ರಾಜ್‌ಕೋಟ್‌(ಮಾ.12): ರಣಜಿ ಟ್ರೋಫಿ ಫೈನಲ್‌ ಪಂದ್ಯದ ಮೇಲೆ ಸೌರಾಷ್ಟ್ರ ಹಿಡಿತ ಉಳಿಸಿಕೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 425 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿದ ಸೌರಾಷ್ಟ್ರ, 3ನೇ ದಿನದಂತ್ಯಕ್ಕೆ ಬಂಗಾಳವನ್ನು 3 ವಿಕೆಟ್‌ಗೆ 134 ರನ್‌ಗಳಿಗೆ ನಿಯಂತ್ರಿಸಿದೆ. ಪಿಚ್‌ ಗುಣಮಟ್ಟಕ್ಷೀಣಿಸುತ್ತಿದ್ದು, 4ನೇ ಹಾಗೂ 5ನೇ ದಿನ ಬ್ಯಾಟ್‌ ಮಾಡುವುದು ಕಷ್ಟಎನಿಸಿದೆ. ಇನ್ನೂ 291 ರನ್‌ಗಳ ಹಿನ್ನಡೆಯಲ್ಲಿರುವ ಬಂಗಾಳ, ಮೊದಲ ಇನ್ನಿಂಗ್ಸ್‌ ಮುನ್ನಡೆ ಬಿಟ್ಟುಕೊಡುವ ಭೀತಿಗೆ ಸಿಲುಕಿದೆ.

ರಣಜಿ ಫೈನಲ್‌: ಸೌರಾಷ್ಟ್ರಕ್ಕೆ ಅರ್ಪಿತ್‌ ಶತಕದಾಸರೆ

384ಕ್ಕೆ 8 ವಿಕೆಟ್‌ಗಳಿಂದ 3ನೇ ದಿನದಾಟವನ್ನು ಮುಂದುವರಿಸಿದ ಸೌರಾಷ್ಟ್ರ, ಒಂದು ಗಂಟೆ 10 ನಿಮಿಷಗಳ ಕಾಲ ಬ್ಯಾಟಿಂಗ್‌ ನಡೆಸಿ ಉಪಯಕ್ತ 41 ರನ್‌ಗಳನ್ನು ಕಲೆಹಾಕಿತು. ಕೊನೆ ವಿಕೆಟ್‌ಗೆ ಧರ್ಮೇಂದ್ರ ಜಡೇಜಾ ಹಾಗೂ ನಾಯಕ ಜಯದೇವ್‌ ಉನಾದ್ಕತ್‌ 38 ರನ್‌ಗಳ ಜೊತೆಯಾಟವಾಡಿದರು.

ಮೊದಲ ಇನ್ನಿಂಗ್ಸ್‌ ಆರಂಭಿಸಿದ ಬಂಗಾಳ ಭೋಜನ ವಿರಾಮದ ವೇಳೆಗೆ 35 ರನ್‌ಗೆ 2 ವಿಕೆಟ್‌ ಕಳೆದುಕೊಂಡಿತ್ತು. 2ನೇ ಅವಧಿಯಲ್ಲಿ ಜೊತೆಯಾದ ಸುದೀಪ್‌ ಚಟರ್ಜಿ ಹಾಗೂ ಮನೋಜ್‌ ತಿವಾರಿ, 226 ಎಸೆತಗಳನ್ನು ಎದುರಿಸಿ 89 ರನ್‌ಗಳ ಜೊತೆಯಾಟವಾಡಿದರು. 36 ರನ್‌ ಗಳಿಸಿ ತಿವಾರಿ ಔಟಾದ ಕಾರಣ, ದಿನದಾಟ ಮುಕ್ತಾಯಗೊಂಡಾಗ ಸುದೀಪ್‌ (47) ಜತೆ ವೃದ್ಧಿಮಾನ್‌ ಸಾಹ (04) ಕ್ರೀಸ್‌ನಲ್ಲಿದ್ದರು. 4ನೇ ದಿನವಾದ ಗುರುವಾರ ಇವರಿಬ್ಬರ ಜೊತೆಯಾಟ ಬಂಗಾಳದ ಪಾಲಿಗೆ ನಿರ್ಣಾಯಕವೆನಿಸಲಿದೆ.

ಸ್ಕೋರ್‌:

ಸೌರಾಷ್ಟ್ರ 425,

ಬಂಗಾಳ 134/3

(ಸುದೀಪ್‌ 47*, ತಿವಾರಿ 35, ಪ್ರೇರಕ್‌ 1-7)

* ಮೂರನೇ ದಿನದಾಟದಂತ್ಯಕ್ಕೆ.