ರಣಜಿ ಟ್ರೋಫಿ: ಬೌಲಿಂಗ್‌ನಲ್ಲಿ ಮಿಂಚಿ ಬ್ಯಾಟಿಂಗ್‌ನಲ್ಲಿ ಎಡವಿದ ಕರ್ನಾಟಕ

ಮುಂಬೈ ವಿರುದ್ಧದ ರಣಜಿ ಪಂದ್ಯದಲ್ಲಿ ಉತ್ತಮ ಆರಂಭ ಪಡೆದ ಹೊರತಾಗಿಯೂ ಕರ್ನಾಟಕ ಒತ್ತಡದಲ್ಲಿದೆ.  ವೇಗಿಗಳು ದಿಟ್ಟ ಹೋರಾಟ ನೀಡಿದರೆ, ಬ್ಯಾಟ್ಸ್‌ಮನ್‌ಗಳು ವಿಭಾಗ ಕೊಂಚ ನಿರಾಸೆ ಅನುಭವಿಸಿದರು. 
 

Ranji trophy 2020 Karnataka dominate against Mumbai day 1

ಮುಂಬೈ(ಡಿ.04): ವೇಗದ ಬೌಲರ್‌ಗಳ ಮಾರಕ ದಾಳಿಯ ನೆರವಿನಿಂದ ಮುಂಬೈ ವಿರುದ್ಧ ಇಲ್ಲಿ ಶುಕ್ರವಾರ ಆರಂಭಗೊಂಡ ‘ಬಿ’ ಗುಂಪಿನ ರಣಜಿ ಪಂದ್ಯದಲ್ಲಿ ಕರ್ನಾಟಕ, ಮೇಲುಗೈ ಸಾಧಿಸಿತು. ಟಾಸ್‌ ಗೆದ್ದು ಮೊದಲು ಬೌಲ್‌ ಮಾಡಲು ನಾಯಕ ಕರುಣ್‌ ನಾಯರ್‌ ತೆಗೆದುಕೊಂಡ ನಿರ್ಧಾರವನ್ನು ವೇಗಿಗಳು ಸಮರ್ಥಿಸಿಕೊಂಡರು. ಮುಂಬೈ ಕೇವಲ 194 ರನ್‌ಗಳಿಗೆ ಆಲೌಟ್‌ ಆಯಿತು. ಉತ್ತಮ ಆರಂಭದ ಹೊರತಾಗಿಯೂ ಕರ್ನಾಟಕ, ಮೊದಲ ದಿನದಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 79 ರನ್‌ ಗಳಿಸಿತು. ತಂಡ ಇನ್ನೂ 115 ರನ್‌ ಹಿನ್ನಡೆಯಲ್ಲಿದ್ದು, 2ನೇ ದಿನವಾದ ಶನಿವಾರ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸುವುದು ತಂಡದ ಮುಂದಿರುವ ಗುರಿಯಾಗಿದೆ.

ಇದನ್ನೂ ಓದಿ: ರಣಜಿಯಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ವೇಗಿ ವಿನಯ್ ಕುಮಾರ್

ಆರ್‌.ಸಮಥ್‌ರ್‍ ಹಾಗೂ ದೇವದತ್‌ ಪಡಿಕ್ಕಲ್‌ ಮೊದಲ ವಿಕೆಟ್‌ಗೆ 68 ರನ್‌ಗಳ ಜೊತೆಯಾಟವಾಡಿ ಉತ್ತಮ ಆರಂಭ ನೀಡಿದರು. ಆದರೆ 32 ರನ್‌ ಗಳಿಸಿ ಇನ್ನಿಂಗ್ಸ್‌ನ 20ನೇ ಓವರ್‌ನಲ್ಲಿ ದೇವದತ್‌ ಔಟಾದರು. ಅದೇ ಓವರಲ್ಲಿ ಅಭಿಷೇಕ್‌ ರೆಡ್ಡಿ (0) ಸಹ ವಿಕೆಟ್‌ ಕಳೆದುಕೊಂಡರು. ಒಂದೇ ಓವರಲ್ಲಿ 2 ವಿಕೆಟ್‌ ಕಿತ್ತ ಶಮ್ಸ್‌ ಮುಲಾನಿ ಮುಂಬೈ ಪುಟಿದೇಳಲು ನೆರವಾದರು.

ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ ರೋಹನ್‌ ಕದಂ 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದರು. ಆದರೆ ಅವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ದಿನದಾಟದ ಕೊನೆಯಲ್ಲಿ ರೋಹನ್‌ (04) ಔಟಾದರು. 40 ರನ್‌ ಗಳಿಸಿರುವ ಸಮಥ್‌ರ್‍ ಹಾಗೂ ಇನ್ನೂ ಖಾತೆ ತೆರೆಯದ ಕರುಣ್‌ ನಾಯರ್‌, 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

60ಕ್ಕೆ 6 ವಿಕೆಟ್‌: ಅಜಿಂಕ್ಯ ರಹಾನೆ, ಪೃಥ್ವಿ ಶಾರಂತಹ ಘಟಾನುಘಟಿಗಳಿದ್ದರೂ ಮುಂಬೈಗೆ ಯಾವುದೇ ಲಾಭವಾಗಲಿಲ್ಲ. ಪಂದ್ಯದ 2ನೇ ಓವರ್‌ನಲ್ಲೇ ಆದಿತ್ಯ ತರೆ (0) ಕೌಶಿಕ್‌ಗೆ ವಿಕೆಟ್‌ ನೀಡಿದರು. ರಹಾನೆ (07), ಸಿದ್ಧೇಶ್‌ ಲಾಡ್‌ (04) ಬೇಗನೆ ಕ್ರೀಸ್‌ ತೊರೆದರೆ, 29 ರನ್‌ ಗಳಿಸಿದ್ದ ಪೃಥ್ವಿಯನ್ನು ಮಿಥುನ್‌ ಬೌಲ್ಡ್‌ ಮಾಡಿದರು. ಸರ್ಫರಾಜ್‌ ಖಾನ್‌ (08), ಮುಲಾನಿ (0) ಹೆಚ್ಚಿನ ಕೊಡುಗೆ ನೀಡಲಿಲ್ಲ. 60 ರನ್‌ಗೆ ಮುಂಬೈ 6 ವಿಕೆಟ್‌ ಕಳೆದುಕೊಂಡಿತು.

ಸೂರ್ಯ ಏಕಾಂಗಿ ಹೋರಾಟ: ಭೋಜನ ವಿರಾಮದ ವೇಳೆಗೆ 6 ವಿಕೆಟ್‌ ನಷ್ಟಕ್ಕೆ 86 ರನ್‌ ಗಳಿಸಿ ಸಂಕಷ್ಟದಲ್ಲಿದ್ದ ಮುಂಬೈಗೆ ನಾಯಕ ಸೂರ್ಯ ಕುಮಾರ್‌ ಯಾದವ್‌ ಆಸರೆಯಾದರು. ಕರ್ನಾಟಕದ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಸೂರ್ಯಗೆ ಶಶಾಂಕ್‌(35) ನೆರವಾದರು. 94 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 77 ರನ್‌ ಗಳಿಸಿದ ಸೂರ್ಯ, ತಂಡ 200 ರನ್‌ ಸನಿಹಕ್ಕೆ ತಲುಪಲು ನೆರವಾದರು.

55.5 ಓವರ್‌ಗಳಲ್ಲಿ ಮುಂಬೈ ಆಲೌಟ್‌ ಆಯಿತು. ಕರ್ನಾಟಕದ ಪರ ವಿ.ಕೌಶಿಕ್‌ 3, ಅಭಿಮನ್ಯು ಮಿಥುನ್‌, ರೋನಿತ್‌ ಮೋರೆ ಹಾಗೂ ಪ್ರತೀಕ್‌ ಜೈನ್‌ ತಲಾ 1 ವಿಕೆಟ್‌ ಕಬಳಿಸಿದರು.

ಸ್ಕೋರ್‌: ಮುಂಬೈ 194/10 (ಸೂರ್ಯ 77, ಶಶಾಂಕ್‌ 35, ಕೌಶಿಕ್‌ 3-45, ಪ್ರತೀಕ್‌ 2-20, ಮಿಥುನ್‌ 2-48, ರೋನಿತ್‌ 2-47), ಕರ್ನಾಟಕ 79/3 (ಸಮಥ್‌ರ್‍ 40*, ದೇವದತ್‌ 32, ಮುಲಾನಿ 2-13)

ಪೃಥ್ವಿ ಶಾಗೆ ಗಾಯ
ಕ್ಷೇತ್ರೆರಕ್ಷಣೆ ವೇಳೆ ಭುಜದ ಗಾಯಕ್ಕೆ ತುತ್ತಾದ ಮುಂಬೈನ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಮೈದಾನ ತೊರೆದರು. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. 2ನೇ ಇನ್ನಿಂಗ್ಸ್‌ನಲ್ಲಿ ಅವರು ಬ್ಯಾಟ್‌ ಮಾಡುವುದು ಅನುಮಾನವೆನಿಸಿದೆ.

Latest Videos
Follow Us:
Download App:
  • android
  • ios