌ ಫೈನಲ್‌ಗೇರುವ ಆಸೆ ಜೀವಂತವಾಗಿರಿಸಿಕೊಂಡಿದೆ. ಭಾನುವಾರ ರಾಜ್ಯ ತಂಡ ಜಮ್ಮು-ಕಾಶ್ಮೀರ ವಿರುದ್ಧ 117 ರನ್‌ಗಳ ಜಯಗಳಿಸಿತು. ಇದರೊಂದಿಗೆ ಎಲೈಟ್‌ ‘ಸಿ’ ಗುಂಪಿನಲ್ಲಿ ಕರ್ನಾಟಕ ಕ್ರಿಕೆಟ್ ತಂಡವು (Karnataka Cricket Team) 9 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದೆ. 1 ಡ್ರಾ, 1 ಗೆಲುವಿನೊಂದಿಗೆ ಜಮ್ಮು-ಕಾಶ್ಮೀರ 6 ಅಂಕ ಪಡೆದು 2ನೇ ಸ್ಥಾನದಲ್ಲಿದೆ.

ಗೆಲ್ಲಲು 508 ರನ್‌ ಗುರಿ ಪಡೆದಿದ್ದ ಜಮ್ಮು-ಕಾಶ್ಮೀರ ಭಾನುವಾರ 390ಕ್ಕೆ ಆಲೌಟ್‌ ಆಯಿತು. ನಾಯಕ ಇಯಾನ್‌ ದೇವ್‌ ಚೌಹಾಣ್‌(110), ಅಬ್ದುಲ್‌ ಸಮದ್‌(70), ಪರ್ವೇಜ್‌ ರಸೂಲ್‌(46) ಹೋರಾಟ ಫಲ ನೀಡಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಪಡೆದಿದ್ದ ಪ್ರಸಿದ್ಧ್ ಕೃಷ್ಣ ದ್ವಿತೀಯ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ ಕಿತ್ತು ಗಮನಸೆಳೆದರು. ಇದಕ್ಕೂ ಮೊದಲು, ಮೊದಲ ಇನ್ನಿಂಗ್ಸ್‌ನಲ್ಲಿ 302 ರನ್‌ ಕಲೆ ಹಾಕಿದ್ದ ರಾಜ್ಯ ತಂಡ, ಜಮ್ಮು-ಕಾಶ್ಮೀರವನ್ನು ಕೇವಲ 93 ರನ್‌ಗೆ ನಿಯಂತ್ರಿಸಿತ್ತು. ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 298 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 175 ಹಾಗೂ 2ನೇ ಇನ್ನಿಂಗ್ಸಲ್ಲಿ ಔಟಾಗದೆ 71 ರನ್‌ ಸಿಡಿಸಿದ ಕರುಣ್‌ ನಾಯರ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

10 ವಿಕೆಟ್‌ ಪಡೆದ ಪ್ರಸಿದ್ಧ್: ವೆಸ್ಟ್ ಇಂಡೀಸ್ ವಿರುದ್ದದ ಸೀಮಿತ ಓವರ್‌ಗಳ ಸರಣಿಯಲ್ಲಿ ಟೀಂ ಇಂಡಿಯಾ ಪರ ಅಮೋಘ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಇದೀಗ, ರಣಜಿ ಟ್ರೋಫಿ ಟೂರ್ನಿ ಟೂರ್ನಿಯಲ್ಲಿ ಕರ್ನಾಟಕ ತಂಡಕ್ಕೆ ಆಸರೆಯಾಗಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಮಾರಕ ದಾಳಿ ನಡೆಸುವ ಮೂಲಕ ಕೇವಲ 35 ರನ್‌ ನೀಡಿ ಜಮ್ಮು-ಕಾಶ್ಮೀರ ತಂಡದ ಆರು ಬ್ಯಾಟರ್‌ಗಳನ್ನು ಪೆವಿಲಿಯನ್ನಿಗಟ್ಟಿ, ಎದುರಾಳಿ ತಂಡವನ್ನು ನೂರು ರನ್‌ಗಳೊಳಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಎರಡನೇ ಇನಿಂಗ್ಸ್‌ನಲ್ಲೂ ಪ್ರಮುಖ 4 ವಿಕೆಟ್ ಪಡೆಯುವ ಮೂಲಕ ರಾಜ್ಯ ತಂಡ ಗೆಲುವಿನ ಕೇಕೆ ಹಾಕುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದರು.

