ರಣಜಿ ಟ್ರೋಫಿ: ಗೆಲುವಿಗಾಗಿ ಕರ್ನಾಟಕ ಹೋರಾಟ!
ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿರುವ ಕರ್ನಾಟಕ ತಂಡವು ಹಿಮಾಚಲ ಪ್ರದೇಶ ವಿರುದ್ಧ ಎರಡನೇ ಇನಿಂಗ್ಸ್‌ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಡಿ.28]: 2019-20ರ ರಣಜಿ ಟ್ರೋಫಿಯಲ್ಲಿ ಕರ್ನಾಟಕ ಮೊದಲ ಬಾರಿಗೆ ಹಿನ್ನಡೆ ಅನುಭವಿಸಿದೆ. ಮೈಸೂರಿನಲ್ಲಿ ನಡೆಯುತ್ತಿರುವ ಹಿಮಾಚಲ ಪ್ರದೇಶ ವಿರುದ್ಧದ ‘ಬಿ’ ಗುಂಪಿನ ಪಂದ್ಯದಲ್ಲಿ 114 ರನ್‌ಗಳ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿರುವ ರಾಜ್ಯ ತಂಡ, 2ನೇ ಇನ್ನಿಂಗ್ಸ್‌ನಲ್ಲಿ ಹೋರಾಟ ನಡೆಸುತ್ತಿದೆ. ಕೊನೆಯ ದಿನದಾಟದ ಊಟದ ವಿರಾಮದ ವೇಳೆಗೆ ಕರ್ನಾಟಕ ತಂಡವು 7 ವಿಕೆಟ್ ಕಳೆದುಕೊಂಡು 283 ರನ್ ಬಾರಿಸಿದ್ದು, ಒಟ್ಟಾರೆ 169 ರನ್’ಗಳ ಮುನ್ನಡೆ ಸಾಧಿಸಿದೆ.
ರಣಜಿ ಟ್ರೋಫಿ: ಕರ್ನಾಟಕ ತಂಡಕ್ಕೆ ಶಾಕ್ ನೀಡಿದ ಹಿಮಾಚಲ!
3ನೇ ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿ, 77 ರನ್‌ಗಳ ಮುನ್ನಡೆ ಸಾಧಿಸಿದ್ದ ಕರ್ನಾಟಕ, ಶನಿವಾರ ಪಂದ್ಯದ 4ನೇ ಹಾಗೂ ಅಂತಿಮ ದಿನದಲ್ಲೂ ಭರ್ಜರಿ ಬ್ಯಾಟಿಂಗ್ ನಡೆಸಿದೆ. ಒಂದೊಮ್ಮೆ ಪಂದ್ಯ ಡ್ರಾಗೊಂಡರೆ, ರಾಜ್ಯ ತಂಡಕ್ಕೆ ಕೇವಲ 1 ಅಂಕ ದೊರೆಯಲಿದೆ.
ನಾಲ್ಕನೇ ದಿನದಾಟದಲ್ಲಿ ನಾಯಕ ಕರುಣ್ ನಾಯರ್ 64 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ರಣಜಿ ಟೂರ್ನಿಯಲ್ಲಿ ಚೊಚ್ಚಲ ಶತಕದ ನಿರೀಕ್ಷೆಯಲ್ಲಿದ್ದ ದೇವದತ್ ಪಡಿಕ್ಕಲ್ ಕೇವಲ 1 ರನ್ ಅಂತರದಿಂದ ಶತಕವಂಚಿತರಾದರು. 201 ಎಸೆತಗಳಲ್ಲಿ 8 ಬೌಂಡರಿ ಸಹಿತ 99 ರನ್ ಬಾರಿಸಿ ವೈಭವ್ ಅರೋರ ಎಸೆತದಲ್ಲಿ ಎಲ್ ಬಿ ಬಲೆಗೆ ಬಿದ್ದರು. ಇದೀಗ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಬಿ.ಆರ್ ಶರತ್[39] ಹಾಗೂ ಅಭಿಮನ್ಯು ಮಿಥುನ್[17] ರನ್ ಬಾರಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.