ಸ್ಕೋರ್‌: 
ಕರ್ನಾಟಕ 302 ಹಾಗೂ 298/3 ಡಿ.,
ಜಮ್ಮು-ಕಾಶ್ಮೀರ 93 ಹಾಗೂ 390/10
(ಇಯಾನ್‌ ದೇವ್‌ 110, ಸಮದ್‌ 70, ಪ್ರಸಿದ್ಧ್ ಕೃಷ್ಣ 4-59, ಶ್ರೇಯಸ್‌ 4-155)

ಮಾರ್ಚ್‌ 3 ರಿಂದ ಪುದುಚೇರಿ ಸವಾಲು

ರೈಲ್ವೇಸ್‌ ವಿರುದ್ಧ ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದ ಕರ್ನಾಟದ ಎಲೈಟ್‌ ‘ಸಿ’ ಗುಂಪಿನ ಅಂತಿಮ ಪಂದ್ಯವನ್ನು ಮಾರ್ಚ್‌ 3ರಿಂದ ಪುದುಚೇರಿ ವಿರುದ್ಧ ಆಡಲಿದೆ. ಪುದುಚೇರಿ 2 ಪಂದ್ಯಗಳಿಂದ ಕೇವಲ 1 ಅಂಕ ಗಳಿಸಿ, ಈಗಾಗಲೇ ನಾಕೌಟ್‌ ರೇಸ್‌ನಿಂದ ಹೊರಬಿದ್ದಿದೆ. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.

ವಿಶ್ವಕಪ್‌ ಅಭ್ಯಾಸ ಪಂದ್ಯ: ಭಾರತ ವನಿತೆಯರಿಗೆ ಜಯ

ರಂಗಿಯೋರಾ(ನ್ಯೂಜಿಲೆಂಡ್‌): ಭಾರತ ಮಹಿಳಾ ತಂಡ ಐಸಿಸಿ ಏಕದಿನ ವಿಶ್ವಕಪ್‌ನ ಅಭ್ಯಾಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಭಾರತ ಹರ್ಮನ್‌ಪ್ರೀತ್‌ ಕೌರ್‌ (114) ಶತಕದ ನೆರವಿನಿಂದ 9 ವಿಕೆಟ್‌ಗೆ 244 ರನ್‌ ಕಲೆ ಹಾಕಿತು. ಸುಲಭ ಗುರಿ ಬೆನ್ನತ್ತಿದ ದ.ಆಫ್ರಿಕಾ 7 ವಿಕೆಟ್‌ಗೆ 242 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ರಾಜೇಶ್ವರಿ ಗಾಯಕ್ವಾಡ್‌ 46 ರನ್‌ಗೆ 4 ವಿಕೆಟ್‌ ಕಿತ್ತರು. 

Sri Lanka Cricket Squad: ಭಾರತ ವಿರುದ್ಧ ಟೆಸ್ಟ್‌ ಸರಣಿಗೆ ಬಲಿಷ್ಠ ಶ್ರೀಲಂಕಾ ತಂಡ ಪ್ರಕಟ

ಪಂದ್ಯ ಮುಕ್ತಾಯಗೊಂಡಾಗ ಸ್ಕೋರ್‌ ಕಾರ್ಡ್‌ನಲ್ಲಿ ದ.ಆಫ್ರಿಕಾ 4 ವಿಕೆಟ್‌ಗಳಿಂದ ಗೆದ್ದಿತ್ತು ಎಂದು ತೋರಿಸಲಾಗಿತ್ತು. ಬಳಿಕ ಪರಿಷ್ಕೃತ ಸ್ಕೋರ್‌ ವಿವರ ಬಿಡುಗಡೆ ಮಾಡಿದ ಐಸಿಸಿ ಭಾರತ ಗೆದ್ದಿದೆ ಎಂದು ಪ್ರಕಟಿಸಿತು. ಪಂದ್ಯದ ಬಗ್ಗೆ ಐಸಿಸಿ ನಿರ್ಲಕ್ಷ್ಯಕ್ಕೆ ಸಾಮಾಜಿಕ ತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಭಾರತ ಮಾರ್ಚ್‌ 1ರಂದು ವಿಂಡೀಸ್‌ ವಿರುದ್ಧ 2ನೇ ಅಭ್ಯಾಸ ಪಂದ್ಯವಾಡಲಿದೆ.